ಕರ್ನಾಟಕ ಸುದ್ದಿ

ನಾನು ಮುಖ್ಯಮಂತ್ರಿ ಸ್ಪರ್ಧಿ ಅಲ್ಲ, ವರಿಷ್ಠರ ನಿರ್ಧಾರಕ್ಕೆ ಬದ್ಧ: ಲಕ್ಷ್ಮಣ ಸವದಿ

Posted By: Sirajuddin Bangar

Source: NS18

ಬೆಂಗಳೂರು(ಜುಲೈ 29): ಡಿಸಿಎಂ ಲಕ್ಷ್ಮಣ ಸವದಿ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ನಂತರ ರಾಜ್ಯ ರಾಜಕೀಯ ವಲಯದಲ್ಲಿ ಗುಸು ಗುಸು ಸುದ್ದಿ ಆಗುತ್ತಲೇ ಇದೆ. ಸವದಿ ಅವರು ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ, ಸವದಿ ಅವರು ಈ ಸುದ್ದಿಗಳನ್ನ ಅಲ್ಲಗಳೆದಿದ್ದಾರೆ. ಇಂಥ ಸುದ್ದಿಗಳಿಗೆ ಮಣೆ ಹಾಕುವ ಮಾಧ್ಯಮಗಳನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ವಸ್ತುನಿಷ್ಠ ಸುದ್ದಿಗಳನ್ನ ಹಾಕಬೇಕೆಂದು ಮಾಧ್ಯಮಗಳಿಗೆ ತಿಳಿಹೇಳಿರುವ  ಸವದಿ ತಾನು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಸಿಎಂ ಅವರ ಸ್ವಕ್ಷೇತ್ರ ಅಥಣಿಯ ಜನರೇ ಸೋಷಿಯಲ್ ಮೀಡಿಯಾದಲ್ಲಿ ಸವದಿ ಮುಂದಿನ ಸಿಎಂ ಎಂಬಂತೆ ಬಿಂಬಿಸಿ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಇರಿಸುಮುರುಸುಗೊಂಡಿರುವ ಲಕ್ಷ್ಮಣ ಸವದಿ ಇಂದು ಸರಣಿ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕ್ಷೇತ್ರದ ಜನತೆ ಪೋಸ್ಟ್​ಗಳನ್ನು ಹಾಕಿದ್ದಾರೆ ಎನ್ನುತ್ತಾ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬೇಡಿ. ಕೋವಿಡ್ ಸಮಸ್ಯೆ ಎದುರಿಸಿ ಒಂದು ವರ್ಷ ಉತ್ತಮ ಆಡಳಿತ ನೀಡಿರುವ ನಾವೆಲ್ಲರೂ ಪಕ್ಷಕ್ಕೆ ನಿಷ್ಟರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು ಎಂದಿದ್ದಾರೆ.

ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಪ್ರಚಾರ ಬೇಡ. ದೆಹಲಿಯಲ್ಲಿ ವರಿಷ್ಠರೊಂದಿಗಿನ ಭೇಟಿ ಪೂರ್ವನಿರ್ಧಾರಿತವಾಗಿದ್ದ ಕಾರ್ಯಕ್ರಮ. ಅದರ ಬಗ್ಗೆ ಕಲ್ಪಿತ ವರದಿ ದಯವಿಟ್ಟು ಬೇಡ ಎಂದು ಮಾಧ್ಯಮಗಳಿಗೆ ಅವರು ಮನವಿ ಮಾಡಿದ್ದಾರೆ. ಹಾಗೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಪೋಸ್ಟ್​ಗಳನ್ನ ಹಾಕದಿರಿ ಎಂದು ತಮ್ಮ ಕ್ಷೇತ್ರದ ಜನರಿಗೂ ಅವರು ಕೋರಿಕೆ ಮಾಡಿದ್ದಾರೆ.

ರಾಜಕೀಯ ವಿಪ್ಲವಗಳ ಬಗ್ಗೆ ಮಾಧ್ಯಮಗಳು ಅಪ್ರಬುದ್ಧ ವಿಶ್ಲೇಷಣೆಯಲ್ಲಿ ತೊಡಗುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿಕರ. ನಮ್ಮ ಲಕ್ಷ್ಯ ಆರೋಗ್ಯ ಕ್ರಾಂತಿಯ ಕಡೆಗೆ ಇರಬೇಕಾದ ಹೊತ್ತಿದು. ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಹುಬೇಗ ಒದಗಿರುವ ಮಹಾಮಾರಿಯ ಸಂಕಟದಿಂದ ಹೊರಬರಬೇಕಾಗಿರುವ ಸಮಯ ಇದು. ಮಾಧ್ಯಮಮಿತ್ರ ಆದ್ಯತೆಯೂ ಅದೇ ಆಗಿರಲಿ ಅಥಣಿ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಸವದಿ ಟ್ವೀಟ್ ಮಾಡಿದ್ದಾರೆ.

ಅಥಣಿ ಕ್ಷೇತ್ರದ ಕೆಲ ಜನರು ಸೋಷಿಯಲ್ ಮೀಡಿಯಾದಲ್ಲಿ ಲಕ್ಷ್ಮಣ ಸವದಿ ಸಿಎಂ ಆಗಲು ಕ್ಷಣಗಣನೆ ಎಂಬಂತಹ ರೀತಿ ಬಿಂಬಿಸಿ ಹಾಕಿ ಪೋಸ್ಟ್​ಗಳಿಗೆ ತೀವ್ರ ರಾಜಕೀಯ ಪ್ರತಿಕ್ರಿಯೆಗಳೂ ಬಂದವು. ಈ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸವದಿಗೆ ಅದೃಷ್ಟವಿದ್ದರೆ ಸಿಎಂ ಆಗಲಿ ಬಿಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದು ಪೂರ್ವನಿಯೋಜಿತ ಕಾರ್ಯಕ್ರಮದ ನಿಮಿತ್ತ ಎಂದು ಸವದಿ ಸ್ಪಷ್ಟನೆ ನೀಡಿದರೂ ಆ ಬೆಳವಣಿಗೆಯಂತೂ ಬಿಜೆಪಿ ವಲಯದಲ್ಲಿ ಸಾಕಷ್ಟು ಕುತೂಹಲಗಳನ್ನ ಹುಟ್ಟುಹಾಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಮೈತ್ರಿ ಸರ್ಕಾರ ಪತನಗೊಂಡು ಬಿಎಸ್​ವೈ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದಾಗ ಎಲ್ಲರಿಗೂ ಆಘಾತಕಾರಿ ಎನಿಸುವಂತೆ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಲಾಯಿತು. ಸವದಿಗೆ ಉಪಮುಖ್ಯಮಂತ್ರಿ ಪಟ್ಟ ದಕ್ಕಲು ನೇರ ಹೈಕಮಾಂಡ್ ಪಾತ್ರ ಇತ್ತು. ಈ ಹಿನ್ನೆಲೆಯಲ್ಲಿ ವರಿಷ್ಠರೊಂದಿಗೆ ಈಗ ಸವದಿ ಅವರೊಬ್ಬರೇ ಹೋಗಿ ಭೇಟಿ ಮಾಡಿ ಮಾತನಾಡಿರುವುದು ಸಹಜವಾಗಿಯೇ ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close