ಲೇಖನ

ರೋಗ “ಒಂದು”, ಅನುಮಾನಗಳ ವಾದ “ಎರಡು”

ಲೇಖನ : ವಿಜಯಕುಮಾರ್. ಎ.ಸರೋದೆ ಪತ್ರಕರ್ತರು ಸಿರವಾರ

ಇತ್ತೀಚೆಗೆ ಅನೇಕ ರಾಷ್ಟ್ರಗಳ ವೈದ್ಯ ವಿಜ್ಞಾನಿಗಳಿಂದ Covid-19 ವೈರಾಣು ದುರ್ಬಲವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಅದಕ್ಕೆ ಕಾರಣ ಸೋಂಕಿನಿಂದ ಮುಕ್ತರಾಗುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವುದು, ಬಹುತೇಕ ಪ್ರಕರಣಗಳಲ್ಲಿ ರೋಗಲಕ್ಷಣಗಳೇ ಇಲ್ಲದಿರುವುದು ಹಾಗೂ ಮೊದಲಿಗಿಂತಲೂ ಸಾವನ್ನಪ್ಪುತ್ತಿರುವವ ಸಂಖ್ಯೆ ಕಡಿಮೆಯಾಗುತ್ತಿರುವುದು. ಇದೆಲ್ಲಾ ಗಮನಿಸಿದಾಗ ಸೋಂಕು ಎಂದಿನಂತೆ ಸಾಮಾನ್ಯವಾಗಿ ಹರಡುತ್ತಿದ್ದರೂ, ಅದು ಮೊದಲಿಗಿದ್ದಂತೆ ಹೆಚ್ಚೇನೂ ಪರಿಣಾಮ ಬೀರುತ್ತಿಲ್ಲ ಅನ್ನುವ ಅನುಮಾನ ಸಹಜವಾಗಿ ಮೂಡುತ್ತದೆ. ಹಾಗಾಗಿ ಲಸಿಕೆ ಬಳಕೆಗೆ ಬರುವುದಕ್ಕೆ ಮುಂಚೆಯೇ, ವೈರಾಣ ಇನ್ನಷ್ಟು ದುರ್ಬಲವಾಗಿ, ತನ್ನ ಪರಿಣಾಮ ಶಕ್ತಿಯನ್ನು ಇನ್ನಷ್ಟು ಕಳೆದುಕೊಳ್ಳಲಿದೆ ಅನ್ನೋದು ಅನೇಕ ಸಂಶೋಧಕರ ಅನಿಸಿಕೆ.


ಈ ಎಲ್ಲಾ ಅಂಶಗಳನ್ನು ಒಂದೊಂದಾಗಿ ಸೂಕ್ಷ್ಮವಾಗಿ ಗಮನಿಸಿದಾಗ Covid-19 ಹರಡುವಿಕೆಗೆ(ಹುಟ್ಟು ಮತ್ತು ವಿಶ್ವಮಟ್ಟದಲ್ಲಿನ ಹರಡುವೆಕೆ) ಸಂಬಂಧಿಸಿದಂತೆ ಒಂದಷ್ಟು ಅನುಮಾನಗಳು ಯಾರಿಗಾದರೂ ಮೂಡದೇ ಇರದು. ಈ ಬಗ್ಗೆ ಒಂದಷ್ಟು ವಾದಗಳೂ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೆಲ ಅಭಿಪ್ರಾಯ ಒಳಗೊಂಡಂತೆ ಮೇಲೆದ್ದಿರುವ 2 ಮುಖ್ಯ ವಾದಗಳನ್ನು ಮುಂದೆ ವಿವರಿಸು ಪ್ರಯತ್ನವನ್ನು ಮುಂದೆ ಮಾಡಿದ್ದೇನೆ.

ವಾದ 1: Covid-19 ವೈರಾಣು ಚೀನಾದ ವುಹಾನ್ನಲ್ಲಿರುವ ಸಂಶೋಧನಾ ಲ್ಯಾಬೋರೇಟರಿಯೊಂದರಿಂದ ಸೋರಿಕೆಯಾಗಿದ್ದು ನಿಜ ಎಂದು ವಿಶ್ವಕ್ಕೇ ಅನುಮಾನವಿದ್ದರೂ, ಅದನ್ನು ಚೀನಾ ಮಾತ್ರ ಇನ್ನೂ ಒಪ್ಪಿಲ್ಲ. ಸೋಂಕು ಪ್ರಾರಂಭವಾಗಿ ಸ್ಥಳೀಯವಾಗಿ ಒಂದು ಮಟ್ಟಿಗಿನ ಆತಂಕ ಸೃಷ್ಟಿಸಿದ್ದರೂ, ಅಲ್ಲಿನ ಸರ್ಕಾರ ಮಾತ್ರ ವಿಷಯವನ್ನು ಬೇಕಂತಲೇ ಮುಚ್ಚಿಟ್ಟಿತ್ತು. ವೈರಾಣು ಅಭಿವೃದ್ಧಿಪಡಿಸಿದ ಅಥವಾ ಸಂಗ್ರಹಿಸಿಟ್ಟ ಯಾವ ಲ್ಯಾಬೊರೇಟರಿಗಾದರೂ ಅದು ಎಂತಹ ವೈರಾಣು? ಬೀರುವ ಪರಿಣಾಮ ಏನು? ಅದರ ನಿಯಂತ್ರಣ ಹೇಗೆ? ಎಂಬೆಲ್ಲಾ ಪ್ರಾಥಮಿಕ ವಿಚಾರ ಗೊತ್ತಿರುತ್ತೆ. ಆದರೆ ಚೀನಾ ಮಾತ್ರ ಇದು ಲ್ಯಾಬೋರೇಟರಿಯಿಂದ ಸೋರಿಕೆಯಾಗಿದ್ದಲ್ಲ ಎಂದು ಹೇಳಿ, ವೈರಾಣುವಿಗೆ ಸಂಬಂಧಿಸಿದ ಕನಿಷ್ಠ ಮಾಹಿತಿಯನ್ನು ಹಂಚಿಕೊಳ್ಳದೇ ನುಣಿಚಿಕೊಂಡಿತು.

ಈ ವೈರಾಣು ಸ್ವಲ್ಪ ಮಟ್ಟಿಗೆ ಅಪಾಯಕಾರಿ ಅನ್ನುವುದು ನಿಜವಾಗಿದ್ದರೂ, ಬರುಬರುತ್ತಾ ಅದು ದುರ್ಬಲವಾಗುತ್ತೆ ಎಂಬ ಸತ್ಯ ಬಹುಶಃ ಚೀನಾಗೆ ಮೊದಲೇ ಗೊತ್ತಿತ್ತು! ಸದೇ ಕಾರಣಕ್ಕೆ ಸತ್ಯವನ್ನು ಬಾಯಿ ಬಿಡದೇ ಸೋಂಕು ಹರಡುವಿಕೆಗೆ ತಾನೇ ಅವಕಾಶ ಮಾಡಿಕೊಟ್ಟಿತು. ಇದರ ಹಿಂದಿನ ಕಾರಣ ಮಾತ್ರ ಪ್ರಬಲ ರಾಷ್ಟ್ರಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವುದು, ವಿಶ್ವವನ್ನು ಆತಂಕಕ್ಕೆ ದೂಡುವುದು, ಈ ನಡುವೆ ತನ್ನ ವ್ಯಾಪಾರ ಹೆಚ್ಚಿಸಿಕೊಳ್ಳುವುದು ಜೊತೆಗೆ ಸಂಕಷ್ಟದಲ್ಲಿ ಸಿಲುಕಿರುವ ನೆರೆಯ ರಾಷ್ಟ್ರಗಳ ಜೊತೆಗೆ ಗಡಿ ತಂಟೆ ತೆಗೆದು ಅವರ ಭೂಮಿ ಕಬಳಿಸುವುದು. ವಿಶ್ವವೇ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚಿಂತೆಯಲ್ಲಿದ್ದಾಗ, ಒಂದು ದೇಶ ಮಾತ್ರ ಗಡಿ ವಿಸ್ತಾರಣೆ, ಯುದ್ಧ ಹಾಗೂ ವ್ಯಾಪಾರದ ಬಗ್ಗೆ ಯೋಚಿಸುತ್ತೆ ಅಂದಮೇಲೆ, ಅದಕ್ಕೆ ರೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಗೊತ್ತಿದೆ ಅಂತಾಯಿತಲ್ಲವೇ. ವಿಶ್ವವನ್ನು ಆತಂಕಕ್ಕೆ ದೂಡಿ ತಾನು ಆರ್ಥಿಕವಾಗಿ ಪ್ರಭಲವಾಗುವ, ಇತರೆ ದೇಶಗಳನ್ನು ನಿಯಂತ್ರಿಸುವ ಹುನ್ನಾರ ಅದರದಾಗಿತ್ತು. ಆದರೆ ಭಾರತ ಸೇರಿದಂತೆ ಯಾವ ರಾಷ್ಟ್ರವೂ(ಹಾಂಕಾಂಗ್ ಹೊರತುಪಡಿಸಿ) ಅದರ ಈ ದುಷ್ಟ ಹುನ್ನಾರಕ್ಕೆ ಸೊಪ್ಪು ಹಾಕಲಿಲ್ಲ ಅನ್ನೋದು ಅಷ್ಟೇ ವಾಸ್ತವ ಸತ್ಯ. ಸೋಂಕು ಹರಡುವಿಕೆಯಿಂದ ಅಪಾಯವಿಲ್ಲ ಎಂಬ ಒಳಸತ್ಯ ಗೊತ್ತಿದ್ದಾಗ ಮಾತ್ರ, ಒಂದು ದೇಶ ಈ ಬಗೆಯ ಭಂಡತನ ತೋರಲು ಸಾಧ್ಯ. ರೋಗ ಉಲ್ಬಣಗೊಂಡು ತಾನು ಸೇರಿದಂತೆ ವಿಶ್ವವೇ ಅದರ ಕೆನ್ನಾಲಿಗೆಗೆ ಗುರಿಯಾಗಲಿದೆ ಎಂದು ಅದಕ್ಕೆ ಅನಿಸಿದ್ದರೆ, ಅದು ಖಂಡಿತ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಇದು ಒಂದು ಪ್ರಚೋದಿತ ಕೃತ್ಯ ಅನ್ನೋದು ಮೊದಲ ವಾದ.

ವಾದ 2: ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯ ವಿಚಾರಕ್ಕೆ ಬಂದಾಗ, ಇದು ಜಗತ್ತನ್ನೇ ಪ್ರಭಾವಿಸುವ ಒಂದು ಪ್ರತಿಷ್ಠೆ ಹಾಗೂ ಮೌಲ್ಯಯುತ ಸಂಸ್ಥೆ. Covid-19 ಹರಡುವಿಕೆ ಪ್ರಾರಂಭವಾದಾಗ ಎಲ್ಲಾ ದೇಶಗಳಂತೆ ಈ ಸಂಸ್ಥೆಗೂ ಗೊಂದಲ, ಅನುಮಾನ ಹಾಗೂ ಆತಂಕ ಆಗಿದ್ದು ಸತ್ಯ. ಅದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ಕುರಿತಂತೆ ಸಂಸ್ಥೆಯಿಂದಲೇ ಅನೇಕ ಆತಂಕಯುತ ಮಾತುಗಳು ಹೊರಬಿದ್ದಿವೆ. ಆದರೆ ಬರುಬರುತ್ತಾ ಅನೇಕ ಅಭಿಪ್ರಾಯಗಳು, ಅಧ್ಯಯನ ವರದಿಗಳು ಸಂಸ್ಥೆಯ ಕೈಸೇರಿ ರೋಗದ ಸತ್ಯಾಸತ್ಯತೆ ಹಾಗೂ ನಿರ್ಮೂಲನೆ ಬಗ್ಗೆ ಒಂದಷ್ಟು ಸ್ಪಷ್ಟತೆ ಸಿಕ್ಕಿರುತ್ತೆ, ಸಿಗಲೇಬೇಕು ಅನ್ನೋದು ಅನೇಕ ಸಂಶೋಧಕರು ಹಾಗೂ ವಿಜ್ಞಾನಿಗಳ ಅಭಿಪ್ರಾಯ. ಆದರೂ ಅದು ಉದ್ದೇಶಪೂರ್ವಕವಾಗಿ ಒಂದಷ್ಟು ಗೊಂದಲಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವಿಶ್ವವನ್ನು ಹಾಗೂ ಮಾಧ್ಯಮಗಳನ್ನು ಆತಂಕದಲ್ಲಿಯೇ ಮುಂದುವರೆಯುವಂತೆ ಮಾಡಿತು ಅನ್ನೋದು ಅವರ ವಾದ. ಇದರ ಹಿಂದಿನ ಕಾರಣ ಏನಿರಬಹುದು ಎಂದು ಆಲೋಚಿಸಹೊರಟಾಗ, ವಾಯುಮಾಲಿನ್ಯ ಸೇರಿದಂತೆ ಮನುಷ್ಯ ಜನ್ಯ ಮಾಲಿನ್ಯಗಳಿಂದ ವಿಶ್ವದ ಮಾಲಿನ್ಯ ಪ್ರಮಾಣ ವಿಪರೀತ ಹೆಚ್ಚಾಗಿ, ಇನ್ನೂ ಕೆಲ ವರ್ಷಗಳಲ್ಲಿ ಭೂಮಿ ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದೆ ಎಂಬ ಆತಂಕ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ವಿಜ್ಞಾನಿಗಳು, ಸಂಶೋಧಕರು ಹಾಗೂ ಪರಿಸರ ಪ್ರೇಮಿಗಳಲ್ಲಿ ಮನೆಮಾಡಿತ್ತು.

ಅದು ಹೀಗೇ ಮುಂದುವರಿದರೆ ಭೂಮಿಯ ಮೇಲೆ ಪ್ರಮುಖವಾಗಿ ಮನುಷ್ಯ ಸೇರಿದಂತೆ ಒಂದಷ್ಟು ಜೀವಸಂಕುಲ ನಾಶವಾಗುತ್ತೆ ಅನ್ನೋದು ಅಷ್ಟೇ ಕಹಿ ಸತ್ಯವಾಗಿತ್ತು. ಇದರ ಬಗ್ಗೆ ಕಾಳಜಿ ಹೊಂದಿದ್ದ ವಿಶ್ವಸಂಸ್ಥೆ, Covid-19 ನಿಂದ ಮನುಷ್ಯ ಕುಲವೇನೂ ನಾಶವಾಗುವುದಿಲ್ಲ, ಒಂದಷ್ಟು ಆರ್ಥಿಕ, ಸಾಮಾಜಿಕ ಸಮಸ್ಯೆಗಳಾಗುತ್ತೆ ಬಿಟ್ಟರೆ ಮಹಾ ಪ್ರಮಾದವೇನೂ ಆಗುವುದಿಲ್ಲ. ಲಾಕ್ಡೌನ್ನಿಂದಾಗಿ ಮಾಲಿನ್ಯ ಹಾಗೂ ಮನುಷ್ಯನ ಅನಗತ್ಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರುವುದರಿಂದ, ಇದು ಮುಂದುವರಿದರೆ ಮಾಲಿನ್ಯ ಇನ್ನಷ್ಟು ತಗ್ಗಿ ಜಾಗತಿಕ ತಾಪಮಾನ ಏರಿಕೆಯಂತಹ ಗಂಢಾತರದಿಂದ ಪಾರಾಗಬಹುದು ಎಂದು ಅದು ಯೋಚಿಸಿರಬಹುದು. ಹಾಗಾಗಿ ಉದ್ದೇಶಪೂರ್ವಕವಾಗಿ ಸ್ಪಷ್ಟತೆಯನ್ನು ಕೊಡದೇ, ಆತಂಕದಲ್ಲಿಯೇ ಮುಂದುವರೆಯುವಂತೆ ಮಾಡಿತು ಎಂಬುದು ಅನೇಕರ ವಾದ. ಅದೇನೇ ಇರಲಿ ಲಾಕ್ಡೌನ್ನಿಂದ ಮಾಲಿನ್ಯ ತಗ್ಗಿದ್ದು, ಹವಾಮಾನ ಬದಲಾವಣೆಗೆ ಕೊಂಚ ಬ್ರೇಕ್ ಬಿದ್ದದ್ದು, ಖುತುಮಾನಗಳು ಕೆಲ ಮಟ್ಟಿಗೆ ತಮ್ಮ ಮೂಲ ಸ್ಥಿತಿಗೆ ಮರಳಿದ್ದು ಅಷ್ಯ ಸತ್ಯ. ಹಾಗಾಗಿ ಇದನ್ನು ತಪ್ಪು ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಮನುಷ್ಯ ತನ್ನ ವಿಪರೀತ ಮಾಲಿನ್ಯಯುತ ಚಟುವಟಿಕೆಗಳಿಂದ, ಭೂಮಿಯನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದ್ದ ಅನ್ನೋದು ಯಾವೊಬ್ಬ ವಿಜ್ಞಾನಿ, ಪ್ರಜ್ಞಾವಂತ ನಾಗರಿಕ ಒಪ್ಪುವಂತಹ ಸಂಗತಿ.

ಆದರೆ ಅದೇನೇ ಇರಲಿ ಜನರಲ್ಲಿರುವ ಆತಂಕ ಹಾಗೂ ಸೋಂಕಿನ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಒಂದಷ್ಟು ರಾಜಕಾರಣಿಗಳು ಹಾಗೂ ಅಧಿಕಾರಿಗಳು, ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ(ಇಲಾಖಾ ಮಟ್ಟದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ) ತೊಡಗಿಕೊಂಡಿರುವುದು ಅರಗಿಸಿಕೊಳ್ಳಲಾಗದ ಕಹಿ ಸತ್ಯ.

  • ವಿಜಯ್. ಎ. ಸರೋದೆ, ಪತ್ರಕರ್ತ ಹಾಗೂ ಪತ್ರಿಕೋದ್ಯಮ ಪ್ರಾಧ್ಯಾಪಕ

.

Continue

Related Articles

Leave a Reply

Your email address will not be published. Required fields are marked *

Back to top button
Close
Close