ಸಿರವಾರ

ಸಿರವಾರ ಪಟ್ಟಣದ ಮಂಜುಶಾ ದ್ವೀತಿಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್

ಸಂಪಾದಕೀಯ ‌: ಸಿರಾಜುದ್ದೀನ್ ಬಂಗಾರ್ ಸಿರವಾರ

ಪಿಯುಸಿ ನಲ್ಲಿ 98.3% ಅಂಕಗಳ ಅದ್ವಿತೀಯ ಸಾಧನೆ ಮಾಡಿದ ಸಿರವಾರದ ಮಂಜುಶಾ ರಾಜ್ಯಕ್ಕೆ 8ನೇ ರ‍್ಯಾಂಕ್.!

ಸಿರವಾರ ಪಟ್ಟಣದ ಮಂಜುಶ್ರೀ ಬೇಕರಿ ಮಾಲೀಕರಾದ ದಿನೇಶ್ ಪುತ್ರನ್ ಅವರ ಮಗಳು ಮಂಜುಶಾ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 98.3 ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ.


10ನೇ ತರಗತಿವರೆಗೆ ಸಿರವಾರದ ವಿದ್ಯಾವಾಹಿನಿ ರೆಸಿಡೆನ್ಸಿಯಲ್ ಶಾಲೆಯಲ್ಲಿ (ವಿಆರ್‌ಎಸ್) ವಿದ್ಯಾಭ್ಯಾಸ ಮಾಡಿರುವ ಮಂಜುಶಾ ನಂತರ ಉಡುಪಿಯ ಕಾರ್ಕಳದ ನಿಟ್ಟೆ ಎಜುಕೇಷನ್ ಟ್ರಸ್ಟ್ ನ ಪದವಿಪೂರ್ವ ಕಾಲೇಜಿಲ್ಲಿ ಪಿಯುಸಿ ಅಭ್ಯಸಿಸಿ ಒಟ್ಟು 590 ಅಂಕ ಪಡೆದು ಆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪಿಯು ಕಾಮರ್ಸ್ ವಿಭಾಗದ ಬ್ಯುಸಿನೆಸ್ ಸ್ಟಡಿ, ಅಕೌಂಟೆನ್ಸ್, ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ನೂರಕ್ಕೆ ೧೦೦ ಅಂಕಗಳನ್ನು ಗಳಿಸಿದ್ದು ವಿಶೇಷವಾಗಿದೆ. ಇದರೊಂದಿಗೆ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಪಡೆದಿದ್ದು ಸಿರವಾರ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.


ಇನ್ನು ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಮಂಜುಶಾ, ಸಿರವಾರದಲ್ಲಿದ್ದಾಗ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನಡೆಸುತ್ತಿದ್ದ ನಿರಂತರ ಅಭ್ಯಾಸ, ಓದುವಿಕೆಯ ಪ್ರೇರಣೆ ಪಿಯುಸಿನಲ್ಲಿ ಕೂಡ ಮುಂದುವರೆಯುವಂತೆ ಮಾಡಿತು. ತಂದೆ-ತಾಯಿಯವರ ಸಹಕಾರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯ ಸಾಧನೆ ಕೇಳಿದ ಸಿರವಾರದ ಶಿಕ್ಷಣ ಪ್ರೇಮಿಗಳು, ಹಿತೈಷಿಗಳು ಊರಿಗೆ ಕೀರ್ತಿ ತಂದ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಸಿರವಾರದ ವಿಆರ್‌ಎಸ್ ಶಾಲೆಯಲ್ಲಿ 10 ನೇ ತರಗತಿವರೆಗೆ ಓದಿದ ಮಂಜುಶಾ ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದಿದ್ದಳು. ಶಾಲೆಯಲ್ಲಿ ನೀಡುತ್ತಿದ್ದ ಹೋಮ್ ವರ್ಕ್, ಪ್ರಾಜೆಕ್ಟ್ಗಳನ್ನು ತಪ್ಪದೇ ಮಾಡುತ್ತಿದ್ದು ಟೆಸ್ಟಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಳು. ಈಗ ಅವರ ಸಾಧನೆ ವೈಯಕ್ತಿಕವಾಗಿ ತುಂಬಾ ಸಂತಸ ತಂದಿದೆ. ನಮ್ಮ ಶಾಲೆಯ ವಿದ್ಯಾರ್ಥಿನಿ ಅಂತಾ ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ” ಎಂದು ವಿಆರ್‌ಎಸ್ ಶಾಲೆ ಅಧ್ಯಕ್ಷರು ಹಾಗೂ ಜಿಲ್ಲಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಟಿ.ಬಸವರಾಜ ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯ ತಂದೆ ದಿನೇಶ್ ಪುತ್ರನ್ “ನನ್ನ ಮಗಳು ಸಿರವಾರದಲ್ಲೇ ಅಭ್ಯಾಸ ಮಾಡಿದ್ದರಿಂದ ಪಿಯುಸಿ ನಲ್ಲಿ ಅಲ್ಲಿನ ವಾತಾವರಣದಲ್ಲಿ ಅಭ್ಯಾಸ ಹೇಗೆ ಮಾಡುತ್ತಾಳೇನೋ ಅಂತಾ ಅನಿಸುತಿತ್ತು. ಈಗ ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆದಿದ್ದು ಖುಷಿ ತಂದಿದೆ. ಶಿಕ್ಷಣದಲ್ಲಿ ಆಸಕ್ತಿ ಇದ್ದಿದ್ದರಿಂದ ಅವಳಿಗೆ ಓದಲು ಬೇಕಾದ ಎಲ್ಲಾ ಪ್ರೋತ್ಸಹ ಮಾಡುತ್ತಿದ್ದೇವು. ಮುಂದೆಯೂ ಓದಿಸಲು ಶ್ರಮಿಸುತ್ತೇನೆ” ಎಂದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close