
ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ
ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ಕನಕಪುರ ಮೂಲದ 70 ವರ್ಷದ ವೃದ್ಧರೊಬ್ಬರು, ಕೊರೋನಾ ಭೀತಿಯಿಂದ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ನಾಲ್ವರು ಕೊರೋನಾ ಸೋಂಕಿತರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.
ವೃದ್ಧರು ಶನಿವಾರ ಮಧ್ಯಾಹ್ನ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿ ಶೌಚಾಲಯಕ್ಕೆ ತೆರಳಿದ ವೇಳೆ ಟವೆಲ್ನಲ್ಲಿ ಶೌಚಾಲಯದ ಕಿಟಿಕಿ ಕಂಬಿಗೆ ನೇಣಿಗೆ ಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.
ಮೊನ್ನೆಯಷ್ಟೇ ಜಯದೇವದಿಂದ ಶಿಫ್ಟ್:
ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಿಬ್ಬಂದಿ ವಿವರಿಸಿದ್ದಾರೆ.
ವಿಕ್ಟೋರಿಯಾದಲ್ಲಿ ವೃದ್ಧ ಆತ್ಮಹತ್ಯೆ ಪ್ರಕರಣ ಸೇರಿದಂತೆ ಇದುವರೆಗೂ ಕೊರೋನಾ ಸೋಂಕಿಗೆ ಹೆದರಿ ಇದುವರೆಗೂ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತನೊಬ್ಬ ಮೊದಲ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲದೆ, ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ 50 ವರ್ಷದ ಕೆಎಸ್ಆರ್ಪಿ ಹೆಡ್ಕಾನ್ಸ್ಟೇಬಲ್ನ್ನು ಪೊಲೀಸ್ ಇಲಾಖೆಯ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.
ಸೋಂಕಿಗೆ ಹೆದರಿದ ಹೆಡ್ಕಾನ್ಸ್ಟೇಬಲ್ ವಾಹನದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದೆ ವೃದ್ಧೆಯೊಬ್ಬರು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವೃದ್ಧೆಯ ಸೊಸೆ ಮತ್ತು ಮೊಮ್ಮಗನಿಗೆ ಸೋಂಕು ತಗುಲಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.