
ವರದಿ: ಸಿರಾಜುದ್ದೀನ್ ಬಂಗಾರ
ರಾಯಚೂರು: ಕೋವಿಡ್-19 ವೈರಸ್ ಹರಡದಂತೆ ಶ್ರಮಿಸುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಸೋಂಕಿಗೆ ತುತ್ತಾಗುತ್ತಿದ್ದು, ಸಿಂಧನೂರು ತಾಲೂಕು ಆರೋಗ್ಯಾಧಿಕಾರಿಗೂ ಪಾಸಿಟಿವ್ ಇರುವುದು ದೃಡಪಟ್ಟಿದೆ.
ಶುಕ್ರವಾರ ಬಂದ ವರದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದ್ದು ಈಗ ಅವರನ್ನು ಐಸೊಲೇಶನ್ ಗೆ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳಿಂದ ಆರೋಗ್ಯಾಧಿಕಾರಿ ಸಾಕಷ್ಟು ಕಡೆ ಓಡಾಟ ಮಾಡಿದ್ದರು. ಸೋಂಕಿತರ ಸಂಪರ್ಕದಿಂದ ಪಾಸಿಟಿವ್ ಬಂದಿರಬಹುದು ಎನ್ನಲಾಗುತ್ತಿದೆ.
ಅಲ್ಲದೇ ಕೆಲ ದಿನಗಳಿಂದ ಆರೋಗ್ಯಾಧಿಕಾರಿ ನಿರಂತರ ಸಭೆಗಳಲ್ಲಿ ಭಾಗಿಯಾಗಿರುವುದು ಆತಂಕ ಮೂಡಿಸಿದೆ. ಈಚೆಗೆ ಟಿಎಲ್ ಬಿಸಿಗೆ ನೀರು ಹರಿಸುವ ಸಂಬಂಧ ಕೊಪ್ಪಳ ರಾಯಚೂರು ಜಿಲ್ಲಾಧಿಕಾರಿಗಳ ಸಭೆ ಸಿಂಧನೂರಿನಲ್ಲಿ ನಡೆದಿತ್ತು. ಆ ಸಭೆಯಲ್ಲೂ ಟಿಎಚ್ಒ ಭಾಗಿಯಾಗಿದ್ದರು.
ಟಿಎಚ್ ಒ ಪ್ರಾಥಮಿಕ, ದ್ವಿತೀಯ ಸಂಪರ್ಕದ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಚೇರಿಯನ್ನು ಸ್ಯಾನಿಟೈಜ್ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಕುಟುಂಬ ಹಾಗೂ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.