ರಾಯಚೂರು ಜಿಲ್ಲೆ ಸುದ್ದಿ

ಪ್ರತಿ ಟನ್‌ ಅಕ್ರಮ ಮರಳಿಗೆ 3 ಸಾವಿರ ರೂ. ದಂಡ: ಡಿಸಿ

ವರದಿ: ಸಿರಾಜುದ್ದೀನ್ ಬಂಗಾರ್

ರಾಯಚೂರು: ಹೊಸ ಮರಳು ನೀತಿಯ ಮಾರ್ಗಸೂಚಿ ಅನ್ವಯ ಅಕ್ರಮವಾಗಿ ಸಾಗಿಸುವ ಪ್ರತಿ ಟನ್‌ ಮರಳಿಗೂ 3 ಸಾವಿರ ರೂ. ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮರಳು ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ರಾಜಧನ ಪಡೆಯದೆ ಅಕ್ರಮವಾಗಿ ಮರಳು ಸಾಗಿಸುವುದು ದಂಡಾರ್ಹ. ನಿಯಮ ಉಲ್ಲಂಘಿಸಿ ಮರಳು ಸಾಗಿಸಿದಲ್ಲಿ ಕೂಡಲೇ ದಂಡ ವಿಧಿಸಬೇಕು. ಲಾರಿಗಳಲ್ಲಿ ಎಷ್ಟು ಟನ್‌ ಮರಳು ಇರುವುದೋ ಅದರಷ್ಟು ದಂಡ ವಿಧಿಸಬೇಕು ಎಂದರು.

ಅಕ್ರಮ ಮರಳು ದಂಧೆ ಹೆಚ್ಚಾಗುತ್ತಿರುವ ದೂರುಗಳು ಬರುತ್ತಿವೆ. 14 ಚಕ್ರವುಳ್ಳ ಲಾರಿಯಲ್ಲಿ 25 ಟನ್‌, 10 ಚಕ್ರವುಳ್ಳ ಲಾರಿಯಲ್ಲಿ 18 ಟನ್‌ ಮತ್ತು 12 ಚಕ್ರವುಳ್ಳ ವಾಹನಗಳಲ್ಲಿ 22 ಟನ್‌ ಮರಳು ಸಾಗಿಸುತ್ತಿರುವ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯಬೇಕು. ನಿಗದಿಗಿಂತ ಅಧಿಕ ಸಾಗಣೆ ಮಾಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದರು.

ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಮರಳು ಸಾಗಿಸುವಂತಿಲ್ಲ. ಇಲಾಖೆಯಿಂದ ಪರವಾನಗಿ ಪಡೆದಲ್ಲಿ ಬೆಳಗ್ಗೆಯಿಂದ ರಾತ್ರಿ 9ರವರೆಗೆ ಮಾತ್ರ ಮರಳು ಸಾಗಿಸಬೇಕು. ರಾಯಚೂರು ತಾಲೂಕಿನ ಕಾಡ್ಲೂರು, ಮಾನ್ವಿ ತಾಲೂಕಿನ ಚೀಕಲಪರ್ವಿ, ದೇವದುರ್ಗ ತಾಲೂಕಿನ ಕೃಷ್ಣ ನದಿ ಬಳಿಯಿರುವ ಮರಳು ಸಂಗ್ರಹ ಕೇಂದ್ರಗಳಿಂದ ಮರಳು ಸಾಗಿಸಲಾಗುತ್ತದೆ ಎಂದು ತಿಳಿಸಿದರು. ಅಕ್ರಮವಾಗಿ ಮರಳು ಸಂಗ್ರಹಿಸುವುದು ಕೂಡ ಅಕ್ರಮವಾಗಿದ್ದು, ಕ್ರಮ ಕೈಗೊಳ್ಳಲಾಗುವುದು. ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಮರಳು ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಿದರು.

ಎಸ್ಪಿ ಡಾ| ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಹರಿಬಾಬು, ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ, ರಾಜಶೇಖರ ಡಂಬಳ, ತಹಶೀಲ್ದಾರ್‌ ಡಾ| ಹಂಪಣ್ಣ, ಹಿರಿಯ ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಂ.ವಿಶ್ವನಾಥ ಸೇರಿ ಇತರರಿದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close