
Posted By: Sirajuddin Bangar
Source: NS18
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-13 ನಡೆಯಲಿದೆಯಾ/ಇಲ್ವಾ ಎಂಬುದಕ್ಕೆ ಶೀಘ್ರದಲ್ಲೇ ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಆಯೋಜನೆಗೆ ಬಿಸಿಸಿಐಗೆ ಹಾದಿ ಮತ್ತಷ್ಟು ಸುಗಮವಾಗುತ್ತಿದೆ.
ಈ ಮಾರ್ಚ್ 28 ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಕೊರೋನಾ ಕಾರಣದಿಂದ ಈ ಹಿಂದೆ ಮುಂದೂಡಲಾಗಿತ್ತು. ಇದಾದ ಬಳಿಕ ಪಂದ್ಯ ಆಯೋಜನೆಗೆ ಬಿಸಿಸಿಐಗೆ ಸಮಯದ ಅಭಾವ ತಲೆದೂರಿತ್ತು. ಏಕೆಂದರೆ ಅತ್ತ ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ಟಿ20 ವಿಶ್ವಕಪ್ ಕೂಡ ನಡೆಯಬೇಕಿತ್ತು.
ಆದರೆ ಕೆಲ ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಟಿ20 ವಿಶ್ವಕಪ್ನ್ನು ಮುಂದೂಡುವ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು. ಇದೇ ವೇಳೆ ಟಿ20 ವಿಶ್ವಕಪ್ ಮುಂದೂಡಲ್ಪಟ್ಟರೆ ಅದೇ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು.
ಈ ಬಗ್ಗೆ ಎರಡು ಬಾರಿ ಸಭೆ ನಡೆಸಿದ ಐಸಿಸಿ, ಟಿ20 ವಿಶ್ವಕಪ್ ಮುಂದೂಡಿಕೆ ಬಗ್ಗೆ ಮುಂದಿನ ತಿಂಗಳು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಈಗಾಗಲೇ ಪಂದ್ಯವನ್ನು ಆಯೋಜಿಸುವುದು ಅಸಾಧ್ಯ ಎಂದು ಹೇಳಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಚೇರ್ಮನ್ ಕಾರ್ಲ್ ಎಡ್ಡಿಂಗ್ಸ್, ಕೊರೋನಾ ಮಹಾಮಾರಿಯಿಂದಾಗಿ ಈ ವರ್ಷ ಟಿ20 ವಿಶ್ವಕಪ್ ಟೂರ್ನಿ ನಡೆಸುವುದು ಅಸಾಧ್ಯ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಅದರೊಂದಿಗೆ ಬಿಸಿಸಿಐಗೆ ಇದ್ದಂತಹ ಆತಂಕ ಕೂಡ ದೂರವಾಗಿದ್ದು, ಐಪಿಎಲ್ ಆಯೋಜನೆಗೆ ಅವಕಾಶ ಲಭಿಸಿದಂತಾಗಿದೆ.
ಐಸಿಸಿ ವೇಳಾಪಟ್ಟಿಯಂತೆ ಈ ವರ್ಷ ಅಕ್ಟೋಬರ್ 18ರಿಂದ ನವೆಂಬರ್15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಿಗದಿಯಾಗಿದೆ. ಆದರೆ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಚೇರ್ಮನ್ ಅವರೇ ಪಂದ್ಯ ಆಯೋಜಿಸುವುದು ಅಸಾಧ್ಯ ಎಂದಿದ್ದಾರೆ. ಇದರಿಂದಾಗಿ ಐಸಿಸಿ ಕೂಡ ಟಿ20 ವಿಶ್ವಕಪ್ ಅನ್ನು ಮುಂದೂಡುವುದು ಬಹುತೇಕ ಖಚಿತ.
ಇತ್ತ ಇದೇ ಅವಧಿಯೊಳಗೆ ರಂಗು ರಂಗಿನ ಕ್ರಿಕೆಟ್ ಟೂರ್ನಿಯನ್ನು ಮುಗಿಸಲು ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ. ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಸುವ ಬಗ್ಗೆ ಚರ್ಚಿಸಲಾಗಿದೆ.
ಅಂದರೆ ಈ ಬಾರಿ ಕೇವಲ 44 ದಿನಗಳಲ್ಲಿ ಒಟ್ಟಾರೆ 60 ಪಂದ್ಯಗಳನ್ನು ಆಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಒಟ್ಟು 5 ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಿದ್ದು, ಹಾಗೆಯೇ ಈ ಬಾರಿ ಹೋಮ್ ಗ್ರೌಂಡ್ ಮ್ಯಾಚ್ಗಳು ಇರುವುದಿಲ್ಲ. ಐದು ಮೈದಾನದಲ್ಲಿ ಒಟ್ಟಾರೆ ಪಂದ್ಯಗಳು ನಡೆಯಲಿದೆ.
ಸದ್ಯ ಸೆಪ್ಟೆಂಬರ್ 26ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಸುವ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಟಿ20 ವಿಶ್ವಕಪ್ ಮುಂದೂಡಿಕೆಯ ಅಧಿಕೃತ ಪ್ರಕಟಣೆ ಬಳಿಕ ಅಂತಿಮ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ.