
Posted by : Sirajuddin Bangar
Source: NS18
ಚೆನ್ನೈ: ಡಿಎಂಕೆ ಶಾಸಕ ಜಯರಾಮನ್ ಅನ್ಬಳಗನ್ ಕೋವಿಡ್-19ಗೆ ಬುಧವಾರ ಬಲಿಯಾಗಿದ್ದಾರೆ. 62 ವರ್ಷದ ಅನ್ಬಳಗನ್ ಅವರು ರೇಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊರೋನಾ ವೈರಸ್ ಸೋಂಕು ದೃಢಪಟ್ಟ ಬಳಿಕ ಜೂನ್ 2ರಂದು ಇವರು ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್-19ನಿಂದ ಬಳಲುತ್ತಿದ್ದ ಅನ್ಬಳಗನ್ ಅವರ ಆರೋಗ್ಯ ಇಂದು ಮುಂಜಾನೆ ಗಂಭೀರ ಸ್ಥಿತಿಗೆ ತಲುಪಿತ್ತು. ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆ ಮಾಡಲಾಯಿತ್ತಾದರೂ ಅವರು ಕೊನೆಯುಸಿರೆಳೆದರು ಎಂದು ಡಾ.ರೇಲಾ ಆಸ್ಪತ್ರೆ ತಿಳಿಸಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜೂನ್ 2ರಂದು ಆಸ್ಪತ್ರೆಗೆ ದಾಖಲಾದರು. ಬಳಿಕ ಕೋವಿಡ್-19 ಪರೀಕ್ಷೆ ನಡೆಸಿದಾಗ ಅವರಿಗೆ ಮಾರಕ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತು. ಸಹಜ ಉಸಿರಾಟದ ತೊಂದರೆ ಎದುರಾದಾಗ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಯಿತು ಎಂದು ಆಸ್ಪತ್ರೆ ಹೇಳಿದೆ.
ತಮಿಳುನಾಡು ಆರೋಗ್ಯ ಸಚಿವ ವಿಜಯಭಾಸ್ಕರ್ ಅವರು ಜೂನ್ 5ರಂದು ರೇಲಾ ಆಸ್ಪತ್ರೆಗೆ ತೆರಳಿ ಅನ್ಬಜಾಗನ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದರು. ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಜಯರಾಮನ್ ಅನ್ಬಳಗನ್ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2001ರಲ್ಲಿ ಮೊದಲಬಾರಿಗೆ ಥಿಯಾಗರಾಯ ನಗರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2011 ಮತ್ತು 2016ರಲ್ಲಿ ಚೆಪೌಕ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.