
Posted By : Sirajuddin Bangar
Source: NS18
ಕೋಲ್ಕತಾ(ಜೂನ್ 08): ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುವ ಗುರಿ ಇಟ್ಟಿರುವ ಬಿಜೆಪಿ ಆ ನಿಟ್ಟಿನಲ್ಲಿ ವೇದಿಕೆ ಸಜ್ಜುಗೊಳಿಸುತ್ತಿದೆ. ನಾಳೆ, ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳ ಜನರನ್ನುದ್ದೇಶಿಸಿ ಆನ್ಲೈನ್ನಲ್ಲೇ ಭಾಷಣ ಮಾಡಲಿದ್ದಾರೆ. ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರ್ಕಾರದ 9 ವೈಫಲ್ಯಗಳನ್ನ ಬಿಜೆಪಿ ಪಟ್ಟಿ ಮಾಡಿದೆ. ಈ ವೈಫಲ್ಯಗಳನ್ನಿಟ್ಟುಕೊಂಡು 9 ಅಂಶದ ಕಾರ್ಯತಂತ್ರವನ್ನು ರೂಪಿಸಿದೆ. ನಾಳೆಯ ಭಾಷಣದಲ್ಲಿ ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವೈಫಲ್ಯಗಳತ್ತ ಹೆಚ್ಚು ಗಮನ ಹರಿಸಿ ಹರಿಹಾಯುವ ನಿರೀಕ್ಷೆ ಇದೆ.
ನಾಳೆಯ ಅಮಿತ್ ಶಾ ಭಾಷಣದ ಮುಖ್ಯ ಅಂಶ ಆನ್ಲೈನ್ ವ್ಯವಸ್ಥೆ. ಬೂತ್ ಮಟ್ಟದಲ್ಲಿ ಇದಕ್ಕಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ. ಬಂಗಾಳದಲ್ಲಿರುವ 88 ಸಾವಿರ ಬೂತ್ಗಳ ಪೈಕಿ ಲೈವ್ ಸ್ಟ್ರೀಮಿಂಗ್ ಸಾಧ್ಯವಾಗಿರುವ 65 ಸಾವಿರ ಬೂತ್ಗಳನ್ನ ಗುರುತಿಸಲಾಗಿದೆ. ಆ ಬೂತ್ಗಳಲ್ಲಿ ಒಂದು ಫೋನ್ನಿಂದ ಕನಿಷ್ಠ 10 ಮಂದಿಯನ್ನಾದರೂ ಲೈವ್ ಸ್ಟ್ರೀಮಿಂಗ್ ವೀಕ್ಷಣೆಗೆ ಕನೆಕ್ಟ್ ಮಾಡಲು ನಿರ್ಧರಿಸಲಾಗಿದೆ. ಈ ರೀತಿಯಾಗಿ ಹೆಚ್ಚೆಚ್ಚು ಜನರು ಅಮಿತ್ ಶಾ ಭಾಷಣವನ್ನು ಮೊಬೈಲ್ನಲ್ಲಿ ನೇರ ವೀಕ್ಷಣೆ ಮಾಡಲು ಅನುವಾಗುವಂತೆ ಪಕ್ಷ ಕ್ರಮ ಕೈಗೊಳ್ಳುತ್ತಿದೆ. ಬಿಜೆಪಿಯ ಬಂಗಾಳ ಘಟಕದ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಅವರು ನಾಳೆಯ ಅಮಿತ್ ಶಾ ಭಾಷಣವನ್ನು 1 ಕೋಟಿ ಜನರು ವೀಕ್ಷಿಸುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮಾರ್ಚ್ 1ರ ನಂತರ ಮೊದಲ ಬಾರಿಗೆ ಬಂಗಾಳ ಜನತೆಯನ್ನುದ್ದೇಶಿಸಿ ಅಮಿತ್ ಶಾ ನಾಳೆ ಭಾಷಣ ಮಾಡುತ್ತಿದ್ದಾರೆ. ಇದೇ ವೇಳೆ, ಬಂಗಾಳದ ಬಿಜೆಪಿ ನಾಯಕರು ಮತ್ತು ಜನಪ್ರತಿನಿಧಿಗಳು ಮಮತಾ ಬ್ಯಾನರ್ಜಿ ಸರ್ಕಾರದ್ದು ದುರಾಡಳಿತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತೃಣಮೂಲ ಕಾಂಗ್ರೆಸ್ ಪಕ್ಷದ ರಾಜಕಾರಣ ಜನವಿರೋಧಿಯಾಗಿದೆ. ಅಂಪನ್ ಚಂಡಮಾರುತದಂಥ ವಿಕೋಪ ಪರಿಸ್ಥಿತಿಯಲ್ಲಿ ಕೇಂದ್ರದಿಂದ ಮಮತಾ ಬ್ಯಾನರ್ಜಿ ಕೇಳಿರುವ ಪರಿಹಾರ ಹಣದ ಪ್ರಮಾಣ ನೋಡಿದರೆ ಅವರು ಟಿಎಂಸಿ ಪಕ್ಷದ ಫಂಡ್ಗೂ ಸೇರಿಸಿ ಹಣ ಕೇಳಿದ್ದಾರೆನಿಸುತ್ತದೆ” ಎಂದು ಬಂಗಾಳದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಟೀಕಿಸಿದ್ದಾರೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಚುನಾವಣಾ ಸಮಾವೇಶ ನಡೆಸಲು ಅಸಾಧ್ಯವಿರುವುದರಿಂದ ಬಿಜೆಪಿ ದೇಶಾದ್ಯಂತ ವರ್ಚುವಲ್ ಸಭೆ, ಸಮಾವೇಶಗಳನ್ನ ಆಯೋಜಿಸುತ್ತಿದೆ. ಬಂಗಾಳದಲ್ಲಿ ಈ ಪ್ರಯೋಗಕ್ಕೆ ಜನಸ್ಪಂದನೆ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.