
–ಸಿರಾಜುದ್ದೀನ್ ಬಂಗಾರ್
ಇಂದಿನಿಂದ ಮಂದಿರ, ಮಸೀದಿ ಚರ್ಚ್ಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನ, ಗಾಣಗಾಪುರದ ದತ್ತ ಮಂದಿರ, ಘತ್ತರಗಿಯ ಬಾಗಮ್ಮ ದೇವಸ್ಥಾನ ಮತ್ತಿತರ ಮಂದಿರಗಳ ಪ್ರವೇಶಕ್ಕೆ ಭರದ ಸಿದ್ಧತೆಗಳು ನಡೆದಿವೆ. ಕಲಬುರ್ಗಿ ಆರಾಧ್ಯ ದೈವ ಶರಣಬಸವೇಶ್ವರರ ದರ್ಶನಕ್ಕೆ ಇಂದಿನಿಂದಲೇ ಅವಕಾಶ ಕಲ್ಪಿಸಲಾಗಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.
ದೇವಸ್ಥಾನದ ಎದುರಿಗೆ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಅಡಿಗೆ ಒಂದು ಚೌಕಾಕಾರದ ಮಾರ್ಕ್ ಮಾಡಲಾಗಿದೆ. ದೇವಸ್ಥಾನದ ಎಂಟ್ರೆನ್ಸ್ ಬಳಿಯೇ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಎರಡು ಬಾರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬೆಳಿಗ್ಗೆ 7 ರಿಂದ 10 ಗಂಟೆ ಹಾಗೂ ಸಂಜೆ 5 ರಿಂದ 8 ಗಂಟೆವರೆಗೆ ದರ್ಶನ. ನಿತ್ಯ ಎರಡು ಬಾರಿ, ಮೂರು ತಾಸುಗಳ ದರ್ಶನಕ್ಕೆ ವ್ಯವಸ್ಥೆಗೆ ತೀರ್ಮಾನಿಸಲಾಗಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪಾ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಗಾಣಗಾಪುರದ ದತ್ತ ಮಂದಿರ ಹಾಗೂ ಘತ್ತರಗಿಯ ಭಾಗಮ್ಮ ದೇವಸ್ಥಾನಗಳಲ್ಲಿಯೂ ಸಿದ್ಧತೆಗಳು ಪೂರ್ಣಗೊಂಡಿವೆ. ಎರಡೂ ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಸರ್ಕಾರದ ಮಾರ್ಗಸಚಿ ಅನ್ವಯ ದೇವಸ್ಥಾನದ ಪ್ರವೇಶಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸ್ಕ್ರೀನಿಂಗ್, ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ.
ಇನ್ನೊಂದೆಡೆ ಭಾವೈಕ್ಯತೆಯ ಕೇಂದ್ರವೆನಿಸಿದ ಕಲಬುರ್ಗಿಯ ಖ್ವಾಜಾ ಬಂದೇನವಾಜ್ ದರ್ಗಾದಲ್ಲಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಇಂದಿನಿಂದ ದರ್ಗಾ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಸಿಗುತ್ತಿಲ್ಲ. ಜೂನ್ 10 ರಂದು ಝೇಲಾ ಧಾರ್ಮಿಕ ಕಾರ್ಯಕ್ರಮ ಇರೋ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮ ಪೂರ್ಣಗೊಳಿಸಿ, ಜೂನ್ 11 ರಂದು ಸಭೆ ಸೇರುವ ಸಾಧ್ಯತೆಗಳಿವೆ.
ಕರ್ನಾಟಕವಲ್ಲದೆ, ತೆಲಂಗಾಣಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದಲೂ ಭಕ್ತರು ಆಗಮಿಸುವುದರಿಂದಾಗಿ ಅದಕ್ಕೆ ತಕ್ಕಂತೆ ಪೂರ್ವ ಸಿದ್ಧತೆ ಕೈಗೊಳ್ಳುವ ಅವಶ್ಯಕತೆಯಿದೆ. ಹೀಗಾಗಿ ಇದಕ್ಕಾಗಿ ಪ್ರತ್ಯೇಕ ಸಭೆ ನಡೆಸಿದ ನಂತರ ಎಂದಿನಂದಿ ದರ್ಗಾ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇದೇ ವೇಳೆ ಕಲಬುರ್ಗಿ ಜಿಲ್ಲೆಯ ಬಹುತೇಕ ಕಡೆ ಚರ್ಚ್ಗಳು ಸಹ ಬಾಗಿಲು ತೆರೆಯುತ್ತಿಲ್ಲ. ಸೇಂಟ್ ಮೇರಿ ಚರ್ಚ್ ಸೇರಿದಂತೆ ಕ್ರೈಸ್ತ ಧಾರ್ಮಿಕ ಕೇಂದ್ರಗಳಲ್ಲಿ ಯಾವುದೇ ಸಿದ್ಧತೆ ಮಾಡಿಕೊಳ್ಳಲಾಗಿಲ್ಲ. ಕ್ರೈಸ್ತರಿಗೆ ರವಿವಾರ ಪ್ರಮುಖ ದಿನವಾಗಿದ್ದು, ಅಂದೇ ಭಕ್ತರು ಚರ್ಚ್ ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.