
Posted By: Sirajuddin Bangar
Source: NS18
ನವದೆಹಲಿ(ಜೂ.07): ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವದಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಈಗಾಗಲೇ ಸ್ಪೇನ್ ದೇಶವನ್ನು ಹಿಂದಿಕ್ಕಿ, 5ನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 9,971 ಕೊರೋನಾ ಪ್ರಕರಣಗಳು ಪತ್ತೆಯಾದರೆ, 287 ಮಂದಿ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,46,628ಕ್ಕೆ ಏರಿಕೆಯಾಗಿದೆ.
ಈ ಪೈಕಿ 1,20,406 ಆಕ್ಟೀವ್ ಕೊರೋನಾ ಪ್ರಕರಣಗಳಾಗಿವೆ. ಇನ್ನು, ಈವರೆಗೆ 1,19,293 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 287 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 7000 ಕ್ಕೆ ಏರಿಕೆಯಾಗಿದೆ.
ಭಾರತದ ನಾಲ್ಕು ಮೆಟ್ರೋಪಾಲಿಟನ್ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅಂದರೆ ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಕೊರೋನಾ ಕೇಸ್ಗಳು ಪತ್ತೆಯಾಗಿರುವುದು ಈ 4 ನಗರಗಳಲ್ಲೇ. ಶುಕ್ರವಾರ ಒಟ್ಟು 9,887 ಕೊರೋನಾ ಪ್ರಕರಣಗಳು ಬೆಳಕಿಬಂದಿದ್ದವು ಎಂದು ಆರೋಗ್ಯ ಇಲಾಖೆ ಶನಿವಾರದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿತ್ತು. ಈ ಮೂಲಕ ಕೊರೋನಾ ಪ್ರಕರಣ ಸಂಖ್ಯೆ 2.44 ಲಕ್ಷ ಆಗಿತ್ತು. ಇನ್ನು, 24 ಗಂಟೆಯಲ್ಲಿ 294 ಜನರು ಕೊರೋನಾ ವೈರಸ್ಗೆ ಮೃತಪಟ್ಟಿದ್ದರು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಭಾರೀ ಆತಂಕ ಸೃಷ್ಟಿಸಿದೆ. ಸದ್ಯ, ಸ್ಪೇನ್ನಲ್ಲಿ 2.40 ಲಕ್ಷ ಜನರಿಗೆ ಕೊರೋನಾ ವೈರಸ್ ಇದೆ.
ತಿಂಗಳ ಹಿಂದೆ ಇಟಲಿಯಲ್ಲಿ ಕೊರೋನಾ ವೈರಸ್ ಭಾರೀ ಅಟ್ಟಹಾಸ ಮೆರೆದಿತ್ತು. ಈಗ ಆ ರಾಷ್ಟ್ರವನ್ನೇ ಭಾರತ ಹಿಂದಿಕ್ಕಿ ಬಿಟ್ಟಿದೆ. ಶುಕ್ರವಾರ ಕೊರೋನಾ ಪ್ರಕರಣದಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ಇಟಲಿಯನ್ನು ಭಾರತ ಹಿಂದಿಕ್ಕಿತ್ತು. ಇಂಗ್ಲೆಂಡ್, ರಷ್ಯಾ, ಬ್ರೇಜಿಲ್ ಹಾಗೂ ಅಮೆರಿಕ ಕೊರೋನಾ ವೈರಸ್ನಲ್ಲಿ ನಮಗಿಂತ ಮುಂದಿವೆ.