ರಾಯಚೂರು ಜಿಲ್ಲೆ ಸುದ್ದಿ

ರಾಯಚೂರು ಹಸಿರೀಕರಣಕ್ಕೆ ಜೈಕಾರ, ಪಂಚವಟಿ ಅಭಿಯಾನಕ್ಕೆ ಶ್ರೀಕಾರ

ವರದಿ: ವಿಜಯ್. ಎ.ಸರೋದೆ, ಪತ್ರಕರ್ತರು ಸಿರವಾರ

ರಾಯಚೂರು, ಜೂ.5: ಔಷಧೀಯ ಗುಣ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವ ಉಳ್ಳ ಪಂಚವಟಿ ವನಗಳನ್ನು ಜಿಲ್ಲೆಯಾದ್ಯಂತ ನಿರ್ಮಿಸುವ ಸಂಕಲ್ಪ ಕಾರ್ಯಕ್ರಮಕ್ಕೆ ಶಾಸಕ ಶಿವರಾಜ್ ಪಾಟೀಲ್ ಗಿಡ ನಡುವ ಮೂಲಕ ಚಾಲನೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಕರ್ನಾಟಕ ಹೌಸಿಂಗ್ ಸೊಸೈಟಿ ಉದ್ಯಾನವನದಲ್ಲಿ ಅರಣ್ಯ ಇಲಾಖೆ,‌ ನಗರಸಭೆ ಹಾಗೂ ಗ್ರೀನ್ ರಾಯಚೂರು ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತಿಹೆಚ್ಚು ಆಮ್ಲಜನಕ ನೀಡುವ ಪತ್ರಿ, ಬೇವು, ಬನ್ನಿ, ಅತ್ತಿ ಹಾಗೂ ಅರಳಿ ಮರಗಳಿಗೆ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಮಹತ್ವದ ಸ್ಥಾನ ನೀಡಲಾಗಿದ್ದು, ಇವು ಔಷಧೀಯ ಗುಣಗಳನ್ನೂ ಹೊಂದಿರುವುದು ವಿಶೇಷವಾಗಿದೆ. ಈ ಐದೂ ಗಿಡಗಳು ಒಟ್ಟಾಗಿ ಲಭ್ಯವಿರುವ ವನಕ್ಕೆ ಪಂಚವಟಿ ಎಂಬ ಹೆಸರನ್ನು ಪುರಾತನರು ನೀಡಿದ್ದರು. ಅಂತಹ ವನಗಳನ್ನು ನಾವು ನಮ್ಮ ಊರು-ಬಡಾವಣೆಗಳಲ್ಲಿ ನಿರ್ಮಿಸುವುದರಿಂದ ಶುದ್ಧ ಗಾಳಿ ಜೊತೆಗೆ ಆರೋಗ್ಯಯುತ ವಾತಾವರಣವನ್ನು ಪಡೆಯಲು ಸಾಧ್ಯವಿದೆ.

ಅರಣ್ಯ ಇಲಾಖೆ, ಹೌಸಿಂಗ್ ಸೊಸೈಟಿ ಹಾಗೂ ಗ್ರೀನ್‌ ರಾಯಚೂರು ಅವರ ಸಹಕಾರದೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಪಂಚವಟಿ ವನಗಳನ್ನು ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ಪರಿಸರ ಪ್ರೇಮಿಗಳು ಹಾಗೂ ಸ್ವಯ ಆಸಕ್ತರು ನಮ್ಮೊಂದಿಗೆ ಕೈ ಜೋಡಿಸಬಹುದು, ಜೊತೆಗೆ ತಾವೂ ಕೂಡ ತಮ್ಮ ಮನೆ ಹಾಗೂ ಸುತ್ತಮುತ್ತಲಿರುವ ಖಾಲಿ ಜಾಗದಲ್ಲಿ(ಮನೆ ಕಾಂಪೌಂಡ್, ದೇವಸ್ಥಾನ-ಮಸೀದಿ-ಚರ್ಚ್’ಗಳ ಆವರಣ, ಬಡಾವಣೆಯಲ್ಲಿರುವ ನಿರುಪಯುಕ್ತ ಖಾಲಿ ಜಾಗಗಳು) ಇಂತಹ ವನಗಳನ್ನು ನಿರ್ಮಿಸಬಹುದು ಎಂದು ಅವರು ಸಲಹೆ ನೀಡಿದರು.

ಗ್ರೀನ್ ರಾಯಚೂರು ಸಂಸ್ಥೆಯ ಗೌರವ ಅಧ್ಯಕ್ಷರಾದ ಕೊಂಡ ಕೃಷ್ಣಮೂರ್ತಿ ಮಾತನಾಡಿ, ಮಾಲಿನ್ಯ ನಿವಾರಿಸುವ ಹಾಗೂ ಮನುಷ್ಯನಿಗೆ ಬರುವ ವಿವಿಧ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಪಂಚವಟಿ ಗಿಡಗಳು ಹೊಂದಿವೆ. ಹುಬ್ಬಳ್ಳಿ-ಧಾರವಾಡದಲ್ಲಿ ಈಗಾಗಲೇ ಇಂತಹ ನೂರಾರು ವನಗಳನ್ನು ನಿರ್ಮಿಸಲಾಗಿದ್ದು(ನಾಟಿ ವೈದ್ಯರಾದ ಬಸವರಾಜ ಕೊಂಚಗೇರಿಯವರ ಪರಿಕಲ್ಪನೆ ಹಾಗೂ ಸಂಕಲ್ಪದ ಫಲವಾಗಿ), ನಮ್ಮಲ್ಲಿಯೂ ಇಂತಹ ಹಸಿರು ಕಾರ್ಯ ಆಗಬೇಕಿದೆ. ನಗರ ಹಾಗೂ ಜಿಲ್ಲೆಯ ಜನತೆ ಇದರ ಮಹತ್ವ ಅರಿತು, ಸಹಕಾರ ನೀಡುವ ಜೊತೆಗೆ ತಾವೂ ವನ ನಿರ್ಮಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಪಂಚತಾರಾ ಹಸಿರುಮನೆಗೆ ಸಂಕಲ್ಪ: ಮನೆಗಳಲ್ಲಿ ನವೀಕರಿಸಬಹುದಾದ ಇಂಧನಗಳ ಬಳಕೆ ಹೆಚ್ಚಿಸುವುದು(ಬಿಸಿಲು ನಾಡಾದ ರಾಯಚೂರಲ್ಲಿ ಸೋಲಾರ್ ವಿದ್ಯುತ್ ಹಾಗೂ ಸೋಲಾರ್ ವಾಟರ್ ಹೀಟರ್’ಗಳ ಬಳಕೆ ಹೆಚ್ಚಿಸುವುದು ಜೊತೆಗೆ ಪ್ರೋತ್ಸಾಹಿಸುವುದು), ಮಳೆನೀರು ಸಂಗ್ರಹ, ತಾರಸಿ ತೋಟಗಾರಿಕೆ, ನಾವೇ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಬಳಕೆ ಮಾಡುವ ಪಂಚತಾರಾ ಹಸಿರುಮನೆ(ಐದು ವ್ರತ ಪಾಲನೆಯ) ನಿರ್ಮಾಣದ ಸಂಕಲ್ಪ ಮಾಡಲಾಯಿತು. ‌ವಿದ್ಯಾರ್ಥಿಗಳು, ಗಣ್ಯರು, ಅಧಿಕಾರಿಗಳು ಸೇರಿದಂತೆ ಅನೇಕ ನಾಗರೀಕರು ಈ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಾ.ದೊಡ್ಡಮನಿ, ನಗರಸಭೆ ಸದಸ್ಯ ಶರಣಬಸವ ಬಲ್ಲಟಗಿ, ಡಾ ಸಿ.ವಿ.ಪಾಟೀಲ್, ಗ್ರೀನ್ ರಾಯಚೂರು ಸಂಸ್ಥೆಯ ಲಾಲಜಿ ಪಟೇಲ್, ಸರಸ್ವತಿ ಕಿಲಕಿಲೆ, ರಾಜೇಂದ್ರ ಕುಮಾರ್ ಶಿವಾಳೆ, ಹೌಸಿಂಗ್ ಸೊಸೈಟಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಚ್.ಆರ್.ಕುಮಾರ್, ನಾರಾಯಣಪ್ಪ, ಎಂಪಿ ಬೊರಳೆ ಹಾಗೂ ಸಿಬ್ಬಂದಿ ಸೇರಿದಂತೆ ಅನೇಕ ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿಯಾದ ದಂಡಪ್ಪ ಬಿರಾದಾರ ಅವರು ಪರಿಸರ ಪ್ರತಿಜ್ಞಾವಿಧಿ ಭೋದಿಸಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close