
Posted By : Sirajuddin Bangar
Source : NS18
ತಿರುವನಂತಪುರಂ(ಮೇ 29): ಕೇರಳ ರಾಜ್ಯದ ಧೀಮಂತ ರಾಜಕಾರಣಗಳಲ್ಲೊಬ್ಬರೆಂದು ಪರಿಗಣಿಸಲಾದ ಎಂ.ಪಿ. ವೀರೇಂದ್ರ ಕುಮಾರ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕನ್ನಡಿಗರಾದ 83 ವರ್ಷದ ವೀರೇಂದ್ರ ಕುಮಾರ್ ಅವರು ಹೃದಯಾಘಾತದಿಂದ ಮೃತಪಟ್ಟರೆಂದು ಅವರು ಕುಟುಂಬ ಮೂಲಗಳು ಹೇಳಿದ್ಧಾಗಿ ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎರಡು ದಿನಗಳ ಹಿಂದಷ್ಟೇ ಅವರು ಕೇರಳ ಸಿಎಂ ಪಿಣಾರಯಿ ವಿಜಯನ್ ಕೋವಿಡ್-19 ವಿಚಾರವಾಗಿ ನಡೆಸಿದ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಪಾಲ್ಗೊಂಡಿದ್ದರು.
ವೀರೇಂದ್ರ ಕುಮಾರ್ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ಧಾರೆ. ಅವರು ತಮ್ಮ ಆಪ್ತರು ಹಾಗೂ ಗುರುಗಳು ಎಂದು ಮಾಜಿ ಕೇಂದ್ರ ರಕ್ಷಣಾ ಸಚಿವ ಎಕೆ ಆಂಥನಿ ಹೇಳಿದ್ದಾರೆ
ಕೇರಳದ ವಯನಾಡ್ ಜಿಲ್ಲೆಯಲ್ಲಿ ಜನಿಸಿದ ವೀರೇಂದ್ರ ಕುಮಾರ್ ಅವರು ಕನ್ನಡಿಗ ಜೈನ ಕುಟುಂಬದವರು. ಕೇರಳದಲ್ಲಷ್ಟೇ ಅಲ್ಲ ದಿಲ್ಲಿ ರಾಜಕೀಯ ವಲಯದಲ್ಲಿ ಸಾಕಷ್ಟು ಗೌರವ ಸಂಪಾದನೆ ಮಾಡಿದ್ಧಾರೆ. ಲೋಕತಾಂತ್ರಿಕ್ ಜನತಾ ದಳದ ಕೇರಳ ಘಟಕದ ಅಧ್ಯಕ್ಷರಾಗಿರುವ ಅವರು ‘ಮಾತೃಭೂಮಿ’ ಮಲಯಾಳಂ ಪತ್ರಿಕೆಯ ಎಂಡಿಯಾಗಿಯೂ ಕಾರ್ಯನಿರ್ವಹಿಸಿದ್ದರು.
1987ರಲ್ಲಿ ಎಲ್ಡಿಎಫ್ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದರು. ಭಿನ್ನಾಭಿಪ್ರಾಯಗಳಿಂದಾಗಿ ಐದೇ ದಿನದಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
1996ರಲ್ಲಿ ಕೋಳಿಕೋಡ್ನಿಂದ ಲೋಕಸಭೆಗೆ ಆಯ್ಕೆಯಾದರು. ಕೇಂದ್ರ ಹಣಕಾಸು ಖಾತೆ ರಾಜ್ಯ ದರ್ಜೆ ಸಚಿವರಾದರು. ಮುಂದಿನ ವರ್ಷ ಅವರು ಸಂಸದೀಯ ವ್ಯವಹಾರಗಳ ಸಚಿವರಾದರು.2004ರಲ್ಲಿ ಮತ್ತೆ ಕೋಳಿಕೋಡ್ನಿಂದ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದರು. ಆಗ ಅವರು ಜೆಡಿಯು ಪಕ್ಷದಲ್ಲಿದ್ದರು. ಎಲ್ಡಿಎಫ್ ಜೊತೆ ಗುರುತಿಸಿಕೊಂಡಿದ್ದ ಅವರ ಪಕ್ಷ 2009ರಲ್ಲಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಬೆಂಬಲ ನೀಡಿತು. ಇದಕ್ಕೆ ಕಾರಣ, 2008ರ ಚುನಾವಣೆಯಲ್ಲಿ ಕೋಳಿಕೋಡ್ನಲ್ಲಿ ಟಿಕೆಟ್ ನಿರಾಕರಿಸಿದ್ದು.
2014ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋಲುಂಡರು. ಅದಾದ ಬಳಿಕ ಯುಡಿಎಫ್ ಜೊತೆಗಿನ ಅವರ ಸಂಬಂಧದಲ್ಲಿ ಬಿರುಕು ಮೂಡಿತು. ನಂತರ ಅವರ ಲೋಕತಾಂತ್ರಿಕ ಜನತಾ ದಳ ಪಕ್ಷ ಕೇರಳದಲ್ಲಿ ಎಲ್ಡಿಎಫ್ ಮೈತ್ರಿಕೂಟ ಸೇರ್ಪಡೆಯಾಯಿತು. 2018ರಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಎಂ.ಪಿ. ವೀರೇಂದ್ರ ಕುಮಾರ್ ಅವರ ಮಗ ಎಂ.ಪಿ. ಶ್ರೇಯಾಮ್ಸ್ ಕುಮಾರ್ ಅವರೂ ರಾಜಕಾರಣದಲ್ಲಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಅವರ ಮಗ ಇದೀಗ ಮಾತೃಭೂಮಿ ಸಮೂಹದ ಜಂಟಿ ಎಂಡಿಯಾಗಿದ್ದಾರೆ.