
–ಸಿರಾಜುದ್ದೀನ್ ಬಂಗಾರ್ ಸಿರವಾರ
ನಾವು ದುಡಿದು ನಿತ್ಯ 20 ರೂಪಾಯಿಗಳನ್ನು ನಿಮ್ಮ ಖಾತೆಗೆ ಹಾಕ್ತಿವಿ ಅಥವಾ ನಮಗೆ ನೀಡುವ ಸಂಬಳದಲ್ಲಿ 20 ರೂಪಾಯಿ ಕಟ್ ಮಾಡಿಕೊಳ್ಳಿ. ಆದರೆ ಮದ್ಯದ ಅಂಗಡಿಗಳನ್ನ ಮಾತ್ರ ತೆರೆಯಬೇಡಿ ಎಂದು ಹೊಸೂರು ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಸಾರಾಯಿ ಅಂಗಡಿಗಳು ತೆರೆಯುತ್ತಿದ್ದಂತೆ ಮದ್ಯಪ್ರಿಯರು ನಾಮುಂದು ತಾಮುಂದು ಎಂದು ಮುಗಿಬಿದ್ದು ಎಣ್ಣೆ ಖರೀದಿ ಮಾಡುತ್ತಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರದಿಂದಾಗಿ ಎಷ್ಟೋ ಬಡ ಕುಟುಂಬಗಳು ಈಗ ಮತ್ತೆ ಬೀದಿಗೆ ಬಂದಿವೆ. ಇದರಿಂದ ಬೇಸತ್ತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ನೂರಾರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಲಾಕ್ಡೌನ್ ಸಮಯದಲ್ಲಿ ಸರ್ಕಾರ ಮದ್ಯ ಬಂದ್ ಮಾಡಿದ್ದರಿಂದ ಬಡ ಕುಟುಂಬಗಳ ಎಷ್ಟೋ ಜನರ ಬದುಕು ಸುಧಾರಣೆ ಆಗಿತ್ತು. ಯಾವತ್ತೂ ಮದ್ಯ ಬಿಡಲು ಸಾಧ್ಯವಿಲ್ಲ ಎನ್ನುವ ಎಷ್ಟೋ ಜನರು ಸಾರಾಯಿ ಬಿಟ್ಟು ದೂರ ಉಳಿದಿದ್ದರು. ಇದರಿಂದ ಬಡ ಕುಟುಂಬಗಳ ಜೀವನದಲ್ಲಿ ನೆಮ್ಮದಿ ಕೂಡ ಬಂದಿತ್ತು. ಆದರೆ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮತ್ತೆ ಎಣ್ಣೆ ಅಂಗಡಿಗಳನ್ನ ತೆರೆದು ಸಾರಾಯಿ ಮಾರಾಟ ಆರಂಭಿಸಿದೆ. ಈ ಪರಿಣಾಮ ಕೆಲಸವಿಲ್ಲದೇ ಮನೆಯಲ್ಲೇ ಖಾಲಿ ಕುಳಿತಿರುವ ಜನರು ಮನೆಯಲ್ಲಿದ್ದ ಅಷ್ಟೋ ಇಷ್ಟೋ ದುಡ್ಡನ್ನು ಖಾಲಿ ಮಾಡಿಕೊಂಡು ಮತ್ತೆ ಕುಡಿಯಲು ಆರಂಭಿಸಿದ್ದಾರೆ.

, ಸರ್ಕಾರದ ಈ ನಿರ್ಧಾರದಿಂದ ಬೇಸತ್ತ ಮಹಿಳೆಯರು ಸರ್ಕಾರಕ್ಕೆ ದೇಣಿಗೆ ನೀಡಲು ಮುಂದಾಗಿದ್ದಾರೆ. ನೀವು ಮದ್ಯ ಮಾರಾಟದ ಮೂಲಕವೇ ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳುವುದಾದರೆ ನಾವೇ ದುಡಿದು ನಿಮ್ಮ ಬೊಕ್ಕಸಕ್ಕೆ ಹಣ ಕೊಡುತ್ತೇವೆ ಎಂದು ಮಹಿಳೆಯರು ಮುಂದೆ ಬಂದಿದ್ದಾರೆ. ಯರನಾಳ ಗ್ರಾಮದ ಅಂಚೆ ಕಛೇರಿ ಮೂಲಕ ನೂರಕ್ಕೂ ಹೆಚ್ಚು ಮಹಿಳೆಯರು ಮುಖ್ಯಮಂತ್ರಿಗೆ ತಾವು ಕೂಲಿದ ಮಾಡಿದ ಹಣದಲ್ಲಿ 20 ರೂಪಾಯಿಯನ್ನು ಪರಿಹಾರದ ರೂಪವಾಗಿ ದೇಣಿಗೆ ನೀಡಿದ್ದಾರೆ.
ಲಾಕ್ಡೌನ್ನಿಂದಾಗಿ ನಮ್ಮ ಗ್ರಾಮಗಳಲ್ಲಿ ಕೆಲಸ ಸಿಗುತ್ತಿಲ್ಲ. ಈಗಷ್ಟೇ ನಾವು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಮಾಡಲು ಶುರು ಮಾಡಿದ್ದೇವೆ. ಆದ್ರೆ ನಮ್ಮ ಮನೆಯ ಗಂಡಸರು ಕೆಲಸಕ್ಕೆ ಹೋಗದೆ ನಿತ್ಯ ಕುಡಿದು ಮನೆಯಲ್ಲಿ ರಂಪಾಟ ಮಾಡುತ್ತಿದ್ದಾರೆ. ನಾವು ದುಡಿದು ನಿತ್ಯ 20 ರೂಪಾಯಿಗಳನ್ನು ನಿಮ್ಮ ಖಾತೆಗೆ ಹಾಕ್ತಿವಿ ಅಥವಾ ನಮಗೆ ನೀಡುವ ಸಂಬಳದಲ್ಲಿ 20 ರೂಪಾಯಿ ಕಟ್ ಮಾಡಿಕೊಳ್ಳಿ. ಆದರೆ ಮದ್ಯದ ಅಂಗಡಿಗಳನ್ನ ಮಾತ್ರ ತೆರೆಯಬೇಡಿ ಎಂದು ಹೊಸೂರು ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ದುಡಿಯವ ಕೈಗಳಿಗೆ ಕೆಲಸವಿಲ್ಲದೆ ಬಡ ವರ್ಗದ ಜನ ಕಷ್ಟದಲ್ಲೆ ಜೀವನ ನಡೆಸುತ್ತಿದ್ದಾರೆ. ಇತ್ತ ಮದ್ಯಕ್ಕಾಗಿ ಹಣ ನೀಡುವಂತೆ ಗಂಡಸರು ಮಹಿಳೆಯರನ್ನ ಪೀಡಿಸುತ್ತಿದ್ದಾರೆ. ಸ್ವತಃ ಮಹಿಳೆಯರೇ ದುಡಿದು ತಮ್ಮ ಗಂಡಂದಿರಿಗೆ ಮದ್ಯ ಸೇವನೆಗೆ ಹಣ ನೀಡುವ ಪರಿಸ್ಥಿತಿ ನಮ್ಮದಾಗಿದೆ. ಸರ್ಕಾರ ಈ ಕುರಿತು ವಿಚಾರ ಮಾಡಬೇಕು ಎಂಬುದು ಇಲ್ಲಿನ ಮಹಿಳೆಯರ ಆಗ್ರಹವಾಗಿದೆ.