
Posted By : Sirajuddin Bangar
Source: NS18
ಬೆಂಗಳೂರು(ಮೇ. 28): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಂಜೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಹಲವು ಮಹತ್ವದ ವಿಷಯಗಳ ಬಗ್ಗೆ ಇಂದು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣಿಕರಿಗೆ ಜಾರಿಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಅನ್ನು ಕೈಬಿಡುವ ಬಗ್ಗೆ ತೀರ್ಮಾನ ಹಾಗೂ ಸಾಂಸ್ಥಿಕ ಕ್ವಾರಂಟೈನ್ ಬದಲಾಗಿ ಹೋಮ್ ಕ್ವಾರಂಟೈನ್ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನುಳಿದಂತೆ ಲಾಕ್ ಡೌನ್ ಸಂತ್ರಸ್ತ ಫಲಾನುಭವಿಗಳಿಗೆ ಘೋಷಿತ ಆರ್ಥಿಕ ಪ್ಯಾಕೇಜ್ ತ್ವರಿತ ವಿತರಣೆಗೆ ಮಾರ್ಗಸೂಚಿ, ಬಂಡವಾಳ ಆಕರ್ಷಿಸಲು ರೆವಿನ್ಯೂ ಆ್ಯಕ್ಟ್ ತಿದ್ದುಪಡಿಗೆ ತಿರ್ಮಾನ ಮಾಡುವ ಸಾಧ್ಯತೆ ಇದೆ. ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಕದ ಬಗ್ಗೆ ತಿರ್ಮಾನ, ಸರ್ಕಾರಿ ನೌಕರರ ಸಾಮೂಹಿಕ ವರ್ಗಾವಣಾ ಅವಧಿ ನಿಗದಿಪಡಿಸುವ ಸಾಧ್ಯತೆ ಇದೆ.
ಜೂನ್ ಅಂತ್ಯದೊಳಗೆ ಪರಿಷತ್ತಿನಲ್ಲಿ 16 ಸ್ಥಾನಗಳು ಖಾಲಿಯಾಗಲಿವೆ. ಪರಿಷತ್ ಸ್ಥಾನಗಳ ಪೈಕಿ ಚುನಾಯಿತ ಸ್ಥಾನ 7, ನಾಮ ನಿರ್ದೇಶನ ಸ್ಥಾನ 5, ಶಿಕ್ಷಕರ ಕ್ಷೇತ್ರ 2, ಪದವೀಧರ ಕ್ಷೇತ್ರ 2 ಸ್ಥಾನಗಳು ಖಾಲಿ ಇವೆ. ವಿಧಾನ ಪರಿಷತ್ ನ ಐದು ನಾಮನಿರ್ದೇಶನ ವಿಚಾರದಲ್ಲಿ ಸಿಎಂಗೆ ಅಧಿಕಾರ ನೀಡುವ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.