
Posted By: Sirajuddin Bangar
Source: NS18
ರಾಮನಗರ: ಒಂದೆಡೆ ಕೊರೋನಾ ಕಾಟಕ್ಕೆ ರೈತರು ಸೊರಗಿದ್ದಾರೆ. ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗ್ತಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದ ರೈತ ಸ್ವಾಮಿ ಎಂಬುವರ ಟೊಮೋಟೊ ತೋಟಕ್ಕೆ ನುಗ್ಗಿರುವ 5 – 6 ಕಾಡಾನೆಗಳ ಹಿಂಡು 2 ಎಕರೆಯಲ್ಲಿ ಬೆಳೆದಿದ್ದ ಟೊಮೋಟೊ ಬೆಳೆಯಲ್ಲಿ ಭಾಗಶಃ ನಾಶಪಡಿಸಿರುವ ಘಟನೆ ನಡೆದಿದೆ. ಜೊತೆಗೆ ಪರಂಗಿ, ಹಲಸು, ಮಾವಿನ ಮರಗಳನ್ನು ನೆಲಸಮ ನಾಡಿ ಧ್ವಂಸ ಮಾಡಿವೆ.
ಕಬ್ಬಾಳು – ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬರುತ್ತಿರುವ ಕಾಡಾನೆಗಳ ಹಿಂಡು ರೈತರ ಕೃಷಿ ಭೂಮಿಗೆ ಕಾಲಿಟ್ಟು ನಾಶಪಡಿಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂದು ನೊಂದ ರೈತ ಸ್ವಾಮಿ ಒತ್ತಾಯಿಸಿದ್ದಾರೆ.
30 ಸಾವಿರ ಗೆಡ್ಡೆಗಳ ಪೈಕಿ 4 ಸಾವಿರ ಟೊಮೋಟೊ ಗೆಡ್ಡೆಗಳನ್ನ ಕಾಡಾನೆಗಳ ಹಿಂಡು ತುಳಿದು ನಾಶ ಮಾಡಿವೆ. ರಾಮನಗರ – ಚನ್ನಪಟ್ಟಣ ಗಡಿ ಹಾಗೂ ಚನ್ನಪಟ್ಟಣ – ಕನಕಪುರ ಗಡಿಯಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದೆ. ಮುಖ್ಯವಾಗಿ ರೈತರ ಕೃಷಿ ಭೂಮಿಗೆ ಲಗ್ಗೆಯಿಟ್ಟು ದಾಳಿ ಮಾಡ್ತಿವೆ. ಹಾಗಾಗಿ ರೈತರು ಈ ಭಾಗದಲ್ಲಿ ವ್ಯವಸಾಯ ಮಾಡೋದೆ ಕಷ್ಟವಾಗಿದೆ ಎಂಬ ಅಭಿಪ್ರಾಯವನ್ನ ಈ ಭಾಗದ ಕೃಷಿಕರು ವ್ಯಕ್ತಪಡಿಸಿದ್ದಾರೆ.
ಒಂದೆಡೆ ಕೊರೋನಾ ಗಾಳಿಗೆ ಸಿಲುಕಿ ಬೆಳೆದ ಬೆಳೆಯನ್ನ ಮಾರ್ಕೆಟ್ಗೆ ತಂದು ಮಾರಲಾಗದ ಪರಿಸ್ಥಿತಿ ಇದೆ. ಆದರೆ ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿಯಿಂದಾಗಿ ರೈತರ ಬೆಳೆಗಳು ಹಾಳಾಗುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಹೆಚ್ಚಿನ ಗಮನಹರಿಸಬೇಕೆಂಬ ಕೂಗು ಕೇಳಿಬರುತ್ತಿದೆ.