
Posted By: Sirjuddin Bangar
Source: NS18
ನವದೆಹಲಿ(ಮೇ.26): ದೇಶಾದ್ಯಂತ ಜುಲೈನಿಂದಲೇ ಶಾಲೆಗಳನ್ನು ಪುನಾರಂಭ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿಕ್ಷಣ ತಜ್ಞರ ಸಮಿತಿಯೊಂದು ಶಿಫಾರಸ್ಸು ಮಾಡಿದೆ. ಕೊರೋನಾ ವೈರಸ್ ತಡೆಗೆ ಮುಂಜಾಗೃತ ಕ್ರಮವಾಗಿ ಶಾಲಾ- ಕಾಲೇಜುಗಳನ್ನು ಕೇಂದ್ರ ಸರ್ಕಾರವೂ ಬಂದ್ ಮಾಡಿ ಆದೇಶಿಸಿತ್ತು. ಕ್ಲಾಸ್ ರೂಮ್ಗಳು ಶಟ್ಡೌನ್ ಆಗಿರುವುದರಿಂದ ಪರೀಕ್ಷೆಗಳು ಯಾವಾಗ ನಡೆಸಬೇಕು? ಶಾಲೆಗಳನ್ನು ಯಾವಾಗ ಆರಂಭಿಸಬೇಕು? ಎನ್ನುವುದರ ಕುರಿತು ಅಧ್ಯಯನ ನಡೆಸುವಂತೆ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಿತ್ತು. ಇದೀಗ ಈ ಸಮಿತಿಯೂ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ವರದಿ ಆಧಾರದ ಮೇರೆಗೆ ಜುಲೈನಿಂದ ಶಾಲೆಗಳನ್ನು ಪ್ರಾರಂಭಿಸುವಂತೆ ಶಿಫಾರಸ್ಸು ಮಾಡಲಾಗಿದೆ.
ಮಾರಕ ಕೊರೋನಾ ವೈರಸ್ ದೇಶದಲ್ಲಿ ಶರ ವೇಗದಲ್ಲಿ ಹರಡುತ್ತಿದೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಯಾವ ಪ್ರವೇಶ ಪರೀಕ್ಷೆಗಳು ನಡೆಯುವುದಿಲ್ಲ. ಹಾಗಾಗಿ ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸಿ. ಎಲ್ಲರೂ ಜೂನ್ ಅಲ್ಲದೇ ಜುಲೈವರೆಗೂ ಕಾದು ನಂತರ ಶಾಲೆಗಳನ್ನು ಆರಂಭಿಸಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಜುಲೈನಿಂದಲೇ ಶಾಲೆಗಳು ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಜೂನ್ ತಿಂಗಳಾಂತ್ಯದವರೆಗೂ ಕಾದು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ತಜ್ಞರ ಸಮಿತಿ ವರದಿಯಂತೆ ವಲಯಗಳ ಪ್ರಕಾರ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಮೊದಲು ಹಸಿರು, ಕಿತ್ತಳೆ ಜಿಲ್ಲೆಗಳಲ್ಲಿ ಶಾಲೆ ಆರಂಭ ಮಾಡಲಾಗುವುದು. ನಂತರ ಪರಿಸ್ಥಿತಿ ಸುಧಾರಿಸಿದ ಬಳಿಕ ಕೆಂಪು ವಲಯಕ್ಕೆ ಅವಕಾಶ ನೀಡಲಾಗುವುದು. ಕಿರಿಯ ಮಕ್ಕಳು ಮಾತ್ರ ಮನೆಯಲ್ಲಿಯೇ ಅಧ್ಯಯನ ಮುಂದುವರಿಸಲು ಸೂಚಿಸುವ ಸಾಧ್ಯತೆ ಇದೆ.
ಮಾರ್ಚ್ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಕ್ಲಾಸ್ ರೂಮ್ ಶಟ್ಡೌನ್ ತಂತ್ರ ಕೇಂದ್ರ ಅನುಸರಿಸಿದೆ.