
-ಕರ್ನಾಟಕ-ಜ್ವಾಲೆ ನ್ಯೂಸ್, ಕೃ:NS18
ಗ್ರಾಮೀಣ ಪ್ರದೇಶದಲ್ಲಿ ಮಹಾರಾಷ್ಟ್ರದಿಂದ ವಾಪಸ್ ಬಂದಿರೋ ವಸಲಿಗರನ್ನು ಗ್ರಾಮಕ್ಕೆ ಸೇರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇವರನ್ನು ಜಿಲ್ಲಾಡಳಿತ ಹಾಸ್ಟೆಲ್, ಶಾಲೆಗಳಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡುತ್ತಿದೆ.
ಬೆಳಗಾವಿ (ಮೇ 24): ಕೊರೋನಾ ವೈರಸ್ ಮಹಾಮಾರಿಗೆ ಇಡೀ ಬೆಳಗಾವಿ ಜಿಲ್ಲೆ ತತ್ತರಿಸಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ. ಈ ನಡುವೆ ಗೋಕಾಕ್ನಲ್ಲಿ ಸಾಮೂಹಿಕ ಕ್ವಾರಂಟೈನ್ನಲ್ಲಿ ಇದ್ದ ಮಹಿಳೆ ಪತಿಯ ಜತೆಗೆ ಪರಾರಿಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ.
ಬೆಳಗಾವಿ ಜಿಲ್ಲೆಯೊಂದಕ್ಕೆ ಪಕ್ಕದ ಮಹಾರಾಷ್ಟ್ರದಿಂದ 3 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಈ ಪೈಕಿ ಈಗಾಗಲೇ 5 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಾರಾಷ್ಟ್ರದಿಂದ ವಾಪಸ್ ಬಂದಿರೋ ವಸಲಿಗರನ್ನು ಗ್ರಾಮಕ್ಕೆ ಸೇರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇವರನ್ನು ಜಿಲ್ಲಾಡಳಿತ ಹಾಸ್ಟೆಲ್, ಶಾಲೆಗಳಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡುತ್ತಿದೆ.
ಗೋಕಾಕ್ ತಾಲೂಕಿನ ಪಂಜಾನಟ್ಟಿಯ 30 ವರ್ಷದ ಮಹಿಳೆಯೊಬ್ಬರು ಕಳೆದ ನಾಲ್ಕು ದಿನದ ಹಿಂದೆ ಮಹಾರಾಷ್ಟ್ರದಿಂದ ಬಂದಿದ್ದರು. ಗ್ರಾಮ ಪ್ರವೇಶಕ್ಕೆ ವಿರೋಧ ಹಿನ್ನೆಲೆಯಲ್ಲಿ ಗೋಕಾಕ್ ದೇವರಾಜು ಅರಸು ಹಿಂದುಳಿದ ವರ್ಗಗಳ ಹಾಸ್ಟೇಲ್ನಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿತ್ತು. ಈ ಮಹಿಳೆ ಸಂಜೆ ಪತಿಯ ಜತೆಗೆ ಕ್ವಾರಂಟೈನ್ ಕೇಂದ್ರದಿಂದ ಎಸ್ಕೆಪ್ ಆಗಿದ್ದಾಳೆ.
ಮಹಿಳೆಯ ಪತಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಕೆಲ ದಿನಗಳ ಹಿಂದೆ ಪೆರೋಲ್ ಮೇಲೆ ಹೊರ ಬಂದಿದ್ದಾನೆ. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಮಹಿಳೆ ಯಾರಿಗೂ ಮಾಹಿತಿ ನೀಡದೆ ಪರಾರಿಯಾಗಿದ್ದಾಳೆ. ಸದ್ಯ ಮಹಿಳೆಯನ್ನು ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ ವಾಪಸ್ ಕರೆದುಕೊಂಡು ಬರಲಾಗಿದೆ. ಆದಾಗ್ಯೂ ಈ ವಿಚಾರ ಗೋಕಾಕ್ ಜನರಲ್ಲಿ ಆತಂಕ ಮೂಡಿಸಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ, ಬೈಲಹೊಂಗಲ, ರಾಯಬಾಗ, ಹುಕ್ಕೇರಿ ಹಾಗೂ ಬೆಳಗಾವಿ ತಾಲೂಕು ಕೊರೊನಾ ವೈರಸ್ ನಿಂದ ತತ್ತರಿಸಿವೆ.