
ವರದಿ: ಶಿವರಾಮ್ ಪತ್ರಕರ್ತರು, ಕೃ:NS18
ಸೋಮನಾಥನ ಜೊತೆ ಹೆಂಡತಿ ಮತ್ತು ಕುಟುಂಬದ ಐವರು ಸದಸ್ಯರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಕ್ವಾರಂಟೈನ್ ಇರುವ ಕಾರಣಕ್ಕೆ ಸದ್ಯಕ್ಕೆ ಆರೋಪಿಯನ್ನು ಬಂಧಿಸಿಲ್ಲ
ಕಲಬುರ್ಗಿ(ಮೇ.24): ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೊರೋನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಕ್ವಾರಂಟೈನ್ ಕೇಂದ್ರದಲ್ಲಿರುವವರ ಬೇಡಿಕೆಗಳು ಏರುತ್ತಲೇ ಇವೆ. ತಮಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂದು ಹಲ್ಲೆ ಮಾಡುವಂತಹ ದುಷ್ಕೃತ್ಯಗಳೂ ನಡೆದಿವೆ. ಚಿಕನ್ ಊಟ ಕೊಡದಿದ್ದಕ್ಕೆ ಆಶಾ ಕಾರ್ಯಕರ್ತೆಯನ್ನು ಥಳಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ. ರೇಣುಕಾ ಕುಡಕಿ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯಾಗಿದ್ದಾಳೆ. ಆಶಾ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ ಆರೋಪ ಕೇಳಿ ಬಂದಿದೆ.
ರೇಣುಕಾ ಕೈ ಮೂಳೆ ಮುರಿದಿದ್ದು, ಆಳಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಮನಾಥ್ ಕಾಂಬಳೆ ಚಿಕನ್ ಗಾಗಿ ಹಲ್ಲೆ ಮಾಡಿದ ಭೂಪ. ಮುಂಬೈನಿಂದ ಬಂದು ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಮನಾಥ. ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂದು ಈ ಭೂಪ ಬೇಡಿಕೆ ಇಟ್ಟಿದ್ದಾನೆ. ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆಶಾ ಕಾರ್ಯಕರ್ತೆ ಹೇಳಿದ್ದಳು. ಇದರಿಂದ ಕೋಪಗೊಂಡ ಸೋಮನಾಥ ಆಶಾ ಕಾರ್ಯಕರ್ತೆ ರೇಣುಕಾ ಮೇಲೆ ಹಲ್ಲೆ ಮಾಡಿದ್ದಾನೆ.
ಸೋಮನಾಥನ ಜೊತೆ ಹೆಂಡತಿ ಮತ್ತು ಕುಟುಂಬದ ಐವರು ಸದಸ್ಯರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಕ್ವಾರಂಟೈನ್ ಇರುವ ಕಾರಣಕ್ಕೆ ಸದ್ಯಕ್ಕೆ ಆರೋಪಿಯನ್ನು ಬಂಧಿಸಿಲ್ಲ. ಕ್ವಾರಂಟೈನ್ ಮುಗಿದ ಮೇಲೆ ಆತನ ವಿರುದ್ಧ ಕ್ರಮ ಕೈಗೊಳ್ಳೋ ಸಾಧ್ಯತೆಗಳಿವೆ. ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.