
ಮೋದಿ ಜನರಿಗೆ ಬರೀ ಸುಳ್ಳು ಹೇಳ್ತಿದ್ದಾರೆ ಅಷ್ಟೇ, 20 ಲಕ್ಷ ಕೋಟಿಯನ್ನು ಅವರಿಗೆ ಬರೆಯೋಕೂ ಅವರಿಗೆ ಬರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಪ್ಯಾಕೇಜ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ರಾಮನಗರ (ಮೇ 23); ಪ್ರಧಾನಿ ನರೇಂದ್ರ ಮೋದಿ ಮಾಡಿದ ತಪ್ಪಿನಿಂದ ಈ ದೇಶಕ್ಕೆ ಕೊರೋನಾ ಬಂದಿದೆಯೇ ಹೊರತು ತಬ್ಲಿಘಿಗಳಿಂದ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಮನಗರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯದ 4 ಸಾವಿರ ಜನರಿಗೆ ರಂಜಾನ್ ಪ್ರಯುಕ್ತ ಫುಡ್ ಕಿಟ್ ವಿತರಣೆ ಮಾಡಲಾಯಿತು. ಜೊತೆಗೆ 2,800 ಜನ ಆಶಾಕಾರ್ಯಕರ್ತೆಯರಿಗೆ ಬೆಂಗಳೂರು ಹಾಲು ಒಕ್ಕೂಟದಿಂದ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, “ಜನವರಿ 30 ಕ್ಕೆ ದೇಶದ ಕೇರಳಾದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿತ್ತು. ಅಂದೇ ವಿಮಾನ ಹಾರಾಟ ಸ್ಥಗಿತ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ RSS ಮತ್ತು BJP ಯವರು ಮಾತ್ರ ತಬ್ಲಿಘಿ ಅಂತಾ ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ನಿಜ ಏನೆಂದರೆ ಪ್ರಧಾನಿ ಮೋದಿ ಮಾಡಿದ ತಪ್ಪಿಗೆ ಈ ದೇಶಕ್ಕೆ ಕೊರೋನಾ ಬಂದಿದೆಯೇ ವಿನಃ ತಬ್ಲಿಘಿಗಳಿಂದ ಅಲ್ಲ. ಚೀನಾ, ಸ್ಪೇನ್, ಇಟಲಿ ಮತ್ತು ಅಮೆರಿಕದಲ್ಲಿ ತಬ್ಲಿಘಿಯವರು ಇದ್ದಾರ?” ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿ 20 ಲಕ್ಷ ಕೋಟಿ ಬಜೆಟ್ ಕುರಿತು ವ್ಯಂಗ್ಯವಾಡಿರುವ ಸಿದ್ದರಾಮಯ್ಯ, “ಮೋದಿ ಜನರಿಗೆ ಬರೀ ಸುಳ್ಳು ಹೇಳ್ತಿದ್ದಾರೆ ಅಷ್ಟೇ, 20 ಲಕ್ಷ ಕೋಟಿಯನ್ನು ಅವರಿಗೆ ಬರೆಯೋಕೂ ಅವರಿಗೆ ಬರಲ್ಲ. ಇನ್ನೂ ಯಡಿಯೂರಪ್ಪ ರೈತನ ಮಗ ಅಂತಾರೆ, ಅವರು ಯಾವ ರೈತನ ಮಗ ಗೊತ್ತಿಲ್ಲ. ನಾನೇ ಇದಿದ್ದರೆ ಬಡವರಿಗೆ 7 KG ಅಕ್ಕಿ ಕೊಡ್ತಿದ್ದೆ, ಇವರು 5 KG ಗೆ ಇಳಿಸಿದ್ದಾರೆ. 7 KG ಕೊಟ್ಟಿದ್ದರೆ ಇವರಪ್ಪನ ಮನೆ ಗಂಟು ಹೋಗುತ್ತಿತ್ತಾ” ಎಂದು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.