
Posted By: Sirajuddin Bangar
Source: NS18
ರಾಯಚೂರು(ಮೇ . 21): ಒಂದು ಕಡೆ ಕೊರೊನಾ ಭೀತಿ, ಇನ್ನೊಂದು ಕಡೆ ಕುಡಿಯುವ ನೀರಿಗೆ ಹಾಹಾಕಾರ… ಕುಡಿಯುವವ ನೀರು ಸರಬರಾಜು ಮಾಡಲು ಸ್ಥಳೀಯ ಆಡಳಿತದ ನಿರ್ಲಕ್ಷ್ಯ… ಇದರಿಂದಾಗಿ ರಾಯಚೂರು ಜಿಲ್ಲೆಯ ಜನತೆ ಜೀವಜಲಕ್ಕಾಗಿ ಪರಡಾಡುವಂತಾಗಿದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಮಧ್ಯೆ ಇರುವ ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಬಾರದು. ಈ ಎರಡು ನದಿಗಳಿಂದ ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದ ನೀರು ಹರಿದು ಹೋಗುತ್ತಿದೆ. ಆದರೆ ಇದೇ ಜಿಲ್ಲೆಯಲ್ಲಿ ಬೇಸಿಗೆ ಬಂದರೆ ಸಾಕು ಕುಡಿವ ನೀರಿಗೆ ಹಾಹಾಕಾರ, ಬಹುತೇಕ ಕಡೆ ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಜನತೆ ಕುಡಿವ ನೀರಿಗಾಗಿ ಪರದಾಡುವಂತಾಗಿದೆ.
ರಾಯಚೂರು ನಗರದ ಹತ್ತಿರದಲ್ಲಿಯೇ ಇರುವ ಬಾಯಿದೊಡ್ಡಿ ಗ್ರಾಮದಲ್ಲಿ ಕುಡಿವ ನೀರು ಸಿಗುತ್ತಿಲ್ಲ. ಇದರಿಂದಾಗಿ ಈ ಗ್ರಾಮಕ್ಕೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 18 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಒಂದು ಕಡೆ ಕೊರೋನಾ ಹರಡುವ ಭೀತಿ, ಇದರ ಮಧ್ಯೆ ಜನರಿಗೆ ಕುಡಿವ ನೀರು ಸಿಗದೆ ಅಲೆದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.
ಟ್ಯಾಂಕರ್ ಮೂಲಕ ನೀರು ನೀಡುವುದು ಶಾಶ್ವತ ಪರಿಹಾರವಲ್ಲ. ಇಲ್ಲಿ ಕೊಳವೆ ನೀರು ಸರಬರಾಜು ಯೋಜನೆಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಕುಡಿವ ನೀರು ನೀಡಬೇಕೆಂದು ಜನತೆ ಆಗ್ರಹಿಸಿದ್ದಾರೆ.
ಈ ಮಧ್ಯೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಗೆ ಸುಮಾರು 70 ಸಾವಿರ ಜನ ಸ್ವಗ್ರಾಮಕ್ಕೆ ಮರಳಿದ್ದು, ಮನೆಗಳಲ್ಲಿ ಜನ ತುಂಬಿಕೊಂಡಿದ್ದಾರೆ. ಈಗ ಇಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 866 ಗ್ರಾಮಗಳಿದ್ದು, ಇದರಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ 161 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಇನ್ನು, ಮೇ ತಿಂಗಳಲ್ಲಿ 172 ಗ್ರಾಮಗಳಲ್ಲಿ ಕುಡಿವ ನೀರು ಸಿಗುತ್ತಿಲ್ಲ. ಒಟ್ಟು 233 ಗ್ರಾಮಗಳು ಕುಡಿವ ನೀರಿಗಾಗಿ ಪರದಾಡುವಂಥ ಸ್ಥಿತಿ ಇದೆ.
ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಇರುವುದು ನಿಜ. ಎಲ್ಲೆಲ್ಲಿ ಕುಡಿವ ನೀರಿನ ಸಮಸ್ಯೆ ಇದೆಯೋ ಅಲ್ಲಿ ಟ್ಯಾಂಕರ್ ಮೂಲಕ, ಖಾಸಗಿಯವರು ಕೊಳವೆ ಬಾವಿಗಳ ಮುಖಾಂತರ ಹಾಗು ಕೊಳವೆ ಬಾವಿಗಳ ದುರಸ್ತಿ ಸೇರಿದಂತೆ ಹಲವಾರು ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಕುಡಿವ ನೀರಿಗಾಗಿ ಸಹಾಯವಾಣಿ ಆರಂಭಿಸಿದ್ದು ಸಮಸ್ಯೆಗಳು ಕಂಡು ಬಂದರೆ ಸಹಾಯವಾಣಿಗೆ ಮಾಹಿತಿ ನೀಡಿದರೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಕಾಂತರಡ್ಡಿ ತಿಳಿಸಿದ್ದಾರೆ.
14 ಬಹುಗ್ರಾಮ ಕುಡಿವ ನೀರಿನ ಯೋಜನೆಗಳು ಜಿಲ್ಲೆಯಲ್ಲಿದ್ದು, ಈ ಯೋಜನೆಯು ಪ್ರಾರಂಭವಾಗಿ ಸುಮಾರು 20 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಈ ಮಧ್ಯೆ ಹಿಂದಿನ ಸರಕಾರದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಕೃಷ್ಣ ಭೈರೇಗೌಡರು ಜಿಲ್ಲೆಗೆ ಶಾಶ್ವತ ಕುಡಿವ ನೀರು ಒದಗಿಸಲು ಜಲಧಾರೆ ಎಂಬ ವಿಶೇಷ ಯೋಜನೆ ಹಾಕಿದ್ದರು. ಸರ್ಕಾರ ಬದಲಾಗಿರುವುದರಿಂದ ಆ ಯೋಜನೆ ಮುಂದುವರಿಸುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಕುಡಿವ ನೀರಿಗಾಗಿ ಜನರು ಪರಿತಪಿಸುವುದು ಮಾತ್ರ ತಪ್ಪುವಂತಿಲ್ಲ.