
ವರದಿ: ಸಿರಾಜುದ್ದೀನ್ ಬಂಗಾರ್
ರಾಯಚೂರು(ಮೇ.19): ಕೊರೋನಾ ಲಾಕ್ ಡೌನ್ ಹಿನ್ನೆಲೆ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕರು ಇಂದು ಅಕ್ಷರಶಃ ಉಪವಾಸ ಇರುವಂತಾಗಿದೆ. ಬಹುತೇಕರು ನೀರು ಕುಡಿದು ದಿನ ಕಳೆಯುತ್ತಿದ್ದಾರೆ. ಮಧ್ಯಾಹ್ನವಾದರೂ ಆಹಾರ ಸಿಗದೆ ಯಾರಾದರೂ ಊಟ, ತಿಂಡಿ ಕೊಡ್ತಾರಾ ಎಂದು ಕಾಯುವ ಸ್ಥಿತಿ ರಾಯಚೂರು ನಗರದಲ್ಲಿ ಕಂಡು ಬಂದಿದೆ.
ಜಿಲ್ಲೆಯಲ್ಲಿ 6 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ನಾಲ್ಕು ಜನರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕದಲ್ಲಿದ್ದವರ ಮಾಹಿತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ರಾಯಚೂರು ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು, ಮೊದಲ ಹಂತದ ಲಾಕ್ ಡೌನ್ ಆರಂಭವಾಗಿದ್ದರಿಂದ ಎರಡನೆಯ ಹಂತದ ಲಾಕ್ ಡೌನ್ ಮುಗಿಯವವರೆಗೂ ಭಿಕ್ಷುಕರಿಗೆ ದಾನಿಗಳು ಊಟ ತಿಂಡಿ ನೀಡುತ್ತಿದ್ದರು.
ಮೂರನೆಯ ಹಂತದ ಲಾಕ್ ಡೌನ್ ಆರಂಭವಾದ ನಂತರ ರಾಯಚೂರಿನಲ್ಲಿ ಲಾಕ್ ಡೌನ್ ಸಡಿಲಿಕೆಯಾಗಿ ಜನರ ಸಂಚಾರ ಹಾಗು ಅಂಗಡಿಗಳು ಆರಂಭವಾಗಿದ್ದವು, ಈ ಸಂದರ್ಭದಲ್ಲಿ ನಗರದಲ್ಲಿರುವ ಸುಮಾರು 200 ಕ್ಕೂ ಅಧಿಕ ಭಿಕ್ಷಕರು ಅಲ್ಲಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಈ ಮಧ್ಯೆ ಇಂದು ಒಂದು ದಿನ ಲಾಕ್ ಡೌನ್ ಬಿಗಿಗೊಳಿಸಿದ್ದರಿಂದ ಭಿಕ್ಷುಕರಿಗೆ ಊಟವಿಲ್ಲದೆ ಪರದಾಡುವಂತಾಯಿತು. ಮುಂಜಾನೆಯಿಂದ ಕೇವಲ ನೀರು ಕುಡಿದು ಇರುವಂತಾಗಿದೆ. ಯಾರಾದರೂ ಬಂದು ಊಟ ನೀಡುತ್ತಾರಾ ಎಂದು ಇವರು ಕಾಯುತ್ತಿದ್ದಾರೆ. ಜಿಲ್ಲಾಡಳಿತ ಇವರ ಹಸಿವು ನೀಗಿಸಲು ವ್ಯವಸ್ಥೆ ಮಾಡಬೇಕಿದೆ.