
ಸೂರ್ಯನಲ್ಲಿ ಕಲೆಗಳು ಕಡಿಮೆ ಇವೆ ಎಂದರೆ ಸೂರ್ಯನ ಅಯಸ್ಕಾಂತೀಯ ಶಕ್ತಿ ಕಡಿಮೆಯಾಗಿದೆ ಎಂದರ್ಥ. ಸೂರ್ಯನ ಮ್ಯಾಗ್ನೆಟಿಕ್ ಫೀಲ್ಡ್ ದುರ್ಬಲವಾದರೆ ಸೌರವ್ಯವಸ್ಥೆಯೊಳಗೆ ಹೆಚ್ಚೆಚ್ಚು ಕಾಸ್ಮಿಕ್ ಕಿರಣಗಳಿಗೆ ಆಹ್ವಾನ ಕೊಟ್ಟಂತೆಯೇ.
Source : ANI Publihsed By : Sirajuddin Bangar
ಭೂಮಿಯಲ್ಲಿ ಭೂಮಿಯ ಅಸ್ತಿತ್ವ ಉಳಿದುಕೊಂಡಿರುವುದು ಇಲ್ಲಿರುವ ಅನುಕೂಲಕರ ವಾತಾವರಣದಿಂದಲೇ. ಹಾಗೇ, ಭೂಮಿಯ ಈ ಜೀವರಕ್ಷಕ ವಾತಾವರಣಕ್ಕೆ ಸೂರ್ಯನೂ ಪ್ರಮುಖ ಕಾರಣ. ಸೂರ್ಯನ ವಾತಾವರಣದಲ್ಲಿ ಅಥವಾ ಮೇಲ್ಮೈನಲ್ಲಿ ಏರುಪೇರಾದರೆ ಭೂಮಿಗೂ ಪರಿಣಾಮ ಬೀರುತ್ತದೆ. ಈಗ ಸೂರ್ಯನಲ್ಲಿ ಅಂಥದ್ದೊಂದು ಬದಲಾವಣೆ ಪರ್ವ ಆಗುತ್ತಿದ್ದು, ಭೂಮಿಗೆ ದೊಡ್ಡ ಗಂಡಾಂತರ ಕಾದಿದೆಯಂತೆ. ಇದನ್ನ ಯಾವ ಜ್ಯೋತಿಷಿಗಳು ಹೇಳಿದ್ದಲ್ಲ. ವಿಜ್ಞಾನಿಗಳ ಮತ್ತು ಖಗೋಲಶಾಸ್ತ್ರಜ್ಞರ ಎಚ್ಚರಿಕೆ.
ಬದಲಾವಣೆ ಜಗದ ನಿಯಮ ಎಂಬಂತೆ, ಸೂರ್ಯನ ಮೇಲ್ಮೈನಲ್ಲಿ ನಿರಂತರ ಬದಲಾವಣೆಯಾಗುತ್ತಿರುತ್ತದೆ, ಚಟುವಟಿಕೆಗಳು ನಡೆಯುತ್ತಿರುತ್ತವೆ. ಕೆಲ ಸಂದರ್ಭದಲ್ಲಿ ಚಟುವಟಿಕೆ ಗರಿಷ್ಠವಿರುತ್ತದೆ. ಕೆಲ ಕಾಲಘಟ್ಟದಲ್ಲಿ ಕನಿಷ್ಠ ಚಟುವಟಿಕೆ ಇರುತ್ತದೆ. ಇದನ್ನ ಸೋಲಾರ್ ಮಿನಿಮಮ್ ಎಂದು ಬಣ್ಣಿಸುತ್ತಾರೆ. ಸೂರ್ಯನ ಮೇಲ್ಮೈನಲ್ಲಿ ಬಹುತೇಕ ಚಟುವಟಿಕೆಗಳು ನಿಂತೇ ಹೋಗಿವೆ. ಅಂದರೆ ಕ್ರಿಯೆ, ಪ್ರತಿಕ್ರಿಯೆ ಇತ್ಯಾದಿಗಳು ಸ್ಥಗಿತಗೊಂಡಂತಿವೆ. ಸದ್ಯ ಸೂರ್ಯ ಅಂಥದ್ದೊಂದು ಕಾಲಘಟ್ಟಕ್ಕೆ ಪ್ರವೇಶ ಮಾಡಿದೆ. ಇದೇ ಅತ್ಯಂತ ಕನಿಷ್ಟತಮ ಚಟುವಟಿಕೆ ರಹಿತ ಸೂರ್ಯನ ಸ್ಥಿತಿ ಇರುಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಸಾಕ್ಷಿಯಾಗಿ, ಸೂರ್ಯನಲ್ಲಿ ಸನ್ಸ್ಪಾಟ್ ಅಥವಾ ಕಲೆಗಳು ಬಹುತೇಕ ಕಾಣಿಸದಾಗಿವೆ.
ಏನಿದು ಸನ್ಸ್ಪಾಟ್?
ಚಂದ್ರನಲ್ಲಿ ನಾವು ಕಲೆಗಳನ್ನ ನೋಡಿರುತ್ತೇವೆ. ಅಲ್ಲಲ್ಲಿ ಕುಳಿ ಬಿದ್ದಿರುವುದು ನಮಗೆ ಕಲೆಗಳಾಗಿ ತೋರುತ್ತವೆ. ಅದೇ ರೀತಿ ಸೂರ್ಯನಲ್ಲೂ ಮನುಷ್ಯರು ಬರಿಗಣ್ಣಿನಿಂದಲೇ ಕಲೆಗಳನ್ನ ಕಾಣಬಹುದು. ಇವು ಚುಕ್ಕಿಗಳಂತೆ, ಮಚ್ಚೆಗಳಂತೆ ಅಲ್ಲಲ್ಲಿ ಕಾಣಿಸುತ್ತವೆ. ವಾಸ್ತವವಾಗಿ ಈ ಕಲೆಗಳ ಸುತ್ತಳತೆ ಭಾರೀ ದೊಡ್ಡದಿರುತ್ತದೆ. ಕೆಲ ಬಾರಿ ಭೂಮಿಯ ಅಗಲದಷ್ಟು ಕಲೆ ನಿರ್ಮಾಣವಾಗುವುದುಂಟು. ಇವುಗಳ ಸ್ಥಳವೂ ಬದಲಾಗುತ್ತಿರುತ್ತವೆ. ಅಯಸ್ಕಾಂತೀಯ ಶಕ್ತಿಯ ಆಧಾರದ ಮೇಲೆ ಕೆಲ ಜಾಗದಲ್ಲಿ ಉಷ್ಣಾಂಶ ಕಡಿಮೆಯಾಗುತ್ತದೆ. ಅಂಥ ಜಾಗ ನಮ್ಮ ಕಣ್ಣಿಗೆ ಕಲೆಯಂತೆ ಕಾಣುತ್ತದೆ. ಅದನ್ನೇ ನಾವು ಸನ್ಸ್ಪಾಟ್ ಎನ್ನುತ್ತೇವೆ.
ಭೂಮಿಗೆ ಏನು ಗಂಡಾಂತರ?
ಸೂರ್ಯನಲ್ಲಿ ಕಲೆಗಳು ಕಡಿಮೆ ಇವೆ ಎಂದರೆ ಸೂರ್ಯನ ಅಯಸ್ಕಾಂತೀಯ ಶಕ್ತಿ ಕಡಿಮೆಯಾಗಿದೆ ಎಂದರ್ಥ. ಸೂರ್ಯನ ಮ್ಯಾಗ್ನೆಟಿಕ್ ಫೀಲ್ಡ್ ದುರ್ಬಲವಾದರೆ ಸೌರವ್ಯವಸ್ಥೆಯೊಳಗೆ ಹೆಚ್ಚೆಚ್ಚು ಕಾಸ್ಮಿಕ್ ಕಿರಣಗಳಿಗೆ ಆಹ್ವಾನ ಕೊಟ್ಟಂತೆಯೇ. ಕಾಸ್ಮಿಕ್ ಕಿರಣ ಎಂದರೆ ಬೆಳಕಿನ ವೇಗದಲ್ಲಿ ಪ್ರವಹಿಸುವ ಬಹಳ ಶಕ್ತಿಯುತ ಆಟಾಮಿಕ್ ನ್ಯೂಕ್ಲಿಯಸ್ ಅಥವಾ ಬೇರಾವುದಾದರೂ ಕಾಸ್ಮಿಕ್ ವಸ್ತುಗಳಾಗಿರುತ್ತವೆ. ಇವು ಭೂಮಿಯ ವಾತಾವರಣಕ್ಕೆ ಧಕ್ಕೆ ತರುತ್ತವೆ. ಮನುಷ್ಯ ಸೇರಿದಂತೆ ಸಕಲ ಜೀವಿಗಳ ಆರೋಗ್ಯಕ್ಕೂ ಹಾನಿ ಮಾಡುತ್ತದೆ.
ಭೂಮಿಯ ಉಷ್ಣಾಂಶ ಕಡಿಮೆಯಾಗುತ್ತದೆ. ಎಲ್ಲೆಡೆ ಶೀತ ವಾತಾವರಣ ನಿರ್ಮಾಣವಾಗುತ್ತದೆ. ಭೂಕಂಪಗಳಾಗಬಹುದು. ಎಲ್ಲೆಡೆ ಬೆಳೆ ನಾಶವಾಗಬಹುದು. ಭೀಕರ ಬರಗಾಲ ಸೃಷ್ಟಿಯಾಗಬಹುದು. ದೊಡ್ಡ ಮಟ್ಟದಲ್ಲಿ ಜ್ವಾಲಾಮುಖಿಗಳು ಸ್ಫೋಟಗೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸೂರ್ಯನಲ್ಲಿರುವ ಈ ಸ್ಥಿತಿ ಒಂದು ಚಕ್ರದಂತೆ ಇರುತ್ತದೆ. ಕ್ರಿ.ಶ. 1790ರಿಂದ 1830ರವರೆಗೆ ಸೂರ್ಯನಲ್ಲಿ ಕಲೆಗಳು ನಾಪತ್ತೆಯಾದ ಸಂದರ್ಭ ಇತ್ತು. ಆಗ ಭೂಮಿಯ ಹವಾಮಾನದಲ್ಲಿ ದೊಡ್ಡ ಮಟ್ಟದ ವ್ಯತ್ಯಯವಾಗಿತ್ತು. ವಿಶ್ವದ ಬಹುಭಾಗದಲ್ಲಿ ಶೀತದ ವಾತಾವರಣ ನೆಲಸಿತ್ತು. 1816ರಲ್ಲಿ ಇಡೀ ಒಂದು ವರ್ಷ ಎಲ್ಲಿಯೂ ಬೇಸಿಗೆಯೇ ಇರಲಿಲ್ಲವಂತೆ. 20 ವರ್ಷ ಕಾಲ ಎರಡು ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ಕಡಿಮೆಯಾಗಿತ್ತು. ತತ್ಪರಿಣಾಮವಾಗಿ ಬರಗಾಲ, ಜ್ವಾಲಾಮುಖಿ ಇತ್ಯಾದಿಗಳು ಭೂವಾಸಿಗಳನ್ನು ಹೈರಾಣಗೊಳಿಸಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಈಗ ಆ ಸಂದರ್ಭ ಮರುಕಳಿಸುತ್ತಿದೆಯಂತೆ. ಕೋವಿಡ್-19 ವೈರಾಣು ದಾಳಿಯಿಂದ ಕಂಗೆಟ್ಟಿರುವ ಮನುಷ್ಯ ಪ್ರಾಣಿ ಈಗ ಪ್ರಕೃತಿ ವಿಕೋಪಗಳನ್ನ ಎದುರಿಸಬೇಕಾಗಿದೆ.