
ವರದಿ : ಸಿರಾಜುದ್ದೀನ್ ಬಂಗಾರ
ಮ್ಯಾನ್ಹೋಲ್ನ ಸುತ್ತಲು ಮಣ್ಣು ಆವರಿಸಿ ಕಾರ್ಮಿಕನ ತಲೆ ಮಾತ್ರ ಕಾಣಿಸುತ್ತಿತ್ತು. ತಲೆಗೆ ಹೆಲ್ಮೆಟ್ ಹಾಕಿಸಿ ಕಲ್ಲುಗಳು ಬೀಳದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಮ್ಯಾನ್ಹೋಲ್ನಲ್ಲಿ ಸಿಲುಕಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದ ಕಾರ್ಮಿಕನನ್ನು ರಕ್ಷಿಸಿರುವ ಘಟನೆ ಹುಬ್ಬಳ್ಳಿಯ ಬೈಲಪ್ಪನವರ ನಗರದಲ್ಲಿ ನಡೆದಿದೆ. ಕಾರ್ಮಿಕ ಶ್ರೀನಾಥ್ ಮೊರಬದ ಚರಂಡಿ ರಿಪೇರಿ ಮಾಡಲು ಮ್ಯಾನ್ಹೋಲ್ಗೆ ಇಳಿದಿದ್ದ. ಈ ವೇಳೆ ಮೈಮೇಲೆ ದಿಢೀರನೆ ಮಣ್ಣಿನ ಗುಡ್ಡೆ ಕುಸಿದಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ 3 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.
ಉಪನಗರ ಠಾಣೆ ಪೊಲೀಸರು ಮತ್ತು ಸ್ಥಳೀಯ ನಾಗರಿಕರು ಅಗ್ನಿಶಾಮಕ ಸಿಬ್ಬಂದಿಗೆ ಕೈಜೋಡಿಸಿದರು. ಇತ್ತೀಚೆಗೆ ಸುರಿದ ಮಳೆಯಿಂದ ಮಣ್ಣು ಹಸಿಯಾಗಿತ್ತು. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಮತ್ತಷ್ಟು ಮಣ್ಣು ಕೆಳಗೆ ಕುಸಿಯುವ ಆತಂಕ ಎದುರಾಗಿತ್ತು. ಚರಂಡಿಯಾದ ಕಾರಣ ನೀರು ತುಂಬಿ ಹರಿದು ಮಣ್ಣೆಲ್ಲ ಹಸಿಯಾಗಿತ್ತು. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಅಗ್ನಿಶಾಮಕ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಕುಸಿದಿದ್ದ ಮಣ್ಣನ್ನು ಜಾಗರೂಕತೆಯಿಂದ ತೆಗೆದಿದ್ದಾರೆ. ಜೆಸಿಬಿ ಬಳಸಿ ಸುತ್ತಲೂ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದ್ದಾರೆ. ಕರ್ಕಿ ಬಸವೇಶ್ವರ ನಗರದ ಕಾರ್ಮಿಕ ಶ್ರೀನಾಥ್ ಮೊರಬದ್ಗೆ ಎದೆಗುಂದದಂತೆ ಧೈರ್ಯ ಹೇಳಿದ್ದಾರೆ.
ಮ್ಯಾನ್ಹೋಲ್ನ ಸುತ್ತಲು ಮಣ್ಣು ಆವರಿಸಿ ಕಾರ್ಮಿಕನ ತಲೆ ಮಾತ್ರ ಕಾಣಿಸುತ್ತಿತ್ತು. ತಲೆಗೆ ಹೆಲ್ಮೆಟ್ ಹಾಕಿಸಿ ಕಲ್ಲುಗಳು ಬೀಳದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕಿಮ್ಸ್ ಆಸ್ಪತ್ರೆಯಿಂದ ಆಂಬುಲೆನ್ಸ್ ಅನ್ನು ಕರೆಸಲಾಗಿತ್ತು. ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ವೈದ್ಯಕೀಯ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಮಿಕ ಶ್ರೀನಾಥ ಮೊರಬದನನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ. ಗಾಬರಿಗೊಂಡಿದ್ದ ಕಾರ್ಮಿಕನಿಗೆ ನೀರುಕೊಟ್ಟು ಉಪಚರಿಸಿದ್ದಾರೆ.
ಸ್ಥಳದಲ್ಲಿದ್ದ 108 ಸಿಬ್ಬಂದಿ ಕಾರ್ಮಿಕನ ಆರೋಗ್ಯ ತಪಾಸಣೆ ಮಾಡಿದ್ದಾರೆ. ನಂತರ ಆಂಬುಲೆನ್ಸ್ ನಲ್ಲಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶ್ರೀನಾಥ್ ಮೈಗೆ ತೆರಚಿದ ಗಾಯಗಳಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಕಟ್ಟಡ ಕಾರ್ಮಿಕನಾಗಿದ್ದ ಶ್ರೀನಾಥ್ ಲಾಕ್ಡೌನ್ನಿಂದ ಕೆಲಸವಿಲ್ಲದೆ ಕಂಗಾಲಾಗಿದ್ದ. ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಕೆಲಸಕ್ಕೆ ಬಂದಿದ್ದ. ಚರಂಡಿ ರಿಪೇರಿ ಮಾಡುವ ಕೆಲಸ ಸಿಕ್ಕಿದ್ದರಿಂದ ಮ್ಯಾನ್ಹೋಲ್ಗೆ ಇಳಿದು ರಿಪೇರಿ ಕೆಲಸದಲ್ಲಿ ತೊಡಗಿದ್ದಾಗ ಅವಘಡ ಸಂಭವಿಸಿದೆ.
ಅದೃಷ್ಟವಶಾತ್ ಕಾರ್ಮಿಕ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಬಂದಿದ್ದ ಕಾರ್ಮಿಕ ಕುಟುಂಬದವರು ಗೋಳಾಡಲು ಪ್ರಾರಂಭಿಸಿದ್ದರು. ಶ್ರೀನಾಥ್ ಸುರಕ್ಷಿತವಾಗಿ ಹೊರಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಅವರ ಪ್ರಾರ್ಥನೆ ಫಲ ಕೊಟ್ಟಿದೆ. ಬಡ ಕಾರ್ಮಿಕ ಶ್ರೀನಾಥ ಸಾವು ಗೆದ್ದು ಬಂದಿದ್ದಾನೆ.