
ವರದಿ : ಮೋಹನ ತುಮಕೂರು, ಕರ್ನಾಟಕ-ಜ್ವಾಲೆ
ತುಮಕೂರು: ತೆಂಗು ಕೊಬ್ಬರಿ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆ ಕಲ್ಪತರು ನಾಡು ಎಂದೇ ಪ್ರಸಿದ್ದಿಯನ್ನ ಪಡೆದಿದೆ. ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳು, ದೇವಾಲಯಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಇಸ್ರೋ ಸೇರಿದಂತೆ ದೊಡ್ಡ ದೊಡ್ಡ ತಂತ್ರಜ್ಞಾನಾಧರಿತ ಸಂಸ್ಥೆಗಳು ಜಿಲ್ಲೆಯಲ್ಲಿ ತಲೆಯೆತ್ತಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ತುಮಕೂರು ಜಿಲ್ಲೆ ಗುರುತಿಸಿಕೊಂಡಿದೆ. ಇದರ ಮುಡಿಗೆ ಸೇರಿಕೊಳ್ಳಲು ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಮೇಲ್ಗಾಲುವೆ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ.
ಎತ್ತಿನಹೊಳೆ ಯೋಜನೆಯಡಿ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲ ಭಾಗಗಳಿಗೆ ಕುಡಿಯುವ ನೀರನ್ನ ಒದಗಿಸುವ ಗುರಿ ಇದೆ. ಈ ಏಳು ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಅನುಕೂಲವಾಗಲಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಈ ಯೋಜನೆಯಡಿ 527 ಸಣ್ಣ ನೀರಾವರಿ ಕೆರೆಗಳನ್ನ ತುಂಬಿಸಲು ಯೋಜನೆ ರೂಪಿಸಲಾಗಿದೆ.
ಎತ್ತಿನಹೊಳೆ ಯೋಜನೆಯ ಎರಡನೇ ಹಂತದ ಗುರುತ್ವಾ ಕಾಲುವೆಯ ನಾಲಾ ಸರಪಳಿ (199.620 ಕಿ.ಮೀ.) ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ವ್ಯಾಪ್ತಿಯಿಂದ (210.090 ಕಿ ಮೀ) ತುಮಕೂರು ತಾಲ್ಲೂಕಿನ ಬೆಳ್ಳಾವಿ ಹೋಬಳಿ ವ್ಯಾಪ್ತಿವರೆಗೆ ಒಟ್ಟು 10.47 ಕೀ ಮೀ ಉದ್ದದ ಮೇಲ್ಗಾಲುವೆ ನಿರ್ಮಾಣವಾಗುತ್ತಿದೆ. ಇದು ಏಶ್ಯಾದಲ್ಲೇ ಎರಡನೇ ಅತಿ ಎತ್ತರದ ಹಾಗು ಉದ್ದದ ಎರಡನೇ ಅತಿದೊಡ್ಡ ಮೇಲ್ಗಾಲುವೆಯಾಗಿ ಗುರುತಿಸಿಕೊಳ್ಳಲಿದೆ. ವಿಜಯಪುರ ಜಿಲ್ಲೆಯ ತಿಡಗುಂಡಿ ಗ್ರಾಮದ ಬಳಿ ನಿರ್ಮಾಣವಾಗಿರುವ ಮೇಲ್ಗಾಲುವೆ 14.73 ಕೀ ಮಿ ಉದ್ದವಿದ್ದು ಮೊದಲನೆ ಮೇಲ್ಗಾಲುವೆ ಎನ್ನಲಾಗಿದೆ.
10.47 ಕೀ ಮಿ ಉದ್ದದ ಮೇಲ್ಗಾಲುವೆ ಅತಿ ಹೆಚ್ಚು ಅಂದರೆ 40.75 ಮೀಟರ್ ಎತ್ತರವನ್ನ ಹೊಂದಿದೆ. ಇದಕ್ಕೆ 522 ಪಿಲ್ಲರ್ಗಳಿದ್ದು, ಭುಮಿಯ ಒಳಗೆ 115 ಪಿಲ್ಲರ್ಗಳ ಪೌಂಡೇಷನ್ ಹಾಕಲಾಗಿದೆ. 407 ಪಿಲ್ಲರ್ಗಳನ್ನು ಮೇಲ್ಭಾಗದಲ್ಲಿ ನಿಲ್ಲಿಸಲಾಗಿದೆ. ಮೇಲ್ಗಾಲುವೆಯಲ್ಲಿ 3,300 ಕ್ಯೂಸೆಕ್ಸ್ ನೀರು ಹರಿಯುವಂತೆ 4.75X6.15 ಅಳತೆಯ ಎರಡು ತೊಟ್ಟಿಗಳನ್ನ ಸೆಲ್ಪ್ ಕಾಂಪ್ಯಾಕ್ಟಿಂಗ್ ಕಾಂಕ್ರೀಟ್ ಬಳಸಿ ನಿರ್ಮಾಣ ಮಾಡಲಾಗಿದೆ. 500 ಟನ್ ಸಾಮರ್ಥ್ಯದ ಎರಡು ಕ್ರೇನ್ ಗಳನ್ನ ಬಳಸಿ ಬೃಹತ್ ಗಾತ್ರದ ತೊಟ್ಟಿಗಳನ್ನ ಪಿಲ್ಲರ್ಗಳ ಮೇಲೆ ಜೋಡಿಸಲಾಗುತ್ತಿದೆ. ಈ ತಂತ್ರಜ್ಞಾನದ ವಿನ್ಯಾಸವನ್ನ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪರಿಶೀಲನೆ ನಡೆಸಿದೆ.
ಈ ಬೃಹತ್ ಮೇಲ್ಗಾಲುವೆ ಕಾಮಾಗಾರಿ ಏಷ್ಯಾದಲ್ಲೆ ಎರಡನೆಯದಾಗಿದ್ದು ವಿದೇಶಿಗರನ್ನ ಇತ್ತ ತಿರುಗಿ ನೋಡುವಂತೆ ಮಾಡಿದೆ. ಕಾಮಗಾರಿ ಪ್ರಾರಂಭದಿಂದಲೂ ವಿದೇಶದ ಗಣ್ಯರು, ಇಂಜಿನಿಯರ್ಗಳು, ರಷ್ಯಾದಿಂದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಸ್ಥಳಕ್ಕೆ ಭೇಟಿ ನೀಡಿ ಮೇಲ್ಗಾಲುವೆ ಬಗ್ಗೆ ಅಧ್ಯಯನ ಮಾಡಿದ್ದಾರೆ