
ವರದಿ : ಸಿರಾಜುದ್ದಿನ್ ಬಂಗಾರ್
ಚಿಕ್ಕಮಗಳೂರಿನ ಮಂಗಳಮುಖಿಯರೇ ಸೇರಿ ಮಾಡಿಕೊಂಡಿರೋ ಮಡಿಲು ಸಂಘದಿಂದ ಕೊರೋನಾ ಆರಂಭವಾದಾಗಿನಿಂದ ಈ ಸೇವೆ ಮಾಡುತ್ತಿದ್ದಾರೆ. ಆದರೆ, ಯಾರಿಗೂ ಈ ವಿಷಯ ಗೊತ್ತಿಲ್ಲ. ಇವರು ಕೂಡ ಯಾರಿಗೂ ಹೇಳಿಲ್ಲ.
ಚಿಕ್ಕಮಗಳೂರು: ಮಂಗಳಮುಖಿರನ್ನು ಜನರು ನೋಡುವ ದೃಷ್ಟಿಯೇ ಬೇರೆ. ಆದರೆ, ಅವರೊಳಗೊಂದು ಮನಸ್ಸಿರುತ್ತದೆ, ಅವರಿಗೂ ಭಾವನೆಗಳಿರುತ್ತವೆ ಎಂಬುದು ಯಾರಿಗೂ ಅರ್ಥವಾಗಲ್ಲ. ಮಂಗಳಮುಖಿರನ್ನು ಕಂಡರೆ ಮುಖ ತಿರುಗಿಸಿಕೊಂಡು ಹೋಗುವವರೆ ಅಧಿಕ. ಆದರೆ, ಇಲ್ಲಿನ ಮಂಗಳಮುಖಿಯರು ಮಾಡಿರುವ ಕೆಲಸವನ್ನು ಪ್ರತಿಯೊಬ್ಬರು ಶ್ಲಾಘಿಸಲೇಬೇಕು.
ಲಾಕ್ಡೌನ್ ಸಮಯದಲ್ಲಿ ತಮಗೆ ಇತರರು ನೀಡಿದ ಆಹಾರ ಕಿಟ್ಗಳಲ್ಲಿ ಅಗತ್ಯವಿದ್ದಷ್ಟನ್ನು ಇಟ್ಟುಕೊಂಡು ಉಳಿದ ಆಹಾರ ಪದಾರ್ಥಗಳನ್ನು ಈ ಮಂಗಳಮುಖಿಯರು ಬಡ ಕೂಲಿ ಕಾರ್ಮಿಕರಿಗೆ ವಿತರಿಸಿ, ಮಾನವೀಯತೆ ಮೆರೆದಿದ್ದಾರೆ.
ಆತಂಕದಿಂದ ಇಡೀ ದೇಶವೇ ಲಾಕ್ಡೌನ್ ಆದ ಮೇಲೆ ದಾನಿಗಳು ಬಡವರಿಗೆ ದಿನಸಿ ಸಾಮಾಗ್ರಿಗಳನ್ನು ದಾನ ಮಾಡಿದ್ದಾರೆ. ಅದೇ ರೀತಿ ಇಲ್ಲಿನ ಮಂಗಳಮುಖಿಯರಿಗೂ ಹಲವು ದಾನಿಗಳು ಆಹಾರ ಪದಾರ್ಥಗಳನ್ನು ಕೊಟ್ಟಿದ್ದಾರೆ. ಅಗತ್ಯಕ್ಕಿಂತಲೂ ಹೆಚ್ಚಾಗಿಯೇ ಸಿಕ್ಕಿದ ಆಹಾರ ಕಿಟ್ಗಳನ್ನು ಈ ಮಂಗಳಮುಖಿಯರು ಇಟ್ಟುಕೊಳ್ಳದೆ ಅದನ್ನು ನೂರಾರು ಬಡವರಿಗೆ ನೀಡಿದ್ದಾರೆ.
ಮಂಗಳಮುಖಿಯರು ಯಾವುದೇ ಪ್ರಚಾರದ ಆಸೆಯಿಲ್ಲದೆ ಬಡವರಿಗೆ ಆಹಾರ ಕಿಟ್ಗಳನ್ನು ನೀಡಿದ್ದಾರೆ. ಇಂತಹ ಕೆಲಸ ಸೇವೆಯಾಗಿರಬೇಕೇ ಹೊರತು ಪ್ರಚಾರಕ್ಕಲ್ಲ ಎಂದು ಇವರು ಹಂಚುತ್ತಿರುವ ದೃಶ್ಯವನ್ನು ಸಹ ವಿಡಿಯೋ ಕೂಡ ಮಾಡಿಕೊಂಡಿಲ್ಲ. ತಮ್ಮ ನೆನಪು ಹಾಗೂ ಸಮಾಧಾನಕ್ಕಾಗಿ ಫೋಟೋ ಕ್ಲಿಕ್ಕಿಸಿಕೊಂಡು ಯಾರಿಗೂ ಹೇಳದೆ ಈ ಕಾರ್ಯ ನೆರೆವೇರಿಸಿದ್ದಾರೆ. ಜಿಲ್ಲೆಯ ಪ್ರತಿ ಭಾಗಕ್ಕೂ ಹೋಗಿ ತಮ್ಮ ಕೈಲಾದಷ್ಟು ಬಡವರಿಗೆ ಆಹಾರ ಕಿಟ್ ಕೊಡುತ್ತಿದ್ದಾರೆ. ನಾವು ಯಾರಿಗೋ ಮೆಚ್ಚಿಸುವುದಕ್ಕೋಸ್ಕರ ಈ ಕೆಲಸ ಮಾಡುತ್ತಿಲ್ಲ. ನಮ್ಮಂತಹವರು ಹಾಗೂ ಬಡವರಿಗೆ ನಮ್ಮದೊಂದು ಅಳಿಲು ಸೇವೆ ಅನ್ನೋದು ಇವರ ಅಭಿಪ್ರಾಯ.
ಚಿಕ್ಕಮಗಳೂರಿನ ಮಂಗಳಮುಖಿಯರೇ ಸೇರಿ ಮಾಡಿಕೊಂಡಿರೋ ಮಡಿಲು ಸಂಘದಿಂದ ಕೊರೋನಾ ಆರಂಭವಾದಾಗಿನಿಂದ ಈ ಸೇವೆ ಮಾಡುತ್ತಿದ್ದಾರೆ. ಆದರೆ, ಯಾರಿಗೂ ಈ ವಿಷಯ ಗೊತ್ತಿಲ್ಲ. ಇವರು ಕೂಡ ಯಾರಿಗೂ ಹೇಳಿಲ್ಲ.