
ನಿವೃತ್ತಿಗೆ ಮುಂಚಿತವಾಗಿ ಮೂರು ತಿಂಗಳು ಮೊದಲು ಎಲ್ಲಾ ಸೇವಾ ದಾಖಲೆಗಳನ್ನ ಮಹಾಲೇಖಪಾಲರಿಗೆ ಕಳುಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಕಳುಹಿಸಿದರೂ ಅಲ್ಲಿನ ಸಿಬ್ಬಂದಿ ಸರಿಯಾಗಿ ಕಳುಹಿಸಿಲ್ಲ
ಕೊರೋನಾ ಲಾಕ್ ಡೌನ್ ಕೇವಲ ಸಣ್ಣಪುಟ್ಟ ಕೆಲಸಗಾರರಿಗೆ ಮಾತ್ರ ಬಿಸಿ ಮುಟ್ಟಿಸಿಲ್ಲ. ದೊಡ್ಡ ನೌಕರಿಯಲ್ಲಿದ್ದು ನಿವೃತ್ತಿಯಾದ ಈ ಅಧಿಕಾರಿಯನ್ನೂ ಬಿಟ್ಟಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಈ ಕುಟುಂಬದವರು ಒಂದೊತ್ತಿನ ಊಟಕ್ಕೂ ಸಾಲಮಾಡಿಕೊಂಡು ಬದುಕುತ್ತಿದ್ದಾರೆ.
ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಗರದ ಜವಾಹರನಗರದಲ್ಲಿ ವಾಸವಿರುವ ಜಯತೀರ್ಥಾಚಾರ್ಯರ ಕುಟುಂಬ ಲಾಕ್ ಡೌನ್ ಹಿನ್ನೆಲೆ ಊಟಕ್ಕೆ ಸಾಲಮಾಡಿಕೊಂಡು ಬದುಕುವ ಸ್ಥಿತಿಗೆ ತಲುಪಿದೆ. ಇವರ ಪರಿಸ್ಥಿತಿಗೆ ಲಾಕ್ ಡೌನ್ ಒಂದು ಕಾರಣವಾದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳು , ಮಹಾಲೇಖಪಾಲಕರ ಕಚೇರಿ ಸಿಬ್ಬಂದಿ ಮುಖ್ಯ ಕಾರಣವಾಗಿದ್ದಾರೆ.
2019 ಜೂನ್ 30 ಕ್ಕೆ ಜಯತೀರ್ಥಾಚಾರ್ಯ ನಿವೃತ್ತಿಯಾಗಿದ್ದು 9 ತಿಂಗಳು ಕಳೆದರೂ ಇದುವರೆಗೆ ನಿವೃತ್ತಿ ವೇತನ ,ಪಿಂಚಣಿ ಯಾವುದೂ ಬಂದಿಲ್ಲ. ವಂಶಪಾರಂಪರಿಕ ನರದೌರ್ಬಲ್ಯ ಇರುವ ಜಯತೀರ್ಥಾಚಾರ್ಯ ಈಗ ಎದ್ದು ಓಡಾಡಲು ಕಷ್ಟಪಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರ ಮಗ ಪ್ರವೀಣನಿಗೂ ವಂಶಪಾರಂಪರಿಕ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು ದುಡಿಯದ ಪರಿಸ್ಥಿತಿಯಲ್ಲಿದ್ದಾನೆ.
ನಿವೃತ್ತಿ ವೇತನವೇ ಈಗ ಕುಟುಂಬಕ್ಕೆ ಆಧಾರವಾಗಿದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಿಂದ ಸರಿಯಾದ ದಾಖಲೆಗಳನ್ನ ಮಹಾಲೇಖಪಾಲಕರ ಕಚೇರಿಗೆ ಕಳುಹಿಸದ ಹಿನ್ನೆಲೆ ನಿವೃತ್ತಿ ವೇತನ ಬಿಡುಗಡೆಯಾಗುತ್ತಿಲ್ಲ.
ನಿವೃತ್ತಿಗೆ ಮುಂಚಿತವಾಗಿ ಮೂರು ತಿಂಗಳು ಮೊದಲು ಎಲ್ಲಾ ಸೇವಾ ದಾಖಲೆಗಳನ್ನ ಮಹಾಲೇಖಪಾಲರಿಗೆ ಕಳುಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಕಳುಹಿಸಿದರೂ ಅಲ್ಲಿನ ಸಿಬ್ಬಂದಿ ಸರಿಯಾಗಿ ಕಳುಹಿಸಿಲ್ಲ. ಪಿಂಚಣಿ ಮಂಜೂರಾತಿ ವಿಭಾಗಕ್ಕೆ ನಿವೃತ್ತಿಗೂ ಮುಂಚಿತವಾಗೇ ಮಾಹಿತಿ ಸಲ್ಲಿಸಬೇಕು. ಆದರೆ, ಅನಗತ್ಯ ವಿಳಂಬ ಮಾಡಿ ಕಷ್ಟಕೊಡುತ್ತಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡುವ ಶಕ್ತಿಯೂ ಇವರಲ್ಲಿಲ್ಲ. ಹೀಗಾಗಿ ಲಾಕ್ ಡೌನ್ ವೇಳೆ ಕೈ ಖಾಲಿಯಿರುವುದರಿಂದ ಮನೆ ಹತ್ತಿರದ ಕಿರಾಣಿ ಅಂಗಡಿಯಲ್ಲಿ ಸಾಲ ಮಾಡಿದ್ದಾರೆ. ಔಷಧಿ ಖರ್ಚಿಗೂ ಸಾಲಮಾಡಿ ಬದುಕುತ್ತಿದ್ದಾರೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿದರೆ ಅವರು ಕೊನೆಯ ತಿಂಗಳು ತೆಗೆದುಕೊಂಡ ವೇತನ ಸ್ಲಿಪ್, ಅವರು ಯಾರಿಗೆ ಅಧಿಕಾರಿ ವಹಿಸಿಕೊಟ್ಟಿರುವ ಬಗ್ಗೆ ಸಾರ್ವಜನಿಕ ಶಿಕ್ಚಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕಾಗಿದೆ. ತಕ್ಷಣವೇ ಈ ಬಗ್ಗೆ ಮುತುವರ್ಜಿ ವಹಿಸಲಾಗುವುದು ಎಂದು ಹೇಳಿದ್ದಾರೆ.