ಆರೋಗ್ಯ

ಲೇಖನ : ಕರೋನಾ ಸೋಂಕಿತರಲ್ಲಿನ ‌ವಿವಿಧ ಬಗೆ

  • ವಿಜಯ ಕುಮಾರ. ಎ.ಸರೋದೆ, ಪತ್ರಕರ್ತ ಹಾಗೂ ಪತ್ರಿಕೋದ್ಯಮ ಪ್ರಾಧ್ಯಾಪಕ

ಕರೋನಾ(Covid-19) ಸೋಂಕಿನ ಬಗ್ಗೆ ಸಾಮಾನ್ಯ ಜನರಲ್ಲಿ ಸಾಕಷ್ಟು ಗೊಂದಲ ಹಾಗೂ ಅನುಮಾನಗಳಿವೆ. ಸೂಕ್ತ ಜ್ಞಾನ-ಮಾರ್ಗದರ್ಶನದ ಕೊರತೆಯಿಂದ ಅನೇಕರು ಭಯ ಹಾಗೂ ಆತಂಕದಲ್ಲಿ ಜೀವಿಸುತ್ತಿದ್ದಾರೆ. ಹರಡುವಿಕೆ ಹಾಗೂ ತಮಗಾಗುವ ನೈಜ ಪರಿಣಾಮಗಳ ಅರಿವಿಲ್ಲದೇ ಸೋಂಕಿತರ ಬಗ್ಗೆ ಅನಗತ್ಯ ಅನುಮಾನ ಹಾಗೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಜನರಲ್ಲಿರುವ ಅನಗತ್ಯ ಗೊಂದಲಗಳನ್ನು ದೂರ ಮಾಡಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ. ತಾವು ಓದಿ, ಇತರರೊಂದಿಗೂ ಹಂಚಿಕೊಳ್ಳಿ.

Covid-19 ವೈರಾಣು ಸೋಂಕು ಇರುವವರಲ್ಲಿ, ಒಟ್ಟೂ 5 ಬಗೆಯ ರೋಗಿಗಳಿದ್ದಾರೆ. ವೈರಾಣು ದೇಹದೊಳಗೆ ಉಂಟುಮಾಡಿರುವ ಪರಿಣಾಮ ಹಾಗೂ ಗಂಭೀರತೆ ಆಧಾರದ ಮೇಲೆ ಈ ಕೆಳಗಿನ 5 ಬಗೆಯಲ್ಲಿ ಸೋಂಕಿತರನ್ನು ವಿಂಗಡಣೆ ಮಾಡಲಾಗಿದೆ.

ಲಕ್ಷಣಹೀನ(Asymptomatic): ಇದು Covid-19 ವೈರಾಣು ಸೋಂಕಿತನ ದೇಹದ ಮೇಲೆ ಕಡಿಮೆ ಪರಿಣಾಮ ಬೀರಿರುವ ಅಥವಾ ಪರಿಣಾಮ ಬೀರದೇ ಇರುವ ಸ್ಥಿತಿ. ಇಂಥವರಲ್ಲಿ ಬಹುತೇಕ ರೋಗಲಕ್ಷಣಗಳೇ ಇರುವುದಿಲ್ಲ.‌ ಸದ್ಯದ ಕೆಲವು ಅಂಕಿ-ಅಂಶಗಳ ಪ್ರಕಾರ 70-80 ಪ್ರತಿಶತ ಸೋಂಕಿತರಲ್ಲಿ ರೋಗಲಕ್ಷಣಗಳಿಲ್ಲ. ಸೀನುವುದು, ಕೆಮ್ಮುದು, ಜ್ವರ ಸೇರಿದಂತೆ ಯಾವುದೇ ಲಕ್ಷಣಗಳಿಲ್ಲದಿರುವುದರಿಂದ ಇಂಥವರಿಂದ ಬೇರೆಯವರಿಗೆ ವೈರಾಣು ಹರಡುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿನ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಆರೋಗ್ಯಯುತ ದೇಹಸ್ಥಿತಿ(ಯುವಕರು ಮತ್ತು ಮಧ್ಯ ವಯಸ್ಕರು) ಹಾಗೂ ರೋಗನಿರೋಧಕ ಶಕ್ತಿ ಚೆನ್ನಾಗಿರುವುದು ಲಕ್ಷಣಹೀನತೆಗೆ ಕಾರಣ, ಆದರೂ ನಾಲಿಗೆ ರುಚಿ ಇಲ್ಲದಿರುವುದು, ಮೂಗಿನ ಘ್ರಹಣ ಶಕ್ತಿ ಕ್ಷೀಣಿಸಿರುವಂತಹ ಅಲ್ಪ ಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. 3-4 ದಿನಗಳಲ್ಲಿ ಸೋಂಕಿನಿಂದ ಪೂರ್ಣ ಹೊರಬರುವ ಸಾಧ್ಯತೆ ಇರುತ್ತದೆ.

ಅಲ್ಪ ಲಕ್ಷಣಗಳು(Mild Symptomatic): ಈ ಬಗೆಯ ಸೋಂಕಿತರಲ್ಲಿ ವೈರಾಣು ಅಲ್ಪ ಪ್ರಮಾಣದ ಪ್ರಭಾವ ಬೀರಿರುತ್ತದೆ. ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಉಸಿರಾಟದ ತೊಂದರೆಯಂತಹ ಸಾಮಾನ್ಯ ಲಕ್ಷಣಗಳು ಕಂಡುಬರುತ್ತದೆ(ಕೆಲವು ಅಥವಾ ಎಲ್ಲಾ). ರೋಗಲಕ್ಷಣಗಳಿಗೆ ನೀಡಲಾಗುವ ಸಾಮಾನ್ಯ ಔಷಧ ಹಾಗೂ ಚಿಕಿತ್ಸೆಯ ಮೂಲಕ ರೋಗಿ ಸೋಂಕಿನಿಂದ ಸಂಪೂರ್ಣ ಗುಣವಾಗುವ ಸಾಧ್ಯತೆ ಇರುತ್ತದೆ, ಹಾಗಾಗಿ ಹೆದರುವ ಅವಶ್ಯಕತೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಗುಂಪಿನವರು ಸುಧಾರಿಸಲು(ಸೋಂಕು ಮುಕ್ತರಾಗಲು) 8-10 ದಿನಗಳ ಸಮಯ ಬೇಕಾಗುತ್ತದೆ.

ಮಧ್ಯಮ(Moderate): ದೀರ್ಘ ಕಾಲಿಕ ಜ್ವರ ಸೇರಿದಂತೆ ಅನಿಯಂತ್ರಿತ ನೆಗಡಿ, ಕೆಮ್ಮು ಅಥವಾ ಉಸಿರಾಟದ ತೊಂದರೆ ಇರುವವರು ಈ ಗುಂಪಿಗೆ ಸೇರುತ್ತಾರೆ. ರೋಗನಿರೋಧಕ ಶಕ್ತಿ ಕಡಿಮೆ ಇರುವುದು ಅಥವಾ ಬೇರಾವುದೇ ಸಣ್ಣಪುಟ್ಟ ರೋಗಗಳಿಂದ ಬಳಲುತ್ತಿರುವುದು(ಉದಾ. ಸಕ್ಕರೆ ಕಾಯಿಲೆ) ಅಥವಾ ಆಗತಾನೇ ಬೇರೆ ಕಾಯಿಲೆ/ರೋಗ/ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿರುವುದು ಈ ಸ್ಥಿತಿಗೆ ಕಾರಣ. ಈ ಬಗೆಯ ಸೋಂಕಿತರು ರೋಗ ಉಲ್ಬಣವಾಗದಿರಲು(ಮುಂದಿನ ಹಂತಕ್ಕೆ ತಲುಪದಿರಲು) ವೈದ್ಯಕೀಯ ನಿಗಾವಣೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ರೋಗಿಯ ಸ್ಥಿತಿಯನ್ನಾಧರಿಸಿ 10-20 ದಿನಗಳ ಕಾಲ ಚಿಕಿತ್ಸೆ ಬೇಕಾಗುತ್ತದೆ.

ತೀವ್ರಸೋಂಕು(Severe): ಈ ಬಗೆಯ ಸೋಂಕಿತರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೃದಯ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಕಿಡ್ನಿ ಸಮಸ್ಯೆ ಅಥವಾ ಬೇರಾವುದೇ ಗಂಭೀರ ಶಸ್ತ್ರಚಿಕಿತ್ಸೆ/ಕಾಯಿಲೆಗೆ ಒಳಗಾದವರು ತೀವ್ರ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಈಗಾಲೇ ಇರುವ ಗಂಭೀರ ಕಾಯಿಲೆಯಿಂದ(ಗಂಭೀರ ಶಸ್ತ್ರಚಿಕಿತ್ಸೆಗಳೂ ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ) ರೋಗನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಕುಂದಿರುವ ಸ್ಥಿತಿ Covid-19 ಸೋಂಕು ತೀವ್ರಗೊಳ್ಳಲು ಕಾರಣ. ಹಾಗಾಗಿ ರೋಗ ಉಲ್ಬಣಗೊಂಡು, ತೀವ್ರ ಸಂಕಷ್ಟಕ್ಕೆ ಗುರಿಯಾಗದಿರಲು ಪೂರ್ಣ ಪ್ರಮಾಣದ ವೈದ್ಯಕೀಯ ನಿಗಾವಣೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಗಂಭೀರ(Critical): ಇದು ಸೋಂಕು ಉಲ್ಬಣಗೊಂಡ ಸ್ಥಿತಿ. ರೋಗಿಯ ರೋಗನಿರೋಧಕ ಶಕ್ತಿ ಪೂರ್ತಿ ಕುಂದಿ, ಬದುಕು-ಸಾವಿನ ನಡುವೆ ಹೋರಾಡುವ ಸಂದರ್ಭ ಎದುರಾಗುತ್ತದೆ. ರೋಗಿಯ ಪರಿಸ್ಥಿತಿಯನ್ನಾಧರಿಸಿ ಅಗತ್ಯ ಚಿಕಿತ್ಸೆ ದೊರೆಯದೇ ಇದ್ದಲ್ಲಿ, ದೇಹಪರಿಸ್ಥಿತಿ ಕೈಮೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ನಿಗಾವಣೆಯೊಂದಿಗೆ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಈ ಮೇಲಿನ ಐದೂ ಲಕ್ಷಣಗಳನ್ನು ಮುಖ್ಯವಾಗಿ ಇರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲಿನ ಎರಡು ಅಪಾಯಕರವಲ್ಲದ ಹಾಗೂ ನಂತರದ ಮೂರು ಸಂಭಾವ್ಯ ಅಪಾಯಕರ ಗುಂಪಿಗೆ ಸೇರುತ್ತವೆ. ಅಪಾಯಕರವಲ್ಲದ ಗುಂಪಿಗೆ ಸೇರಿರುವವರಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇರುವುದಿಲ್ಲ. ಚಿಕಿತ್ಸೆ ಇಲ್ಲದೇ(ಲಕ್ಷಣಹೀನ ಸ್ಥಿತಿಗೆ ಮಾತ್ರ) ಅಥವಾ ಸಾಮಾನ್ಯ ಚಿಕಿತ್ಸೆಯ ಮೂಲಕ ಸೋಂಕಿನಿಂದ ಮುಕ್ತವಾಗುವ ಎಲ್ಲಾ ಸಾಧ್ಯತೆ ಇರುತ್ತದೆ. ಆರೋಗ್ಯವಾಗಿರುವ ಯುವಕರು ಹಾಗೂ ಮಧ್ಯವಯಸ್ಕರು ಈ ಗುಂಪಿನಲ್ಲಿ ಹೆಚ್ಚಾಗಿ ಕಂಡುಬಂದಿದ್ದಾರೆ. ಇನ್ನುಳಿದಂತೆ 70+ ವಯಸ್ಸಾದವರು ಹಾಗೂ ವಿವಿಧ ಕಾಯಿಲೆಗಳಿಂದ(ಸಣ್ಣ ಮತ್ತು ಗಂಭೀರ) ಬಳಲುತ್ತಿರುವವರು ಸಂಭಾವ್ಯ ಅಪಾಯದ ಗುಂಪಿಗೆ ಸೇರುತ್ತಾರೆ(ಪೂರ್ಣ ಆರೋಗ್ಯ ಸ್ಥಿತಿ ಹೊಂದಿರುವ ಇಳಿ ವಯಸ್ಕರಿಗೆ ಕೂಡ ಅಪಾಯದ ಸಂಭವನೀಯತೆ ಕಡಿಮೆ). ಲಕ್ಷಣಹೀನ(Asymptomatic) ಸ್ಥಿತಿಯವರಿಗೆ ಒಂದಷ್ಟು ಮುನ್ನೆಚ್ಚರಿಕಾ ಕ್ರಮ ಹಾಗೂ ಕರಾರಿನೊಂದಿಗೆ ಗೃಹ ದಿಗ್ಬಂಧನದಲ್ಲಿರಲು(Home Quarantine) ಕರ್ನಾಟಕ ರಾಜ್ಯ ಸರ್ಕಾರದ ಕೆಲ ದಿನಗಳ ಹಿಂದಷ್ಟೇ ಅನುಮತಿ ನೀಡಿದೆ. ಅಂಥವರು ಮನೆಯಲ್ಲಿದ್ದುಕೊಂಡೇ(ಶೌಚಾಲಯ ವ್ಯವಸ್ಥೆ ಇರುವ ಪ್ರತ್ಯೇಕ ಕೋಣೆಯಲ್ಲಿ, ಮನೆಯ ಇತರ ಸದಸ್ಯರ ಸಂಪರ್ಕಕ್ಕೆ ಬರದ ರೀತಿಯಲ್ಲಿ) ಸ್ವಯಂ ಚಿಕಿತ್ಸೆ ಅಥವಾ ವೈದ್ಯಕೀಯ ಸಲಹೆ ಪಡೆಯಬಹುದಾಗಿದೆ. ಉತ್ತಮ ದೇಹಸ್ಥಿತಿಯ ಯುವಕರು, ಮಧ್ಯವಯಸ್ಕರು ಸೇರಿದಂತೆ ಆರೋಗ್ಯವಾಗಿರುವವರಾರೂ Covid-19 ಬಗ್ಗೆ ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ. ವೈಯಸ್ಕರು ಹಾಗೂ ರೋಗಿಗಳು ಮಾತ್ರ ಸೋಂಕು ತಗುಲದಂತೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close