ಕರ್ನಾಟಕ ಸುದ್ದಿ

ಡಿಕೆಶಿ,ಹೆಚ್ಡಿಕೆ ಆಂತರಿಕವಾಗಿ ಬಿಜೆಪಿ ಸರ್ಕಾರದ ಜೊತೆಗಿದ್ದಾರೆ – ಸಿಪಿ ಯೋಗೆಶ್ವರ್

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇಬೇಕು ಎಂಬ ಕುತಂತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇಬ್ಬರೂ ಒಂದಾಗಿದ್ದರು. ನಾನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಇವರ ಕುತಂತ್ರದಿಂದ ನಾನು ಸೋಲಬೇಕಾಯಿತು ಎಂದು ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡ ಸಿಪಿ ಯೋಗೇಶ್ವರ್ ಅವರು ಹೇಳಿದ್ದಾರೆ. 

ಇಂದು (ಗುರುವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್‌ ಇವರಿಬ್ಬರ ಸಂದರ್ಭೋಚಿತ ಕುತಂತ್ರದ ವಿರುದ್ಧ ಹೋರಾಟ ಮಾಡುತ್ತೇನೆ. ನನ್ನ ವಿರುದ್ಧ ಸ್ಪರ್ಧೆ ಮಾಡೋದು ಬೇಡ ಅಂತಾ ಹಿತೈಷಿಗಳು ಸಲಹೆ ಕೊಟ್ಟರೂ ಕುಮಾರಸ್ವಾಮಿ ಕೇಳದೇ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು. ಇವತ್ತು ಭಾವನಾತ್ಮಕ ಭಾಷೆಗಳನ್ನು ಬಳಸಿ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನು ಮುಂದೆಯೂ ಕೂಡಾ ಕಣ್ಣೀರು ಹಾಕಿಕೊಂಡೇ ಇರಬೇಕು. ಕುಮಾರಸ್ವಾಮಿ ಮೇಲೆ ರಾಜ್ಯದ ಜನಕ್ಕೆ ಯಾವುದೇ ಭರವಸೆ ಇಲ್ಲ. ಜೆಡಿಎಸ್ ಮುಗಿದ ಅದ್ಯಾಯವಾಗಿದೆ ಎಂದು ಹೆಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 

ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯವಾಗಿ ಆಶ್ರಯ ಪಡೆಯಲು ಒಂದು ಪಕ್ಷದ ಅವಶ್ಯಕತೆ ಇತ್ತು. ಕಾಂಗ್ರೆಸ್ ಕೂಡಾ ಮುಳುಗುತ್ತಿರುವ ಹಡಗು ಅಗಿದೆ. ಡಿ.ಕೆ.ಶಿವಕುಮಾರ್ ಮತ್ತು ಎಚ್ಡಿಕೆ ಇಬ್ಬರೂ ಹೊರನೋಟಕ್ಕೆ ವಿರೋಧ ಮಾಡುತ್ತಾರೆ. ಆದರೆ ಆಂತರಿಕವಾಗಿ ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಜೊತೆ ಇದ್ದಾರೆ. ಇಬ್ಬರೂ ಕೂಡಾ ನಿಷ್ಪ್ರಯೋಜಕ ಮುಖಂಡರಾಗಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯವಾಗಿ ಸಕ್ರಿಯನಾಗಿದ್ದ ನಾನು ನಿರುದ್ಯೋಗಿಯಾಗಿದ್ದೆ. ಈಗ ಪಕ್ಷ ನನ್ನ ಸೇವೆಯನ್ನು ಗಮನಿಸಿ ನನಗೆ ಅವಕಾಶ ಕೊಟ್ಟಿದೆ. ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇನೆ. ಸೋತವರಿಗೆ ಅವಕಾಶ ಕೊಟ್ಟರು ಅನ್ನೋ ಪ್ರಶ್ನೆ ಇಲ್ಲ, ಪಕ್ಷದ ಕೆಲಸ ಮಾಡಿದವರಿಗೆ ಅವಕಾಶ ಕೊಟ್ಟಿದೆ. ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close