ರಾಯಚೂರು ಜಿಲ್ಲೆ ಸುದ್ದಿ

ರಾಯಚೂರು : ಮನೆ-ಮನೆಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿರುವ ಮಾದರಿ ಶಿಕ್ಷಕರು

ವರದಿ : ಸಿರಾಜುದ್ದೀನ್ ಬಂಗಾರ್ ಸಿರವಾರ

ರಾಯಚೂರು(ಜು.22): 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯವಾಗುವ ಸಂದರ್ಭದಲ್ಲಿ ವಕ್ಕರಿಸಿದ ಮಹಾಮಾರಿ ಕೊರೋನಾ ಇನ್ನೂ ಹರಡುತ್ತಲೇ ಇದೆ. ಹೀಗಾಗಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಪಾಠಗಳು ಕೂಡ ಯಾವಾಗ ಆರಂಭವಾಲಿವೆ? ಎಂಬುದರ ಬಗ್ಗೆ ಖಾತ್ರಿಯಿಲ್ಲ. ಈ ಮಧ್ಯೆ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಶಿಕ್ಷಕರು ಮನೆ ಮನೆ ಪಾಠ, ವಠಾರದ ಪಾಠಗಳನ್ನು ಆರಂಭಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಮಕ್ಕಳಿಗಾಗಿ ಆನ್​​ಲೈನ್​ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಸರ್ಕಾರಿ ಶಾಲಾ ಮಕ್ಕಳಿಗೆ ಆನ್​​ಲೈನ್ ಶಿಕ್ಷಣವು ಇಲ್ಲ, ಶಾಲೆಗೂ ಹೋಗುವಂತಿಲ್ಲ. ಹೀಗಿರುವಾಗಲೇ ಸರ್ಕಾರಿ ಶಾಲೆಯ ಮಕ್ಕಳು ಓದಿನಿಂದ ದೂರವಾಗಬಾರದು. ಶಿಕ್ಷಣದ ನಿರತಂತೆ ಇರಬೇಕು ಎನ್ನುವ ಕಾರಣಕ್ಕೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ‌ ಕೆಸರಟ್ಟಿ ಎಂಬ ಗ್ರಾಮದಲ್ಲಿ ಶಿಕ್ಷಕರು ಮನೆ ಮನೆಗೆ ಹೋಗಿ ಪಾಠ ಮಾಡುತ್ತಿದ್ದಾರೆ.

ಇಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇಯ ತರಗತಿಯವರೆಗೂ 185 ಮಕ್ಕಳು ಓದುತ್ತಿದ್ದಾರೆ. ಈಗ ಶಾಲೆ ಇಲ್ಲದೆ ಇರುವದರಿಂದ ಮಕ್ಕಳು ಓದಿನ‌ ಕಡೆ ಗಮನಹರಿಸಿಲ್ಲ. ಅದಕ್ಕಾಗಿ ಪಾಠಗಳ ಪುನರ್ಮನನ, ಪರಿಸರ, ಸಮಾನ್ಯ ಜ್ಞಾನ, ಪಠ್ಯಗಳ ಅಧ್ಯಯನ, ಮಕ್ಕಳಲ್ಲಿ ಕೊರೋನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಕೆಸರಟ್ಟಿ ಎಂಬ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂಟು ಶಿಕ್ಷಕರು ಇದ್ದಾರೆ. ನಿತ್ಯ ಶಾಲೆಗೆ ಬರುವ ಅವರು ಮನೆ ಮನೆಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಇದೇ ಶಿಕ್ಷಕರು ಗ್ರಾಮವನ್ನು ಬಯಲು ಬಹಿರ್ದಸೆ ಮುಕ್ತ ಮಾಡುವ ಉದ್ದೇಶದಿಂದ‌ ಮನೆಗಳಲ್ಲಿ ಜಾಗೃತಿ ಮೂಡಿ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೇರಿಪಿಸುತ್ತಿದ್ದಾರೆ.

ಶಿಕ್ಷಕರ ಈ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಕೊರೋನಾ ಕಾರಣದಿಂದಾಗಿ ಶಾಲೆಗಳು ಬಂದ್​ ಆಗಿವೆ. ಹೀಗಾಗಿ ಮಕ್ಕಳಲ್ಲಿ ಕಲೆಯನ್ನು ಪ್ರೋತ್ಸಾಹಿಸಲು, ಸಮಾನ್ಯ ಜ್ಞಾನ ಹೆಚ್ಚಿಸಲು ಭಾರತ ಜ್ಞಾನ ವಿಜ್ಞಾನ ಸಮಿತಿಯ ಆಶಯದಂತೆ ಅಲ್ಲಲ್ಲಿ ವಠಾರ ಶಾಲೆಗಳನ್ನು‌ ಆರಂಭಿಸಿದ್ದಾರೆ.

ಆಸಕ್ತ ಮಕ್ಕಳನ್ನು ತಮ್ಮ ವಠಾರಗಳಲ್ಲಿ ಕೂಡಿಸಿ ಅವರಿಗೆ ಚಿತ್ರಕಲೆ, ಪರಿಸರ ಅಧ್ಯಯನ, ಸಾಮಾನ್ಯ ಅಧ್ಯಯನವನ್ನು‌ ಮಾಡಿಸುತ್ತಿದ್ದಾರೆ. ಮಸ್ಕಿಯ ಗುಂಡುರಾವ್ ದೇಸಾಯಿ ಹಾಗು ಗೊಣ್ಣಿಗನೂರಿನ ಕೋಟ್ರೇಶ ಎಂಬ ಶಿಕ್ಷಕರು ಈಗ ವಠಾರ ಶಾಲೆ ಆರಂಭಿಸಿದ್ದು ಅವರಿಗೆ ಪಾಲಕರು ಹಾಗು ಮಕ್ಕಳದ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಮಕ್ಕಳೊಂದಿಗೆ ಗೊಣ್ಣಿಗನೂರಿನ ಶಾಲೆಯ ಆವರಣದಲ್ಲಿ ಗ್ರಾಮದಲ್ಲಿ ಹಳೆಯ ಮೂರ್ತಿಗಳನ್ನು ತಂದು ಅವುಗಳಿಗೆ ಕಟ್ಟೆಗಳನ್ನು ಕಟ್ಟಿಸಿ ಸಣ್ಣ ಮ್ಯೂಸಿಯಂ ತರಹ ಮಾಡಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕರು ಶಿಕ್ಷಣದ ಬಗ್ಗೆ ಕಾಳಜಿವಹಿಸಿ ತಮ್ಮ ಕರ್ತವ್ಯ ಮಾಡಲು ಸರ್ಕಾರದ ಆದೇಶಕ್ಕಾಗಿ ಕಾಯುತ್ತಾ ಕುಳಿತುಕೊಂಡಿಲ್ಲ. ಬದಲಿಗೆ ಮಕ್ಕಳಲ್ಲಿ ಆಸಕ್ತಿ, ಓದಿನ ಅಭಿರುಚಿ ಬೆಳೆಸುತ್ತಿರುವದಕ್ಕೆ ಇವರು ಸಾಕ್ಷಿಯಾಗಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close