ಅಂತರಾಷ್ಟ್ರೀಯ

ಇಂದು ರಾಜ್ಯಸಭಾ ಸದಸ್ಯರಾಗಿ ಮಲ್ಲಿಕಾರ್ಜುನ ಖರ್ಗೆ ಸೇರಿ 60 ಜನ ಪ್ರಮಾಣ ವಚನ ಸ್ವೀಕಾರ, ದೇವೇಗೌಡ ಗೈರು

Posted By: Sirajuddin Bangar

Source:NS18

ನವದೆಹಲಿ(ಜುಲೈ.22): ಕಾಂಗ್ರೆಸ್ ಹಿರಿಯ ನಾಯಕ, ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ದೇಶದ 20 ರಾಜ್ಯಗಳಿಂದ ಹೊಸದಾಗಿ ಆಯ್ಕೆ ಆಗಿರುವ 61 ರಾಜ್ಯಸಭಾ ಸದಸ್ಯರಿಗೆ ಇಂದು ಪ್ರಮಾಣ ವಚನ ಬೋಧಿಸಲಾಗುತ್ತದೆ.

ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಯತ್ತಿರುವ ಕಾರಣಕ್ಕಾಗಿ ರಾಜ್ಯಸಭೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮವನ್ನು ಸ್ಪೀಕರ್ ಚೇಂಬರ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ನೂತನ ಸದಸ್ಯರು ಸದನದಲ್ಲೇ ಪ್ರಮಾಣ ವಚನ ಸ್ವೀಕರಿಸುವುದು ಈವರೆಗೆ ನಡೆದುಕೊಂಡುಬಂದ ಸಂಪ್ರದಾಯವಾಗಿದೆ.

ಇದೇ ತಿಂಗಳಲ್ಲಿ ನಡೆಯಬೇಕಿದ್ದ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಯುವುದು ಡೋಲಾಯಮಾನವಾಗಿರುವುದರಿಂದ ನೂತನ ಸದಸ್ಯರಿಗೆ ಸ್ಪೀಕರ್ ಚೇಂಬರ್ ನಲ್ಲಿ  ಪ್ರಮಾಣ ವಚನ ಬೋಧಿಸಲಾಗುತ್ತದೆ‌. ಕೊರೋನಾ ಕಾರಣಕ್ಕೆ, ಸಾಮಾಜಿಕ ಅಂತರ ಕಾಪಾಡುವ ಉದ್ದೇಶಕ್ಕೆ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಸದಸ್ಯರ ಪರವಾಗಿ ಓರ್ವ ಅತಿಥಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.

ನೂತನ ಸದಸ್ಯರು ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಇಂಥ ಯಾವುದೇ ನಿರ್ಬಂಧ ಇರುತ್ತಿರಲಿಲ್ಲ. ನೂತನ ಸದಸ್ಯರಿಗೆ ಉಪ ರಾಷ್ಟ್ರಪತಿಗಳೂ ಆದ ರಾಜ್ಯಸಭೆಯ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಪ್ರಮಾಣವಚನ ಬೋಧಿಸಲಿದ್ದಾರೆ.

ಇಂದು ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಜೆಡಿಎಸ್-ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಕೂಡ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ದೇವೇಗೌಡ, ಕಡೆ ಗಳಿಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾತ್ರವೇ ದೆಹಲಿಗೆ ಬರಬೇಕು, ಅದಕ್ಕಾಗಿ ಕೊರೋನಾ ಸೋಂಕು ಹರಡುವಿಕೆ ನಡುವೆಯೂ ವಿಮಾನ ಪ್ರಯಾಣ ಮಾಡಬೇಕು ಎಂಬ ಕಾರಣಕ್ಕೆ ದೇವೇಗೌಡರು ತಮ್ಮ ಪ್ರಮಾಣ ವಚನ ಸ್ವೀಕಾರವನ್ನು ಮುಂದೂಡಿದ್ದಾರೆ. ಮುಂದಿನ ಸಂಸತ್ ಅಧಿವೇಶನದ ಸಂದರ್ಭದಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದಲ್ಲದೆ ರಾಜ್ಯದಿಂದ ಅಚ್ಚರಿಯಾಗಿ ಆಯ್ಕೆಯಾಗಿರುವ ಬಿಜೆಪಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಕೂಡ ಇಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close