ಕರ್ನಾಟಕ ಸುದ್ದಿ

ಗ್ರಾಪಂ ಚುನಾವಣೆ: ಅಕ್ಟೋಬರ್‌ ಮೊದಲ ವಾರದ ಬಳಿಕವಷ್ಟೇ ತೀರ್ಮಾನ

Posted By: Sirajuddin Bangar

Source: NS18

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಿಸುವ ಸಂಬಂಧ 2020ರ ಅಕ್ಟೋಬರ್‌ ಮೊದಲ ವಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ. ಈ ಕುರಿತು ವಿಧಾನಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ. ಆರ್‌. ನಟರಾಜ್‌ ಅವರಿದ್ದ ವಿಭಾಗೀಯ  ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲರಾದ ಹಿರಿಯ ನ್ಯಾಯವಾದಿ ಕೆ.ಎನ್‌ ಫ‌ಣೀಂದ್ರ ಅವರು ಲಿಖೀತ ಹೇಳಿಕೆ ಮಂಡಿಸಿದರು. ಮೀಸಲಾತಿ ಅವಧಿಯನ್ನು 10 ವರ್ಷಕ್ಕೆ  ಹೆಚ್ಚಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಪ್ರಕಾರ ಪಂಚಾಯಿತಿ ಸ್ಥಾನಗಳ ಮೀಸಲಾತಿ ಹಾಗೂ ಆವರ್ತನೆ ಮರು ನಿಗದಿ ಪಡಿಸಬೇಕಾಗಿದ್ದು, ಈ ಪ್ರಕ್ರಿಯೆಯನ್ನು ಜು.25ರೊಳಗೆ ಪೂರ್ಣಗೊಳಿಸಿ ಗೆಜೆಟ್‌ ಅಧಿಸೂಚನೆ  ಪ್ರಕಟಿಸಲಾಗುವುದು.

ಅಲ್ಲದೇ, ಮತದಾರರ ಪಟ್ಟಿಯನ್ನು 2020ರ ಏ.20 ರೊಳಗೆ ಅಂತಿಮಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ 2020ರ ಫೆ.3, ಮಾ.7ರಂದು ನಿರ್ದೇಶನ ನೀಡಲಾಗಿತ್ತು. ಮಾ.25ರಂದು ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಈ ಕೆಲಸ ಸ್ಥಗಿತಗೊಂಡಿತು. ಈಗ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. 2020ರ ಸೆ.10ರೊಳಗೆ ಮತದಾರರ ಪಟ್ಟಿ ಅಂತಿಮಗೊಳ್ಳಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣೆ ಘೋಷಿಸುವ ಕುರಿತು ಅಕ್ಟೋಬರ್‌ ಮೊದಲ ವಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು  ಆಯೋಗ ಹೇಳಿದೆ.

ಚುನಾವಣೆ ಮುಂದೂಡಿರುವ ಮೇ 28ರ ನಿರ್ಧಾರ ಮರು ಪರಿಶೀಲಿಸುವಂತೆ ಜೂ.17ರಂದು ಹೈಕೋರ್ಟ್‌ ನೀಡಿದ ಆದೇಶದನ್ವಯ ಆದಷ್ಟು ಬೇಗ  ಚುನಾವಣೆ ನಡೆಸುವ ಸಾಧ್ಯಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಜೂ.24ರಂದು ರಾಜ್ಯದ ಎಲ್ಲಾ 30 ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಗಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಈಗಿನ ಸ್ಥಿತಿಯಲ್ಲಿ ಚುನಾವಣೆ ನಡೆಸುವ  ಬಗ್ಗೆ ಜಿಲ್ಲಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿರುವ ವಿಚಾರವನ್ನೂ ಆಯೋಗ ಹೈಕೋರ್ಟ್‌ ಗಮನಕ್ಕೆ ತಂದಿದೆ. ಇದನ್ನು ದಾಖಲಿಸಿಕೊಂಡ ಹೈಕೋರ್ಟ್‌ ಜುಲೈ 29ಕ್ಕೆ ವಿಚಾರಣೆ ಮುಂದೂಡಿತು.

Continue

Related Articles

Leave a Reply

Your email address will not be published. Required fields are marked *

Back to top button
Close
Close