ಅಂತರಾಷ್ಟ್ರೀಯ

ಕ್ವಾರಂಟೈನ್​​ ನಿಯಮಗಳಲ್ಲಿ ರಿಯಾಯಿತಿ ನೀಡುವಂತೆ ಸಂಸದರ ಬೇಡಿಕೆ

Posted By: Sirajuddin Bangar

Source: NS18

ನವದೆಹಲಿ(ಜು.02): ವಿವಿಐಪಿ ಸಂಸ್ಕೃತಿಗೆ ತೀಲಾಂಜಲಿ ಇಡಬೇಕು ಎಂಬ ವಿಷಯ ಆಗಾಗ ಚರ್ಚೆ ಆಗುತ್ತಿರುತ್ತದೆ. ಆದರೆ ನಮ್ಮ ಜನ‌ ನಾಯಕರು‌ ಸಾಧ್ಯವಾದ ಕಡೆಯಲ್ಲೆಲ್ಲಾ ತಮ್ಮ ‘ಪ್ರಿವಿಲೈಸ್’ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಸದ್ಯ‌ ಕೊರೋನಾ ವಿಷಯದಲ್ಲೂ ಇದೇ ರೀತಿ ಆಗುತ್ತಿದೆ. ಕ್ವಾರಂಟೈನ್ ನಿಯಮಗಳಲ್ಲಿ ರಿಯಾಯಿತಿ ನೀಡುವಂತೆ ವಿವಿಧ ಪಕ್ಷಗಳ ಸಂಸದರಿಂದ ಹೊಸ ಬೇಡಿಕೆ ಇಟ್ಟಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಸಂಸದೀಯ ಸಮಿತಿಗಳ ಸಭೆಯನ್ನು ಕರೆಯಲಾಗುತ್ತಿದೆ. ಆದರೆ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಕ್ವಾರಂಟೈನ್. ಕ್ವಾರಂಟೈನ್ ಕಾರಣಕ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಸಂಸದರು ದೆಹಲಿಗೆ ಆಗಮಿಸುತ್ತಿಲ್ಲ. ಇದರಿಂದ ಸಮಿತಿಯಲ್ಲಿ ಚರ್ಚೆಯಾಗಬೇಕಿದ್ದ ಕೆಲ ಪ್ರಮುಖ ವಿಷಯಗಳು ನೆನೆಗುದಿಗೆ ಬಿದ್ದಿವೆ ಎಂದು ತಿಳಿದುಬಂದಿದೆ.

ಒಂದು ದಿನ‌ ನಡೆಯುವ ಸಂಸದೀಯ ಸಮಿತಿ ಸಭೆಗೆ ಕನಿಷ್ಟ 15 ದಿನ ವ್ಯಯ ಮಾಡಬೇಕಾಗುತ್ತದೆ. ಒಂದು ವಾರ ಮುನ್ನವೇ ದೆಹಲಿಗೆ ಬಂದು, ದೆಹಲಿಯಲ್ಲಿ 7 ದಿನ ಕ್ವಾರಂಟೈನ್ ಇದ್ದು, ಬಳಿಕ‌ ಸಭೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ಇದಾದ ಬಳಿಕ ತಮ್ಮತಮ್ಮ ರಾಜ್ಯಗಳಿಗೆ ತೆರಳಿ ಅಲ್ಲಿ ಮತ್ತೆ 7 ದಿವಸ ಅಥವಾ ಕೆಲ ರಾಜ್ಯಗಳಲ್ಲಿ 15 ದಿವಸ ಕ್ವಾರಂಟೈನ್ ಇರಬೇಕಾಗುತ್ತದೆ. ಇದರಿಂದ ಸಂಸದರಾದ ನಾವು ಕೊರೊನಾ ಮತ್ತು ಲಾಕ್ಡೌನ್ ಕಷ್ಟದ ಸಂದರ್ಭದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಲು ಕಷ್ಟವಾಗುತ್ತದೆ ಎನ್ನುವುದು ಸಂಸದರ ವಾದವಾಗಿದೆ.

ಇದು ಸಂಸದೀಯ ಸಮಿತಿಗಳ ಸಭೆಗೆ ಮಾತ್ರ ಅನ್ವಯವಾಗುವ ಸಮಸ್ಯೆಯಾಗಿಲ್ಲ. ಇದೇ ತಿಂಗಳು ನಡೆಯಬೇಕಿರುವ ಮಳೆಗಾಲದ ಸಂಸತ್ ಅಧಿವೇಶನದ ವೇಳೆಯೂ ಸಮಸ್ಯೆ ಆಗಬಹುದು. ಆದುದರಿಂದ ಸಂಸದರಿಗೆ ಕ್ವಾರಂಟೈನ್ ನಿಯಮಗಳಲ್ಲಿ ರಿಯಾಯಿತಿ ಕೊಡಿ ಎಂದು ವಿವಿಧ ಪಕ್ಷಗಳ ಸಂಸದರು ಸಂಸತ್ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಜೊತೆ ಚರ್ಚೆ ಮಾಡಿ ಸಂಸದರಿಗೆ ಕ್ವಾರಂಟೈನ್ ನಿಯಮಗಳಿಂದ ರಿಯಾಯತಿ ಕೊಡಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close