ರಾಯಚೂರು ಜಿಲ್ಲೆ ಸುದ್ದಿಸಿರವಾರ

ರಾಯಚೂರು; ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಕ್ರಮ‌ ನೀರಾವರಿ; ಕೆಳಭಾಗದ ರೈತರಿಗಿಲ್ಲ ನೀರು

ವರದಿ: ಸಿರಾಜುದ್ದೀನ್ ಬಂಗಾರ್

ರಾಯಚೂರು(ಜೂ.25): ಮುನಿರಾಬಾದ್ ಬಳಿಯಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿ ಅಕ್ರಮ‌ವಾಗಿ ನೀರು ಕದಿಯಲಾಗುತ್ತಿದೆ. ಇಲ್ಲಿಯವರೆಗೂ ಯಾರೂ ಸಹ ತಡೆಯಲು ಸಾಧ್ಯವಾಗಿಲ್ಲ. ಇದರಿಂದ ಜನಪ್ರತಿನಿಧಿಗಳ ಕೈವಾಡವಿದೆ, ಅಕ್ರಮ ನೀರಾವರಿಯಿಂದಾಗಿ ಕೆಳಭಾಗದ ಮಾನವಿ, ಸಿರವಾರ ಹಾಗೂ ರಾಯಚೂರು ತಾಲೂಕಿನ ಪ್ರದೇಶಕ್ಕೆ ನೀರು ಸಿಗುತ್ತಿಲ್ಲ. ಅಕ್ರಮ ಪತ್ತೆ ಮಾಡುವ ಉದ್ದೇಶದಿಂದ ತುಂಗಭದ್ರಾ ಹಿತರಕ್ಷಣಾ ಸಮಿತಿಯು ಸತ್ಯಶೋಧನೆಗಾಗಿ ಸಂಚರಿಸಿ ಅಕ್ರಮ ಬಯಲಿಗೆಳೆದಿದೆ.

ಮುನಿರಾಬಾದಿನಿಂದ ಆರಂಭವಾಗಿ ಬಿ ಗಣೇಕಲ್ ವರೆಗೂ ಸುಮಾರು 200 ಕಿಮೀ ದೂರದ ತುಂಗಭದ್ರಾ ಎಡದಂಡೆ ನಾಲೆಯು ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಿದೆ. ಈ ನಾಲೆಯ ನೀರಿನಿಂದ ಸೋನಾ ಮಸೂರಿ ಭತ್ತ, ಹತ್ತಿಯಂಥ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಇತ್ತೀಚಿಗೆ ರಾಯಚೂರು,  ಸಿರವಾರ ಹಾಗು ಮಾನವಿ ತಾಲೂಕಿನ ಕೆಳಭಾಗದ ರೈತರಿಗೆ ಎಡದಂಡೆ ನಾಲೆಯ ನೀರು ಸಿಗುತ್ತಿಲ್ಲ. ಕೇವಲ ಪೋತ್ನಾಳವೇಗೆ ಮಾತ್ರ ನೀರು ಸಿಗುತ್ತಿದ್ದು ಮುಂದಿನ ಭಾಗದವರು ನೀರಿಗಾಗಿ ಅಲೆದಾಡಬೇಕಾಗಿದೆ. ಇದಕ್ಕೆ ಮುಖ್ಯಕಾರಣ ಗಂಗಾವತಿ, ಕಾರಟಗಿ,  ಮಸ್ಕಿ ಹಾಗು ಸಿಂಧನೂರು ತಾಲೂಕಿನಲ್ಲಿ ಕೆಲವರು ಅಕ್ರಮವಾಗಿ ನೀರಾವರಿ ಮಾಡುತ್ತಿದ್ದಾರೆ.

ಈ ಅಕ್ರಮ ನೀರಾವರಿಯ ಬಗ್ಗೆ ಕಳೆದ ವರ್ಷ ಯಡಿಯೂರಪ್ಪ ಸಿಎಂ ಆದ ತಕ್ಷಣ, ಈ ಭಾಗದ ಜನಪ್ರತಿನಿಧಿಗಳು ರೈತರನ್ನು ಭೇಟಿಯಾಗಿ ಅಕ್ರಮ ತಡೆಯುವಂತೆ ಮನವಿ ಮಾಡಿಕೊಂಡಿದ್ದರು. ಆಗ ಪೊಲೀಸರು ಹಾಗೂ ಕಂದಾಯ, ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಮೊದಲು ಇಲ್ಲಿಯ ಅಕ್ರಮ ನೀರಾವರಿಯ ಬಗ್ಗೆ ಸಮಿಕ್ಷೆ ಮಾಡಲು ಸೂಚಿಸಿದ್ದರು, ಆದರೆ ಸಮೀಕ್ಷೆ ಮಾಡಿದ ವರದಿ ಬಹಿರಂಗಗೊಳ್ಳಲಿಲ್ಲ. ಈ‌ ಮಧ್ಯೆ ಮುಂದಿನ ದಿನಗಳಲ್ಲಿ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡಲಿದ್ದಾರೆ.

ಈ ಮುನ್ನವೇ ತುಂಗಭದ್ರಾ ಹಿತರಕ್ಷಣಾ ಸಮಿತಿಯು ಸತ್ಯಶೋಧನೆ ಮಾಡಲು ನಿಯೋಗವೊಂದು ನಾಲೆಯಲ್ಲಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮೇಲ್ಭಾಗದಲ್ಲಿ ಅಕ್ರಮವಾಗಿ 2.50 ಲಕ್ಷ ಎಕರೆ ಪ್ರದೇಶಕ್ಕೆ ನೀರು ಪಡೆಯಲಾಗುತ್ತಿದೆ. ನಾಲೆಗೆ ಪೈಪ್ ಹಾಕಿಕೊಂಡು,  ಮೋಟಾರ್ ಹಚ್ಚಿಕೊಂಡು ನೀರು ಪಡೆಯುತ್ತಿದ್ದಾರೆ. ಈ ಅಕ್ರಮದಲ್ಲಿ ಕನಕಗಿರಿಯ ಮಾಜಿ ಶಾಸಕರು, ಈಗಿನ‌ ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳರು ನೇರವಾಗಿ ಭಾಗಿಯಾಗಿ, ಅಕ್ರಮವಾಗಿ ನೀರು ಪಡೆಯುವರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಸತ್ಯಶೋಧನಾ ಸಮಿತಿಯ ಸದಸ್ಯ ರಾಘವೇಂದ್ರ ಕುಷ್ಟಗಿ ಆರೋಪಿಸಿದ್ದಾರೆ.

ಇಲ್ಲಿ ಅಕ್ರಮ ತಡೆಯುವಂತೆ ಅನೇಕ ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ.  ಈಗ ಸತ್ಯಶೋಧನಾ ಸಮಿತಿಯ ವಿಡಿಯೋ ಚಿತ್ರಿಕರಣದ ವಿಡಿಯೋ ಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ತಕ್ಷಣ ರಾಯಚೂರು ಜಿಲ್ಲೆಯ ರೈತರು, ಜನಪ್ರತಿನಿಧಿಗಳು, ಅಧಿಕಾರಿ ಸಭೆ ಕರೆದು ಅಕ್ರಮವಾಗಿ ನೀರು ಪಡೆಯುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈತರೇ ಅಕ್ರಮ ಪೈಪ್ ಲೈನ್ ಕಿತ್ತುಹಾಕುತ್ತಾರೆ. ಈ ಮಧ್ಯೆ ಅಕ್ರಮ ತಡೆಯದಿದ್ದರೆ ನಾಲೆಗೆ ನೀರು ಬಿಡದಂತೆ ರೈತರು ನಾಲೆಯಲ್ಲಿ ಕುಳಿತು ನೀರು ಬಿಡದಂತೆ ಹೋರಾಟ ಮಾಡಲಾಗುವುದು ಎಂದು ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ ತಿಳಿಸಿದ್ದಾರೆ.

ತುಂಗಭದ್ರಾ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯದೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಅಧಿಕಾರಿಗಳು ಅಕ್ರಮ ತಡೆಯಲು ಮುಂದಾಗುತ್ತಾರೆ ಎಂಬುವುದನ್ನು ಕಾದು ನೋಡಬೇಕು.

Continue

Related Articles

Leave a Reply

Your email address will not be published. Required fields are marked *

Back to top button
Close
Close