ಕರ್ನಾಟಕ ಸುದ್ದಿ

ಬ್ರೇಕಿಂಗ್ ನ್ಯೂಸ್;ಕೊರೋನಾ ವಾರಿಯರ್ ಆಶಾ ಕಾರ್ಯಕರ್ತೆ ಮೇಲೆ ಕಾರದ ಪುಡಿ ಎರಚಿ ಹಲ್ಲೆ – ಮೂವರು ಪೊಲೀಸರ ವಶಕ್ಕೆ

Posted by :Sirajuddin Bangar

Source: NS18

ಕಲಬುರ್ಗಿ(ಜೂ.14): ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೋನಾ ನಿಯಂತ್ರಣಕ್ಕಾಗಿ ಕೋವಿಡ್ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಕೋವಿಡ್ ಕರ್ತವ್ಯ ನಿರತ ಆಶಾ ಕಾರ್ಯಕರ್ತೆ ಮೇಲೆ ಕಾರದಪುಡಿ ಎರಚಿ, ರಾಡ್​ನಿಂದ ಹಲ್ಲೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಶಾಂಪುರದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಒಂದೇ ಕುಟುಂಬದ ಮುವ್ವರು ವ್ಯಕ್ತಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆಶಾ ಕಾರ್ಯಕರ್ತೆ ಜೊತೆ ಆಕೆಯ ಪತಿ ಮೇಲೆಯೂ ಹಲ್ಲೆ ಮಾಡಲಾಗಿದೆ. ಜ್ಯೋತಿ ಪವಾರ್ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯಾಗಿದ್ದಾಳೆ. ಗ್ರಾಮದಲ್ಲಿ ಕ್ವಾರಂಟೈನ್​​ನಲ್ಲಿದ್ದ ಮೂವರಿಗೆ ಪಾಸಿಟಿವ್ ಬಂದಿತ್ತು. ನಂತರದಲ್ಲಿ ಮತ್ತೆ ಮೂವರಿಗೆ ಪಾಸಿಟಿವ್ ಬಂದಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಐಸೋಲೇಷನ್ ವಾರ್ಡ್​ಗೆ ಕರೆದೊಯ್ಯಲಾಗಿತ್ತು. ಇದಾದ ನಂತರ ಮೇಲಧಿಕಾರಿಗಳ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆ ಜ್ಯೋತಿ, ಮಾಹಿತಿ ಸಂಗ್ರಹಿಸಲು ಮನೆಗಳಿಗೆ ತೆರಳಿದ್ದಳು. ನಮ್ಮ ಕುಟುಂಬದ ಸದಸ್ಯರನ್ನು ಉದ್ದೇಶಪೂರ್ವಕವಾಗಿಯೇ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೀ ಎಂದು ಸೋಂಕಿತರ ಕುಟುಂಬದ ಸದಸ್ಯರು ಆಶಾ ಕಾರ್ಯಕರ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರದಪುಡಿ ಎರಚಿ, ರಾಡ್​ನಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆಶಾ ಕಾರ್ಯಕರ್ತೆಗೆ ರಾಡ್​ನಿಂದ ಹೊಡೆಯಲು ಹೋದಾಗ ಅದನ್ನು ತಡೆಯಲು ಹೋದ ಆಕೆಯ ಪತಿ ತಾರಾಸಿಂಗ್​​ಗೆ ರಾಡ್ ತಗುಲಿ ಕಾಲಿಗೆ ಗಾಯಗಳಾಗಿವೆ. ಗ್ರಾಮದ ರವಿ ಮತ್ತು ಆತನ ಕುಟುಂಬದ ಸದಸ್ಯರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಆಶಾ ಕಾರ್ಯಕರ್ತೆಯರು ಘಟನೆಯನ್ನು ಖಂಡಿಸಿದ್ದಾರೆ. ವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಒಂದೇ ಕುಟುಂಬದ ಮೂವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೂಕ್ತ ರಕ್ಷಣೆ ನೀಡುವಂತೆ ಆಶಾ ಕಾರ್ಯಕರ್ತೆಯರು ಮನವಿ ಮಾಡಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರ ದೂರಿನ ಮೇರೆಗೆ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close