ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಕರಾವಳಿಯಲ್ಲಿ ಮುಂಗಾರು ಮಳೆ ಚುರುಕು – ಹವಾಮಾನ ಇಲಾಖೆಯಿಂದ ಭಾರೀ ಮಳೆ ಮುನ್ಸೂಚನೆ

Posted By: Sirajuddin Bangar

Source: NS18

ಮಂಗಳೂರು(ಜೂ.11): ಕರಾವಳಿಯಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಕಳೆದ ಒಂದು ವಾರದ ಹಿಂದೆ ಮುಂಗಾರು ರಾಜ್ಯದ ಕರಾವಳಿಗೆ ಪ್ರವೇಶಿಸಿದರೂ ಮಳೆ ಅಷ್ಟೇನೂ ಸುರಿದಿರಲಿಲ್ಲ. ಆದರೆ, ಈಗ ಮುಂಗಾರು ಚರುಕನ್ನು ಪಡೆದಿದೆ. ಜೂನ್ 12 ರಿಂದ 15 ರವರೆಗೆ ಕರಾವಳಿ ಭಾಗದಲ್ಲಿ ಭಾರೀ ಗಾಳಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಇಂದು ಮತ್ತು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಜೂನ್ 13  ಮತ್ತು 14 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ.

ಇಂದು ಮತ್ತು ನಾಳೆ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ 64.5 ಮೀಲಿ ಮೀಟರ್ ನಿಂದ 111.5 ಮಿಲಿ ಮೀಟರ್ ಮಳೆಯಾಗಲಿದೆ. ಜೂನ್‌13 ಮತ್ತು‌ 14 ನೇ ರಂದು 115.6 ಮಿಲಿ ಮೀಟರ್ ನಿಂದ 204.4 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಗಳಿವೆ.ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕಳೆದ ವರ್ಷ ಪ್ರವಾಹ ಪೀಡಿತ ಪ್ರದೇಶಗಳಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಕಕ್ಕಿಂಜೆ, ಕೊಲ್ಲಿ, ಕುಕ್ಕಾವು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ  ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವರ್ಷ ಮುಂಗಾರು ಪ್ರವೇಶಿಸಿದ ದಿನದಿಂದಲೇ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಆದರೆ, ಈ ಬಾರಿ ಮುಂಗಾರು ಜೂನ್ 4 ರಂದು ರಾಜ್ಯವನ್ನು ಪ್ರವೇಶಿಸಿದರೂ ಮಳೆಯಾಗಿರಲಿಲ್ಲ. ಆನಂತರದ ದಿನಗಳಲ್ಲಿ ಮುಂಗಾರು ಮಾರುತಗಳು ತೀವ್ರ ದುರ್ಬಲವಾಗಿದ್ದವು. ಅರಬೀ ಸಮುದ್ರ ದಲ್ಲಿ ಸೃಷ್ಟಿಯಾಗಿದ್ದ ನಿಸರ್ಗ ಚಂಡಮಾರುತ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸಿದ್ದವು. ಇದೇ ಕಾರಣಕ್ಕೆ ಕೇರಳ ಪ್ರವೇಶಿಸಿದ ಮುಂಗಾರು ರಾಜ್ಯಕ್ಕೆ ಅಪ್ಪಳಿಸುವುದು ವಿಳಂಬವಾಗಿತ್ತು. ಮಹಾರಾಷ್ಟ್ರ ಮೇಲೆ ಪರಿಣಾಮ ಬೀರಿದ್ದ ನಿಸರ್ಗ ಚಂಡಮಾರುತ ಕರಾವಳಿ ಭಾಗದಲ್ಲಿ ಮಳೆ ತರುವ ಮೋಡಗಳನ್ನು ಸೆಳೆದ ಕಾರಣದಿಂದ ರಾಜ್ಯದಲ್ಲಿ ಮುಂಗಾರು ದುರ್ಬಲ ಗೊಂಡಿತ್ತು.

ಈ ಬಗ್ಗೆ ಹವಾಮಾನ ಇಲಾಖಾ ಅಧಿಕಾರಿಗಳು ವಾಸ್ತಾವಂಶವನ್ನು ಬಿಚ್ಚಿಟ್ಟಿದ್ದು, ನಿಸರ್ಗ ಚಂಡಮಾರುತದ ಪ್ರಭಾವದಿಂದ ಮುಂಗಾರು ಆಗಮನವಾದರೂ ದುರ್ಬಲ ವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close