ಅಂತರಾಷ್ಟ್ರೀಯ

ಚೀನಾ ವಸ್ತುಗಳು-ಆಪ್‌ಗಳನ್ನು ಬಹಿಷ್ಕರಿಸಲು ಬಿಜೆಪಿ ಕರೆ; ಟಿಕ್‌ಟಾಕ್‌ನಲ್ಲಿ ಖಾತೆ ತೆರೆದ ಕೇಂದ್ರ ಸರ್ಕಾರ!

Posted by: Sirajuddin Bangar

Source:NS18

ನವ ದೆಹಲಿ; ಇಡೀ ದೇಶವನ್ನು ಕೊರೋನಾ ಎಂಬ ಮಹಾಮಾರಿ ಇನ್ನಿಲ್ಲದಂತೆ ಕಾಡುತ್ತಿದೆ. ಇದರ ವಿರುದ್ಧ ಹೋರಾಟವೇ ದೊಡ್ಡ ತಾಪತ್ರಯವಾಗಿರುವ ಸಂದರ್ಭದಲ್ಲಿ ಅರುಣಾಚಲಪ್ರದೇಶ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಪದೇ ಪದೇ ಖ್ಯಾತೆ ತೆಗೆಯುತ್ತಿರುವುದು ಗಡಿಭಾಗದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಅಲ್ಲದೆ, ಭಾರತೀಯರ ಸ್ವಾಭಿಮಾನವನ್ನೂ ಕೆಣಕುವಂತಿದೆ

ಇದೇ ಕಾರಣಕ್ಕೆ ಕಳೆದ ಹಲವು ದಿನಗಳಿಂದ ಭಾರತೀಯರು ಚೀನಾ ವಸ್ತುಗಳನ್ನು, ಮೊಬೈಲ್‌ ಆಪ್‌ಗಳನ್ನು ನಿಷೇಧಿಸಬೇಕು, ಅದಕ್ಕೆ ಪರ್ಯಾಯವಾಗಿ ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂದು ಕರೆ ನೀಡುತ್ತಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ಈ ಆಂದೋಲನಕ್ಕೆ ದೊಡ್ಡ ಮಟ್ಟದಲ್ಲಿ ಕರೆ ನೀಡುತ್ತಿದ್ದಾರೆ.

ಆದರೆ, ಭಾರತದಲ್ಲಿ ಬಿಜೆಪಿಯ ಕಾರ್ಯಕರ್ತರು ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ನೀಡುತ್ತಿರುವ ಕರೆ ಮತ್ತು ಭಾರತ-ಚೀನಾ ಗಡಿಯಲ್ಲಿ ಉದ್ವಿಘ್ನ ಸ್ಥಿತಿಯ ನಡುವೆಯೂ ಸ್ವತಃ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವೇ @mygovindia ಯೂಸರ್‌‌ ಐಡಿ ಇರುವ ಅಧಿಕೃತ ಟಿಕ್‌ಟಾಕ್‌ ಖಾತೆಯನ್ನು ತೆರೆದಿದೆ. ಪರಿಣಾಮ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದ ಬಿಜಿಪಿ ಅಭಿಮಾನಿಗಳು ಆಘಾತಕ್ಕೊಳಗಾಗುವಂತಾಗಿದೆ.

ಹೆಚ್ಚು ಸಾಮಾಜಿಕ ಜಾಲತಾಣ ಬಳಕೆದಾರರು ಟಿಕ್‌ಟಾಕ್‌ ಬಳಸುತ್ತಿರುವುದರಿಂದಾಗಿ, ಅದರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಕೊರೊನಾ ವೈರಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಟಿಕ್‌ಟಾಕ್‌ ಖಾತೆ ರಚಿಸಿದೆ ಎಂದು ಹೇಳಲಾಗಿದೆ.

ಟಿಕ್‌ಟಾಕ್‌ನ ಪ್ರೊಫೈಲ್‌ “Citizen engagement platform of Government of India” (ನಾಗರಿಕರನ್ನು ಸಂಪರ್ಕಿಸುವ ಭಾರತ ಸರ್ಕಾರ ಸಾಮಾಜಿಕ ವೇದಿಕೆ) ಎಂದು ಅದು ಹೇಳಿಕೊಂಡಿದೆ.

ಟಿಕ್‌ಟಾಕ್‌ನಲ್ಲಿನ @mygovindia ಖಾತೆಯು ಸುಮಾರು 909.1 ಸಾವಿರ ಅನುಯಾಯಿಗಳನ್ನು ಹೊಂದಿದ್ದು, 6.5 ಮಿಲಿಯನ್ ಲೈಕ್‌ಗಳನ್ನು ಪಡೆದಿದೆ. ಅಲ್ಲದೆ ಅದು ಬೇರೆ ಯಾವುದೇ ಇತರ ಖಾತೆಗಳನ್ನು ಫಾಲೋ ಮಾಡುತ್ತಿಲ್ಲ. ಇಲ್ಲಿಯವರೆಗೂ ಆ ಖಾತೆಯಲ್ಲಿ ಯೋಗ, ಕೊರೊನಾ ಸೋಂಕು ಕುರಿತ ಜಾಗೃತಿ ಹಾಗೂ ಸರ್ಕಾರದ ಸಾಧನೆಗಳನ್ನು ಒಳಗೊಂಡ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

ಸರ್ಕಾರವು ಭಾರತೀಯರಿಗೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರಾರಂಭಿಸಿ ಎಂದು ‘ಆತ್ಮಾ ನಿರ್ಭರ್’ ಆಗಲು ಕರೆಕೊಟ್ಟಿರುವ ಸಂದರ್ಭದಲ್ಲಿ ಈ ಸುದ್ದಿ ವಿಶೇಷವಾಗಿ ಜನರನ್ನು ಆಘಾತಕ್ಕೀಡು ಮಾಡಿದೆ.

ಅಲ್ಲದೆ, ಚೀನಾದ ಟಿಕ್‌ಟಾಕ್‌ ಬದಲಾಗಿ ಭಾರತದ ಮಿತ್ರೋನ್‌ ಆಪ್‌ ಬಳಸುವಂತೆ ಕರೆಕೊಡಲಾಗಿತ್ತು. ಮಿತ್ರೋನ್‌ ಅಪ್ಲಿಕೇಷನ್‌ ಕೂಡ ಹೆಚ್ಚು ಡೌನ್‌ಲೋಡ್‌ ಆಗಿತ್ತು. ಆದರೆ, ಮಿತ್ರೋನ್‌ ಅಪ್ಲಿಕೇಷನ್ ಅನ್ನು ಪಾಕಿಸ್ಥಾನದ ಟಿಕ್‌ಟಿಕ್‌ ಆಪ್‌ನ ರೂಪಾಂತರವಾಗಿದ್ದು, ಅದೂ ಕೂಡ ಸ್ವದೇಶಿ ಅಲ್ಲ ಎಂದು ಫ್ಯಾಕ್‌ಚೆಕ್‌ ಹಾಗೂ ವಿವಿಧ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.


ಹೀಗಾಗಿ ಅನೇಕ ಬಳಕೆದಾರರು ಸರ್ಕಾರದ ಬೂಟಾಟಿಕೆ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ ಮತ್ತು ಕೇಂದ್ರ ಸರ್ಕಾರದ ಟಿಕ್‌ಟಾಕ್ ಖಾತೆಯನ್ನು ಅಳಿಸಲು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ, ಇದೇ ವಿಚಾರವನ್ನು ಮುಂದಿಟ್ಟು ಅನೇಕರು ಟ್ವಿಟ್ಟರ್‌ನಲ್ಲಿ ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close