ಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

ರೈತರ ಮೊದಲ ಹಬ್ಬ ಕಾರಹುಣ್ಣಿಮೆ ಮೇಲೂ ಕೊರೋನಾ ಕರಿ ಛಾಯೆ!

–ಸಿರಾಜುದ್ದೀನ್ ಬಂಗಾರ್,ಸಂಪಾದಕರು ಕರ್ನಾಟಕ ಜ್ವಾಲೆ ‌ನ್ಯೂಸ್

ಉತ್ತರ ಕರ್ನಾಟಕದಲ್ಲಿ ರೈತರ ಮೊದಲ ಹಬ್ಬ  ಕಾರಹುಣ್ಣಿಮೆ. ಕಾರಹುಣ್ಣಿಮೆಯಂದು ರೈತರು ಎತ್ತು, ಕೃಷಿ ಪರಿಕರಗಳಿಗೆ ಸಿಂಗರಿಸಿ, ಸಂಜೆ ಕರಿ ಹರಿದು, ಸಂಭ್ರಮಿಸುವ ದಿನ. ಕರಿ ಹರಿಯುವ ಎತ್ತು ಮಳೆ ಬೆಳೆ ಮುನ್ಸೂಚನೆ ನೀಡುತ್ತದೆ. ಆದರೆ, ಈ ವರ್ಷ ಕೊರೋನಾ ಕಾರಹುಣ್ಣಿಮೆ ಮೇಲೂ ಕರಿ ಛಾಯೆ ಬೀರಿದೆ. ರೈತರಲ್ಲಿ ಈ ಬಾರಿ ಕಾರಹುಣ್ಣಿಮೆ ಸಂಭ್ರಮವಿಲ್ಲ. ಉತ್ತರ ಕರ್ನಾಟಕದ ರಾಯಚೂರು,ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಯ ಗ್ರಾಮಗಳಲ್ಲಿ ಕಾರಹುಣ್ಣಿಮೆ ದಿನ ರೈತಾಪಿ ವರ್ಗದ ಕುಟುಂಬದಲ್ಲಿ ಖುಷಿ ಖುಷಿಯಾಗಿರುತ್ತಿದ್ದರು. ಆದರೆ ಈ ಬಾರಿ ರೈತರು ಸಾಂಕೇತಿಕವಾಗಿ ಕಾರಹುಣ್ಣಿಮೆಯ ಕರಿ ಹರಿಯುವ ಆಚರಣೆ ಮಾಡಿದರು.

ಹೌದು.. ಕಾರಹುಣ್ಣಿಮೆ ರೈತರ ಪಾಲಿಗೆ ಚೈತ್ರ ಕಾಲದ ಸಂಭ್ರಮದ ದಿನ. ಬಿತ್ತನೆಗೆ ಹದ ಮಾಡಿದ ಭೂಮಿ, ಮುಂಗಾರು ಮಳೆ ಆಗಮನ. ಹೀಗಾಗಿ ರೈತರು ಕೃಷಿ ಚಟುವಟಿಕೆಗೆ ಅಣಿಯಾಗಲು ಸಜ್ಜಾಗಿರುತ್ತಾರೆ. ವರ್ಷವಿಡೀ ಹೊಲದಲ್ಲಿ ರೈತನಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಕಾರಹುಣ್ಣಿಮೆ ದಿನ ಚೆನ್ನಾಗಿ ಮೈತೊಳೆದು, ಕೊಂಬು ಕೆತ್ತಿಸಿ, ಬಣ್ಣ ಬಳಿದು, ಎತ್ತುಗಳ ಮೈಮೇಲೆ ಚಿತ್ತಾರ ಬಿಡಿಸಿ, ವಿವಿಧ ವಸ್ತುಗಳಿಂದ ಸಿಂಗರಿಸುತ್ತಾರೆ. ಜೊತೆಗೆ ಕೃಷಿ ಪರಿಕರಗಳನ್ನು ಶುಚಿಗೊಳಿಸುತ್ತಾರೆ. ಬಂಡಿಯನ್ನು ಸ್ವಚ್ಛಗೊಳಿಸಿ, ಬಂಡಿಯ ಗಾಲಿಗಳಿಗೆ ಎಣ್ಣೆಯಿಂದ (ಹೆರಿ) ಶುಚಿಗೊಳಿಸಿ, ಗಾಲಿಯ ದಿಂಡಿಗೆ ಸುಣ್ಣ, ಕ್ಯಾಮಣ್ಣ ಹಚ್ಚುತ್ತಾರೆ.

ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಬಂಡಿ ಗಾಲಿಯ ಕಬ್ಬಿಣ ಬೇಸಿಗೆಯಲ್ಲಿ ಹಿಗ್ಗಿರುತ್ತವೆ. ಬೇಸಿಗೆಯ ನಂತರ ಮಳೆಗಾಲ ಆರಂಭವಾಗುತ್ತದೆ. ಆಗ ಬಂಡಿಯ ಗಾಲಿಗೆ ‌ಹಾಕಲಾಗಿರುವ ಕಬ್ಬಿಣ ಕುಗ್ಗುತ್ತದೆ. ಅದನ್ನು ರೈತರು ಕಾರಹುಣ್ಣಿಮೆಯಂದು ಗಿರಿಸ್  ಹಚ್ಚಿ ರಿಪೇರಿ ಮಾಡಿಕೊಳ್ಳುತ್ತಾರೆ. ಇನ್ನು ಕಾರಹುಣ್ಣಿಮೆಯ ದಿನ ಹೋಳಿಗೆ, ಮಾವಿನ ಹಣ್ಣಿನ ಶೀಕರಣೆ ನೈವೇದ್ಯದಿಂದ ಎತ್ತುಗಳಿಗೆ ಪೂಜಿಸಿ, ಹೋಳಿಗೆ ತಿನ್ನಿಸುತ್ತಾರೆ. ಸಂಜೆ ಹೊತ್ತಿಗೆ ರೈತರೆಲ್ಲರೂ ಸೇರಿ ಗ್ರಾಮದ ಅಗಸಿ ಮುಂದೆ ಕಾರ ಹುಣ್ಣಿಮೆ ಕರಿ ಹರಿಯುತ್ತಾರೆ.

ಬಿಳಿ ಹಾಗೂ ಕಂದು ಬಣ್ಣದ ಎತ್ತುಗಳಿಗೆ ಮಾತ್ರ ಕರಿ ಹರಿಯಲು ಓಡಿಸುತ್ತಾರೆ. ಕಂದು ಬಣ್ಣದ ಎತ್ತು ನಿಷಿದ್ಧ. ಇನ್ನು ಅಗಸಿ ಮುಂದೆ ರೈತರು ಕರಿ ಹರಿಯಲು  ಹಲಗಿ ಬಡಿದ ಕೂಡಲೇ ನಾ ಮುಂದು, ತಾ ಮುಂದು ಎಂದು ಓಡಿಸಿಕೊಂಡು ಬಂದು ಕರಿ ಹರಿಯುತ್ತಾರೆ. ರೈತರು ಅಗಸಿಗೆ ಅಡ್ಡಲಾಗಿ ಬೇವಿನ ತಪ್ಪಲದ ಹಾರದಲ್ಲಿ ಕೊಬ್ಬರಿ ಬಟ್ಟಲು ಕಟ್ಟಿರುತ್ತಾರೆ. ಯಾವ ಬಣ್ಣದ ಎತ್ತು ಓಡಿಸಿಕೊಂಡು ಬಂದು ರೈತ ಮೊದಲು ಬಂದು ಕೊಬ್ಬರಿ ಬಟ್ಟಲು ಹರಿಯುತ್ತಾರೆಯೋ ಆ ಎತ್ತಿನ ಬಣ್ಣದ ಆಧಾರದ ಮೇಲೆ ಮಳೆ ಬೆಳೆ ಮುನ್ಸೂಚನೆ ಎಂದು ನಂಬುತ್ತಾರೆ. ಬಿಳಿ ಬಣ್ಣದ ಎತ್ತು ಕರಿ ಹರಿದರೆ ಬೀಳಿಜೋಳ ಅಂದರೆ ಹಿಂಗಾರು ಮಳೆ ಚೆನ್ನಾಗಿ ಆಗುತ್ತೆ. ಇನ್ನು ಕೆಂದು ಬಣ್ಣದ ಎತ್ತು ಕರಿ ಹರಿದರೆ ಮುಂಗಾರು ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂದು ನಿರ್ಧರಿಸುತ್ತಾರೆ.

ಬಾಗಲಕೋಟೆ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಎತ್ತುಗಳ ಬದಲಿಗೆ ಮನುಷ್ಯರೇ ಓಡಿಬಂದು ಕರಿ ಹರಿಯುವ ವಿಶಿಷ್ಟ ಪದ್ಧತಿಯಿದೆ.ಇನ್ನು ಕರಿ ಹರಿದ ಬಳಿಕ ರೈತರು, ಯುವಕರು ಗ್ರಾಮೀಣ ಕ್ರೀಡೆಯನ್ನಾಡುತ್ತಾರೆ. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಸುವ ಮೂಲಕ ರೈತರು ಸಂಭ್ರಮಿಸುತ್ತಾರೆ.ಆದರೆ ಈ ಬಾರಿ ಕೊರೊನಾ ಇರುವುದರಿಂದ ರೈತರಲ್ಲಿ ಕಾರಹುಣ್ಣಿಮೆ ಸಂಭ್ರಮ ಇಲ್ಲ ಎನ್ನುತ್ತಾರೆ ಶಿರೂರು ಗ್ರಾಮದ ರೈತ ಕಲ್ಲಪ್ಪ ಭಗವತಿ.

ಕಾರ ಹುಣ್ಣಿಮೆಯ ದಿನ ಸುಮಂಗಲಿಯರು ವಟ ಸಾವಿತ್ರಿ ವ್ರತ ಆಚರಣೆ ಕೂಡಾ ನಡೆಯುತ್ತೆ. ಪತಿಯ ಆಯುಷ್ಯ, ಜೊತೆಗೆ ಇಷ್ಟಾರ್ಥ ಈಡೇರಿಕೆಗಾಗಿ ಮಹಿಳೆಯರು ಅರಳಿ ಮರಕ್ಕೆ ಪೂಜೆ ಸಲ್ಲಿಸಿ, ಮಡಿಲು ತುಂಬುತ್ತಾರೆ. ಜೊತೆಗೆ ಮಹಿಳೆಯರು ವಟ ಸಾವಿತ್ರಿ ವ್ರತ ಆಚರಣೆ ಹಿನ್ನೆಲೆಯಲ್ಲಿ ಪರಸ್ಪರ ಮಡಿಲು ತುಂಬಿಕೊಳ್ಳುತ್ತಾರೆ. ಆದರೆ ಈ ಬಾರಿ ಕೊರೊನಾ  ವಟ ಸಾವಿತ್ರಿ ವ್ರತ ಆಚರಣೆ ಸಂಭ್ರಮವನ್ನು ಕಸಿದುಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಕಾರಹುಣ್ಣಿಮೆ  ಸಂಭ್ರಮದಿಂದ ಆಚರಣೆ ಮಾಡುತ್ತಿದ್ದ ರೈತರಲ್ಲಿ ಸಂಭ್ರಮ ಕೊಂಚ ಕಡಿಮೆಯಾಗಿದೆ. ಈ ಬಾರಿಯೂ ಉತ್ತಮ ಮುಂಗಾರು ಮಳೆಯಾಗುವ ಮುನ್ಸೂಚನೆ ಇದೆ. ಕಳೆದ ಬಾರಿ ಪ್ರವಾಹ ಬಂದು ಬೆಳೆ ರೈತರ ಕೈಗೆ ಬರಲಿಲ್ಲ. ಈಗ ಕೊರೊನಾದಿಂದ ರೈತಾಪಿ ವರ್ಗ ಸಂಕಷ್ಟ ಅನುಭವಿಸುವಂತಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close