ಲೇಖನ

ವಿಶ್ವ ಪರಿಸರ ದಿನ: ಮರ ಬೆಳಸಿ – ನಾಡು ಉಳಿಸಿ

ವರದಿ : ಸಿರಾಜುದ್ದೀನ್ ಬಂಗಾರ್

ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯ, ಕೈಗಾರಿಕೀಕರಣ, ನಗರೀಕರಣ, ಅರಣ್ಯನಾಶ, ಸಾಗರ ಮಾಲಿನ್ಯಮುಂತಾದ ಕಾರಣಗಳಿಂದ ಪರಿಸರ ದಿನೇ ದಿನೇ ನಾಶವಾಗುತ್ತಿದೆ. ಪರಿಸರವನ್ನು ಇಂಥ ಸಮಸ್ಯೆಗಳಿಂದ ರಕ್ಷಿಸುವ ಸಲುವಾಗಿ ಹಾಗೂ ಪರಿಸರ ನಾಶದಿಂದಾಗುವ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ.

1972ರಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್‌ 5 ವಿಶ್ವ ಪರಿಸರ ದಿನ ಎಂದು ಘೋಷಿಸಲಾಯಿತು. 1974ರಲ್ಲಿ ಮೊದಲ ಬಾರಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಪರಿಸರವನ್ನು ಸ್ವಚ್ಛವಾಗಿಡುವುದು, ಹಸಿರಿನ ಸಂರಕ್ಷಣೆ, ಪರಿಸರ ಸ್ನೇಹಿ ಜೀವನ ಕ್ರಮ, ಪ್ಲಾಸ್ಟಿಕ್‌ ಬಳಸದಿರುವುದು, ರಾಸಾಯನಿಕಗಳ ಮಿತ ಬಳಕೆ, ತ್ಯಾಜ್ಯದ ಸದ್ಭಳಕೆ, ಮೋಟಾರು ವಾಹನ ಬಳಕೆ ಕಡಿಮೆ ಮಾಡುವುದು, ವಿದ್ಯುತ್‌ ಮಿತವಾಗಿ ಬಳಸುವುದರಿಂದ ಪರಿಸರವನ್ನು ರಕ್ಷಿಸಬಹುದಾಗಿದೆ. ಪರಸರ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಹೌದು.

ಪ್ರತಿವರ್ಷ ಒಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ಬೀಟ್‌ ಪ್ಲಾಸ್ಟಿಕ್‌ ಪಲೂಷನ್‌. ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಬಹು ಬೇಗ ಹಾಳಾಗುತ್ತಿದೆ. ಪ್ರತಿವರ್ಷ ಪ್ರಪಂಚದಲ್ಲಿ 500 ಬಿಲಿಯನ್‌ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್‌ ಮುಕ್ತ ಪರಿಸರ ಈ ವರ್ಷ ಆಚರಣೆಯ ಧ್ಯೇಯವಾಗಿದೆ.

ಈ ವರ್ಷದ ಪರಿಸರ ದಿನಾಚರಣೆ ಒಂದಿಷ್ಟು ಮಹತ್ವವನ್ನು ಪಡೆದುಕೊಂಡಿದೆ. ವಿಶ್ವದ ಬಹುತೇಕ ರಾಷ್ಟ್ರಗಳ ಜನರನ್ನು ಕೋವಿಡ್‌-19 ಹೆಮ್ಮಾರಿಯಂತೆ ಕಾಡುತ್ತಿರುವುದರಿಂದ ಜನ ರಲ್ಲಿ ಪರಿಸರದ ಬಗೆಗೆ ಒಂದಿಷ್ಟು ಕಾಳಜಿ ಮೂಡುವಂತೆ ಮಾಡಿದೆ. ವಾಯುಮಾಲಿನ್ಯದಿಂದಾಗಿ ಮನುಷ್ಯ ಮಾತ್ರ ವಲ್ಲದೆ ಜೀವಸಂಕುಲ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದೆ.

ಈ ಸಮಸ್ಯೆ ಶತಮಾನಗಳಿಂದ ನಮ್ಮನ್ನು ಕಾಡುತ್ತಲೇ ಬಂದಿದ್ದರೂ ಪ್ರತೀ ವರ್ಷ ಹೆಚ್ಚುತ್ತಲೇ ಸಾಗಿದೆ. ಇತ್ತೀಚಿನ ವರ್ಷಗಳಲ್ಲಂತೂ ಇದು ಅತಿರೇಕಕ್ಕೆ ತಲುಪಿದ್ದು, ಸಮಸ್ತ ಜೀವಜಗತ್ತಿಗೆ ಅಪಾಯವನ್ನು ತಂದೊಡ್ಡಿದೆ. ವರ್ಷಗಳು ಉರುಳಿದಂತೆಯೇ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ಹಿಮನದಿಗಳು ಕರಗುತ್ತಿದ್ದರೆ ಸಮುದ್ರ ಮಟ್ಟ ಹೆಚ್ಚುತ್ತಲಿದೆ. ವಾಯು, ಜಲ ಮಾಲಿನ್ಯ ಮತ್ತು ಮಣ್ಣಿನ ಸವಕಳಿ ಯಿಂದಾಗಿ ಪರಿಸರದ ಮೇಲೆ ಭಾರೀ ಪರಿಣಾಮಗಳು ಉಂಟಾಗುತ್ತಿವೆ. ಕಳೆದ ಹಲವಾರು ದಶಕಗಳಿಂದ ಈ ಬಗ್ಗೆ ಭೂವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚ ರಿಕೆ ನೀಡುತ್ತಲೇ ಬಂದಿದ್ದರೂ ಸರಕಾರಗಳಾಗಲೀ ಜನರಾಗಲೀ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

ಆದರೆ ಕೋವಿಡ್‌-19 ಮಹಾ ಮಾರಿ ಬಹುತೇಕ ವಿಶ್ವವನ್ನು ಆವರಿಸಿಕೊಂಡ ಬಳಿಕ ವೈರಸ್‌ನ ಪಸರಿಸುವಿಕೆಯನ್ನು ತಡೆ ಯುವ ಯತ್ನವಾಗಿ ಹಲವಾರು ರಾಷ್ಟ್ರಗಳು ಲಾಕ್‌ಡೌನ್‌ನ ಮೊರೆ ಹೊಕ್ಕವು. ಜನರು ತಿಂಗಳುಗಳ ಕಾಲ ಮನೆಗಳಲ್ಲಿಯೇ ಉಳಿಯುವಂತಾಯಿತು. ಇದರಿಂದಾಗಿ ಪರಿಸರದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಂತಾಗಿದೆ.

ವಾಯುಮಾಲಿನ್ಯ ಪ್ರಮಾಣ ಇಳಿಕೆ
ಬಹುತೇಕ ರಾಷ್ಟ್ರಗಳು ವೈರಸ್‌ ಹರಡುವಿಕೆಯ ಪ್ರಮಾಣ ತಗ್ಗಿಸಲು ಸಾಧ್ಯವಾದಷ್ಟು ಮನೆಯೊಳಗೇ ಉಳಿಯುವಂತೆ ಜನರಿಗೆ ಸೂಚಿಸಿದವು. ಕೆಲವೆಡೆ ಜನಸಂಚಾರ ನಿಯಂತ್ರಣಕ್ಕೆ ಬಿಗಿ ಕಾನೂನು ಜಾರಿಗೊಳಿಸ ಲಾಯಿತು. ಇದರಿಂದ ವಾಹನ ಸಂಚಾರ, ರೈಲು, ವಿಮಾನಯಾನ ಎಲ್ಲವೂ ಸ್ಥಗಿತಗೊಂಡವು. ಬಹು ತೇಕ ಕೈಗಾರಿಕೆಗಳು ಮುಚ್ಚಲ್ಪಟ್ಟವು. ಇವೆ ಲ್ಲದರ ಪರಿಣಾಮ ವಾಗಿ ವಾಯು ಮಾಲಿನ್ಯ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡುಬಂದಿತು.

ಜಲ ಗುಣಮಟ್ಟದಲ್ಲಿ ಏರಿಕೆ
ಲಾಕ್‌ಡೌನ್‌ ಜಾರಿಯ ಬಳಿಕ ಸಾಗರ, ನದಿಗಳಲ್ಲಿ ಹಡಗು, ಬೋಟ್‌ಗಳ ಸಂಚಾರ ಸ್ಥಗಿತಗೊಂಡಿತು. ಜಲಸಾರಿಗೆ ಅಕ್ಷರಶ ಸ್ತಬ್ಧವಾಯಿತು. ಇದರಿಂದಾಗಿ ಜಲ ಮಾಲಿನ್ಯದ ಪ್ರಮಾಣ ಕಡಿಮೆಯಾಯಿತು. ವೆನಿಸ್‌ನಂಥ ಪ್ರದೇಶದಲ್ಲಿ ಸಾಗರದ ನೀರು ಎಷ್ಟು ಪರಿಶುದ್ಧ ವಾಯಿತೆಂದರೆ ನೀರಿನ ಹರಿವಿನಲ್ಲಿ ಮೀನುಗಳನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಯಿತು. ಸಾಗರ, ನದಿಗಳಲ್ಲಿ ಮಾನವ ಚಟುವಟಿಕೆಗಳು ಕಡಿಮೆಯಾಗುತ್ತಿದ್ದಂತೆಯೇ ಅವು ಸ್ವಲ್ಪ ಮಟ್ಟಿಗಾದರೂ ಮಾಲಿನ್ಯಮುಕ್ತವಾದವು.

ವನ್ಯಜೀವಿಗಳ ಮೇಲೆ ಪರಿಣಾಮ
ಮಾನವನ ಓಡಾಟ ಅತೀ ವಿರಳವಾದ್ದರಿಂದ ವನ್ಯ ಜೀವಿಗಳ ಸಹಿತ ಪ್ರಾಣಿಗಳು ಅರಣ್ಯ ಪ್ರದೇಶ ಮಾತ್ರವಲ್ಲದೆ ಜನವಸತಿ ಪ್ರದೇಶಗಳಲ್ಲಿಯೂ ಸ್ವತ್ಛಂದವಾಗಿ ಓಡಾಟ ನಡೆಸಿದ ದೃಶ್ಯಗಳು ಹಲವೆಡೆ ಕಂಡುಬಂದವು.

ಜನಸಂಚಾರ ಮತ್ತು ಮಾನವ ಹಸ್ತಕ್ಷೇಪ ಕಡಿಮೆ ಯಾಗುತ್ತಿದ್ದಂತೆಯೇ ಶುದ್ಧ ಗಾಳಿ ಮತ್ತು ನೀರಿನ ಲಭ್ಯತೆಯಿಂದಾಗಿ ಗಿಡಗಳು ಕೂಡ ಸೊಂಪಾಗಿ ಬೆಳೆಯಲು ಸಾಧ್ಯವಾಯಿತು. ವಾತಾವರಣದಲ್ಲಿ ಸಹಜವಾಗಿಯೇ ಶುದ್ಧ ಆಮ್ಲಜನಕದ ಪ್ರಮಾಣ ಹೆಚ್ಚಿತು. ತೀರ ಮಾತ್ರ ವಲ್ಲದೆ ನದಿಯ ಒಡಲಿನಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾಗಲು ಈ ಲಾಕ್‌ಡೌನ್‌ ಪರೋಕ್ಷವಾಗಿ ಕಾರಣ ವಾಗಿದ್ದು ಇದರಿಂದ ನೀರು ಸರಾಗವಾಗಿ ಹರಿಯು ವಂತಾಗಿದೆ. ಪರಿಸರದ ಉಳಿವಿನ ದೃಷ್ಟಿಯಿಂದ ಇದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಕೋವಿಡ್‌ ಕಲಿಸಿದ ಪಾಠ
ಮನುಕುಲವನ್ನು ಕೋವಿಡ್‌-19 ಇನ್ನಿಲ್ಲದಂತೆ ಕಾಡು ತ್ತಿದ್ದರೂ ಈ ಕಾಯಿಲೆ ನಮಗೆ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದೆ. ಭೂಮಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸ ಹೊರಟ ನಮಗೆ ಈ ಭೂಮಿಯಲ್ಲಿ ನಾವೇನು ಎಂಬುದನ್ನು ತೋರಿಸಿ ಕೊಟ್ಟಿದೆ. ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ಹೆಚ್ಚೇನೂ ಪ್ರಚಾರದ ಅಗತ್ಯವಿಲ್ಲ. 2-3 ತಿಂಗಳುಗಳ ಹಿಂದೆ ಈ ನೆಲದ ಮೇಲೆ ನಾವು ಹೇಗೆ ಬದುಕುತ್ತಿದ್ದೆವು, ಈಗ ನಮ್ಮ ಜೀವನಶೈಲಿ ಹೇಗಿದೆ ಎಂಬ ಬಗ್ಗೆ ಕೆಲವು ನಿಮಿಷಗಳ ಕಾಲ ಯೋಚಿಸಿದರೆ ಪರಿಸರ ಸಂರಕ್ಷಣೆಯ ಅನಿವಾರ್ಯತೆ ಏನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ನಾವು ಗೆಲ್ಲಬಹುದು. ಆದರೆ ಕಾಲಚಕ್ರ ಮಾತ್ರ ಉರುಳುತ್ತಿರುತ್ತದೆ. ವೈರಸ್‌ಗಳು ಹೊಸರೂಪದಲ್ಲಿ ಮನುಕುಲವನ್ನು ಕಾಡಬಹುದು. ಈ ಕಾರಣಕ್ಕಾಗಿ ನಮ್ಮ ಮುಂದಿನ ಜನಾಂಗಕ್ಕಾದರೂ ಪರಿಸರವನ್ನು ರಕ್ಷಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ಪ್ರಯತ್ನವನ್ನು ನಾವು ನಡೆಸಬೇಕಿದೆ.

ನೆಲ, ಜಲ, ವಾಯು.. ಈ ಮೂರೂ ಮುನಿದರೆ ಇಡೀ ಜೀವಸಂಕುಲಕ್ಕೆ ಕುತ್ತು ಖಚಿತ. ಪರಿಸರದ ಮೇಲಣ ನಮ್ಮ ಪ್ರತಿ ಕ್ರೌರ್ಯವೂ ಜೀವ ಜಗತ್ತಿನ ಅವನತಿಗೆ ನಾಂದಿ ಎಂಬುದನ್ನು ನಾವು ಮರೆಯದಿರೋಣ.

01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ಮೈದಾನವಾಗಿಸುವುದು ಬೇಡ. ಮನೆಯ ಅಂಗಳದಲ್ಲಿ ರುವ ಮರವನ್ನು ಉಳಿಸಿಕೊಂಡು ಹೂದೋಟ ಅಥವಾ ಕೈತೋಟ ನಿರ್ಮಿಸಿದಲ್ಲಿ ಸಹಜತೆ ಇನ್ನಷ್ಟು ಹೆಚ್ಚುತ್ತದೆ.

02. ಮನೆಯಿಂದ ಹೊರಗೆ ಕಾಲಿಟ್ಟ ತತ್‌ಕ್ಷಣ ವಾಹನಗಳನ್ನು ಅವಲಂಬಿಸುವ ಬದಲು ಕಾಲ್ನಡಿಗೆ ಅಥವಾ ಸೈಕಲ್‌ ತುಳಿಯುವುದು ನಮ್ಮ ಆರೋಗ್ಯ ಮಾತ್ರವಲ್ಲದೆ ಪರಿಸರದ ಹಿತದೃಷ್ಟಿಯಿಂದಲೂ ಒಳ್ಳೆಯದು.

03. ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ವಾಪಸ್‌ ಕರೆತರಲು ಪ್ರತಿನಿತ್ಯ ಸ್ವಂತ ವಾಹನವನ್ನು ಬಳಸುವ ಬದಲು ಸಾಧ್ಯವಾದಷ್ಟು ನಡಿಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ವಿದ್ಯುತ್‌ ಚಾಲಿತ ಪರಿಸರಸ್ನೇಹಿ ವಾಹನಗಳ ಮೊರೆ ಹೋಗೋಣ.

04. ನಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ಸೌರ ಅಥವಾ ಪವನ ಶಕ್ತಿ ಆಧಾರಿತ ವಿದ್ಯುತ್‌ಬಳಸಲು ಆದ್ಯತೆ ನೀಡೋಣ. ಅಸಾಧ್ಯವಾದಲ್ಲಿ ಸುತ್ತಮುತ್ತಲಿನ ನಿವಾಸಿಗಳು ಅಥವಾ ಆ ಪ್ರದೇಶದ ಸ್ಥಳೀಯರ ಜತೆಗೂಡಿ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆಗೆ ಪ್ರಯತ್ನಿಸೋಣ.

05. ಸಾಧ್ಯವಾದಷ್ಟು ಮರುಬಳಕೆಯ ವಸ್ತುಗಳ ಖರೀದಿ ನಮ್ಮದಾಗಲಿ. ಗಾಜಿನ ಬಾಟಲ್‌ಗ‌ಳು, ಮರು ಬಳಕೆಯ ಬ್ಯಾಗ್‌, ಕಪ್‌ಗ್ಳ ಬಳಕೆ ನಮ್ಮ ಹವ್ಯಾಸವಾಗಲಿ. ಪ್ಲಾಸ್ಟಿಕ್‌ ವಸ್ತುಗಳಿಗೆ ಶಾಶ್ವತ ವಿದಾಯ ಹೇಳ್ಳೋಣ.

06. ಮನೆಯಲ್ಲಿನ ಜೈವಿಕ ತ್ಯಾಜ್ಯಗಳನ್ನು ಗೊಬ್ಬರವಾಗಿ ಸಂಸ್ಕರಿಸಿ ನಮ್ಮ ಹೂದೋಟ ಅಥವಾ ಕೈತೋಟಗಳಿಗೆ ಬಳಕೆ ಮಾಡೋಣ.

07. ಸಾವಯವ ತರಕಾರಿ, ಬೇಳೆಕಾಳು, ಧಾನ್ಯಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡೋಣ. ಇದರಿಂದ ನಮ್ಮ ಆರೋಗ್ಯದ ರಕ್ಷಣೆ ಸಾಧ್ಯ ಮಾತ್ರವಲ್ಲದೆ ಸ್ಥಳೀಯ ಕೃಷಿಕರಿಗೆ ನಾವು ಒಂದಿಷ್ಟು ಸಹಾಯ ಮಾಡಿದಂತಾಗುತ್ತದೆ. ಅಲ್ಲದೆ ಕನಿಷ್ಠ ಸ್ಥಳೀಯ ಮಟ್ಟದಲ್ಲಾದರೂ ಸ್ವಾವಲಂಬಿ ಬದುಕು ನಮ್ಮದಾಗಲಿ.

08. ಜೀವ ಸಂಕುಲಕ್ಕೆ ಜೀವದ ಸೆಲೆಯಾಗಿರುವ ನೀರಿನ ಸದ್ಬಳಕೆ, ಸಂರಕ್ಷಣೆ, ಮರುಪೂರಣಕ್ಕೆ ಹೆಚ್ಚಿನ ಆದ್ಯತೆ ನೀಡೋಣ.

09. ನಮ್ಮ ಸುತ್ತಮುತ್ತಲಿನ ಪ್ರಾಚೀನ ಮತ್ತು ಸಾಂಪ್ರದಾಯಿಕ ನೀರಿನ ಮೂಲಗಳ ರಕ್ಷಣೆ ನಮ್ಮ ಕರ್ತವ್ಯವಾಗಲಿ, ಇದು ಇಂದಿನ ತುರ್ತೂ ಸಹ.

10. ಪರಿಸರ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಮುಂದಿನ ತಲೆಮಾರಿನಲ್ಲಿ ಎಳವೆಯಿಂದಲೇ ಪರಿಸರದ ಬಗೆಗೆ ಕಾಳಜಿ ಮೂಡಿಸುವಂತೆ ಸರಕಾರ, ಶಾಲೆಗಳು ಹಾಗೂ ಆಡಳಿತ ವ್ಯವಸ್ಥೆಯನ್ನು ಆಗ್ರಹಿಸೋಣ.

Continue

Related Articles

Leave a Reply

Your email address will not be published. Required fields are marked *

Back to top button
Close
Close