ಕರ್ನಾಟಕ ಸುದ್ದಿ

ರೈತರಿಗೆ ಪಾವತಿಯಾಗದ ಕಡಲೆ ಬೆಂಬಲ ಬೆಲೆ ಹಣ ; ಕಂಗಾಲಾದ ರೈತರು

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ರಾಜ್ಯ ಸರ್ಕಾರ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆಯನ್ನು ಖರೀದಿ ಮಾಡಿ ಎರಡು ತಿಂಗಳು ಕಳೆದಿದೆ. ಆದರೆ, ಕಡಲೆ ನೀಡಿದ ರೈತರಿಗೆ ಇದುವರೆಗೂ ನಯಾ ಪೈಸೆ ಹಣವನ್ನು‌ ಕೊಟ್ಟಿಲ್ಲ. ಲಾಕ್ ‌ಡೌನ್ ಹೊಡೆತಕ್ಕೆ ಕಂಗೆಟ್ಟಿರುವ ರೈತರು, ಕಡಲೆಯ ಕಾಸು ಕೂಡ ಕೈ ಸೇರದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಂಗಾರು ಬಿತ್ತನೆಗೆ ಮತ್ತೆ ಸಾಲ ಮಾಡುವ ಸ್ಥಿತಿಯಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಬೆಳೆದಿದ್ದ ಬಹುತೇಕ ಫಸಲು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಅಳಿದುಳಿದ ಕಡಲೆ ಬೆಳೆ ರೈತರ ಬದುಕಿನ ಆಸರೆಯಾಗಿತ್ತು. ಸರ್ಕಾರ ರೈತರಿಗೆ ನೆರವಿನ ಭರವಸೆ ನೀಡಿತ್ತು. ಅಂತೆಯೇ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಿತ್ತು. ಆದರೆ, ಕಡಲೆ ಖರೀದಿ ಮಾಡಿದ್ದ ಸರಕಾರ ಇದುವರೆಗೆ ರೈತರಿಗೆ ಹಣ ಪಾವತಿಸಿಲ್ಲ. ಬೆಂಬಲ ಬೆಲೆ ಕೊಟ್ಟು ಕಡಲೆ ಖರೀದಿಸುವಂತೆ ಸರಕಾರವನ್ನು ಒತ್ತಾಯಿಸಿದ್ದ ರೈತರು ಈಗ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳ ಬೇಕಾಗಿದೆ.

ಪ್ರತಿ ಕ್ವಿಂಟಾಲ್ ಕಡಲೆಗೆ 4875 ರೂಪಾಯಿ ಬೆಂಬಲ ಬೆಲೆ ಕೊಡಲು ಘೋಷಣೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 13 ಕಡಲೆ ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ನೇರವಾಗಿ ಕಡಲೆಯನ್ನು ಖರೀದಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವತಿಯಿಂದ ಕಡಲೆ ಖರೀದಿ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಎಲ್ಲಾ 13 ಕಡಲೆ ಖರೀದಿ ಕೇಂದ್ರಗಳಲ್ಲಿ  21,235 ರೈತರು ಕಡಲೆ ನೀಡಿದ್ದಾರೆ. 2 ಲಕ್ಷ 9 ಸಾವಿರ ಕ್ವಿಂಟಾಲ್ ಕಡಲೆಯನ್ನು ಪೂರೈಸಿದ್ದಾರೆ. ಸುಮಾರು 74 ಕೋಟಿ ರೂಪಾಯಿ ಹಣ ರೈತರಿಗೆ ಪಾವತಿಸಬೇಕಿತ್ತು. ರೈತರು ಕಡಲೆ ಕೊಟ್ಟು ಈಗಾಗಲೇ ಎರಡು ತಿಂಗಳುಗಳೇ ಕಳೆದಿವೆ. ಆದರೆ, ಇದುವರೆಗು ರೈತರಿಗೆ ಹಣ ಸಿಕ್ಕಿಲ್ಲ. ಬೆಳೆನಷ್ಟ, ಲಾಕ್‌ಡೌನ್ ಸಂಕಷ್ಟದಿಂದ ನೊಂದಿರುವ ರೈತರು ಸರಿಯಾದ ಸಮಯಕ್ಕೆ ಹಣ ಸಿಗದೆ ಮತ್ತಷ್ಟು ಜರ್ಜರಿತರಾಗಿದ್ದಾರೆ.

ಅಧಿಕಾರಿಗಳನ್ನು ಕೇಳಿದ್ರೆ ನಾಳೆ ಬರುತ್ತೆ, ಎರಡು ದಿನಗಳಲ್ಲಿ ಬರುತ್ತೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಸಾಲಸೂಲ ಮಾಡಿ ಬೆಳೆ ಬೆಳೆದು ಸರ್ಕಾರಕ್ಕೆ ಕೊಟ್ಟ ಕೃಷಿಕರು ಹಣಕ್ಕಾಗಿ ಕಾಯುವಂತಾಗಿದೆ. ಈಗಾಗಲೆ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ರೈತರು ಭೂಮಿಯನ್ನು ಹದ ಮಾಡಿಕೊಂಡಿದ್ದಾರೆ. ಮುಂಗಾರು ಬಿತ್ತನೆಗೆ ಭರದ ತಯಾರಿ ನಡೆಯುತ್ತಿದೆ. ಕಡಲೆಯ ಹಣ ಕೈಗೆ ಬಂದರೆ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗುತ್ತೆ. ಟ್ರ್ಯಾಕ್ಟರ್ ಬಾಡಿಗೆ, ಕಾರ್ಮಿಕರ ಕೂಲಿ ಕೊಡಬಹುದು. ಕೃಷಿ ಪರಿಕರಗಳನ್ನು ಸಜ್ಜುಗೊಳಿಸಿ ಕೊಳ್ಳಬಹುದು. ಆದರೆ, ಮುಂಗಾರು ಬಿತ್ತನೆಗೆ ಸಿದ್ದವಾಗಿರುವ ಅನ್ನದಾತನ ಕೈಯಲ್ಲಿ ಹಣವಿಲ್ಲ.

ಕಡಲೆ ಮಾರಿದ ದುಡ್ಡು ಬಂದ್ರೆ ಬಿತ್ತನೆ ಕಾರ್ಯಗಳಿಗೆ ಅನುಕೂಲವಾಗುತ್ತೆ ಅಂದುಕೊಂಡಿದ್ದ ರೈತರಿಗೆ ಈಗ ಹಣ ಬಾರದಿರುವುದು ಸಂಕಷ್ಟ ಎದುರಿಸುವಂತೆ ಮಾಡಿದೆ. ಮತ್ತೆ ಸಾಲ ಮಾಡಿ ಮುಂಗಾರು ಬಿತ್ತನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ದುಡಿಮೆಯ ಹಣ ಸರಿಯಾದ ಸಮಯಕ್ಕೆ ಸಿಗದೆ ಬಡ್ಡಿಯಲ್ಲಿ ಸಾಲ ತೆಗೆದುಕೊಂಡು ಸಾಲಗಾರ ಎನ್ನಿಸಿಕೊಳ್ಳಬೇಕಾಗಿದೆ. ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಡಲೆ ಖರೀದಿ ಹಣವನ್ನು ಖಾತೆಗೆ ಜಮಾ ಮಾಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close