ಕರ್ನಾಟಕ ಸುದ್ದಿ

ಆನೆ ಸಾವಿಗೆ ರತನ್​ ಟಾಟಾ ಆಕ್ರೋಶ

–ಸಿರಾಜುದ್ದಿನ್ ಬಂಗಾರ್ ಸಂಪಾದಕರು

ಕೇರಳದ ಪಾಲಕ್ಕಾಡ್​ನಲ್ಲಿ ಅನಾನಸ್​ ಹಣ್ಣಿನ ಒಳಗೆ ಸ್ಫೋಟಕ ಇಟ್ಟು ಅದನ್ನು ಆನೆಗೆ ನೀಡಲಾಗಿತ್ತು. ಇದನ್ನು ತಿಂದ ಆನೆ ಮೃತಪಟ್ಟಿತ್ತು. ಈ ಘಟನೆಗೆ ಸಂಬಂಧಿಸಿ ಉದ್ಯಮಿ ರತನ್​ ಟಾಟಾ ಅಸಮಾಧಾನ ಹೊರ ಹಾಕಿದ್ದಾರೆ.

ಕೇರಳದಲ್ಲಿ ಗರ್ಭಿಣಿ ಆನೆಯ ಹತ್ಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಾಣಿ ಪ್ರಿಯರು ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಂಡ ಕಾರಿದ್ದಾರೆ. ಈ ಘಟನೆ ಖ್ಯಾತ ಉದ್ಯಮಿ ಹಾಗೂ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್​ ಟಾಟಾ ಕೂಡ ಅಸಮಾಧಾನ ತೋರಿದ್ದಾರೆ. ಇದೊಂದು ಹೀನ ಕೃತ್ಯ ಎಂದು ಜರಿದಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ರತನ್​ ಟಾಟಾ, “ಕೆಲವರು ಗರ್ಭಿಣಿ ಆನೆಯ ಬಾಯಲ್ಲಿ ಸ್ಫೋಟಕ ತುಂಬಿದ ಅನಾನಸ್​ ಹಣ್ಣನ್ನು ಇಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿರುವುದು ಬೇಸರ ಮೂಡಿಸಿದೆ. ಮುಗ್ಧ ಪ್ರಾಣಿಗಳನ್ನು ಈ ರೀತಿ ಹತ್ಯೆ ಮಾಡುವುದು ಮತ್ತು ಮುನುಷ್ಯರ ಪೂರ್ವ ನಿಯೋಜಿತ ಕೊಲೆಗೂ ಯಾವುದೇ ವ್ಯತ್ಯಾಸವಿಲ್ಲ,” ಎಂದು ಹೇಳುವ ಮೂಲಕ ಇದೊಂದು ಘೋರ ಅಪರಾಧ ಎಂದಿದ್ದಾರೆ.

ಏನಿದು ಪ್ರಕರಣ:

ಕೇರಳದ ಪಾಲಕ್ಕಾಡ್​ನ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್​ (ಎಸ್​ವಿಎನ್​ಪಿ) ಆನೆ ಗರ್ಭಿಣಿಯಾಗಿತ್ತು. ಮೇ 27ರಂದು 15 ವರ್ಷದ ಈ ಆನೆ ಹತ್ತಿರದಲ್ಲಿದ್ದ ಊರೊಳಗೆ ಪ್ರವೇಶಿಸಿತ್ತು. ಊರಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಆ ಆನೆಯನ್ನು ನೋಡಿ ಎಲ್ಲರೂ ಹೆದರಿ ಮನೆಯಲ್ಲಿ ಕುಳಿತಿದ್ದರು. ಆದರೆ, ಅವರಲ್ಲಿ ಯಾರೋ ಆನೆಗೆ ತಿನ್ನಲು ಪೈನಾಪಲ್ ಹಣ್ಣನ್ನು ನೀಡಿದರು. ಮೊದಲೇ ಹಸಿವಿನಿಂದ ಆಹಾರಕ್ಕಾಗಿ ಹುಡುಕಾಡುತ್ತಿದ್ದ ಆನೆ ಆ ಹಣ್ಣನ್ನು ತಿನ್ನುತ್ತಿದ್ದಂತೆ ಅದರೊಳಗಿದ್ದ ಮದ್ದುಗುಂಡು ಸ್ಫೋಟವಾಯಿತು. ಪೈನಾಪಲ್ ಹಣ್ಣಿನೊಳಗೆ ಸ್ಫೋಟಕವನ್ನು ತುಂಬಿದ್ದರಿಂದ ಆನೆಯ ಬಾಯಿಗೆ ತೀವ್ರ ಗಾಯವಾಗಿತ್ತು.

ತನಗೆ ಪ್ರಾಣ ಹೋಗುವಷ್ಟು ನೋವಾದರೂ ಆ ಆನೆ ಅಲ್ಲಿದ್ದ ಯಾರೊಬ್ಬರಿಗೂ ತೊಂದರೆ ಕೊಡಲಿಲ್ಲ, ಮನೆ-ಅಂಗಡಿಗಳಿಗೂ ಹಾನಿ ಮಾಡಲಿಲ್ಲ. ತನ್ನ ನೋವನ್ನು ನುಂಗಿಕೊಂಡು ಕಾಡಿನೊಳಗೆ ಸೇರಿಕೊಂಡ ಆನೆ ನಂತರ ವೆಲ್ಲಿಯಾರ್​ ನದಿಯೊಳಗೆ ಇಳಿದು ತನ್ನ ಬಾಯಿ, ಸೊಂಡಿಲನ್ನು ನೀರಿನಲ್ಲಿಟ್ಟುಕೊಂಡು ನಿಂತಿತ್ತು. ಈ ವೇಳೆ ಅಲ್ಲಿಯೇ ಆನೆ ಮೃತಪಟ್ಟಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close