ಕರ್ನಾಟಕ ಸುದ್ದಿ

ರಾಜ್ಯದಲ್ಲಿ ಶಾಲಾ‌ ಆರಂಭದ ದಿನಾಂಕ ಖಚಿತವಾಗಿಲ್ಲ; ಸಚಿವ ಸುರೇಶ ಕುಮಾರ್

— ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಕರ್ನಾಟಕದಲ್ಲಿ ಜುಲೈ 1ರಂದು ಶಾಲೆ ಆರಂಭವಾಗುತ್ತದೆ ಎನ್ನುವುದು ಶಿಕ್ಷಣ ಇಲಾಖೆ ಯೋಚಿತ ದಿನಾಂಕವಷ್ಟೆ, ಅದು ನಿರ್ಧರಿತ ದಿನಾಂಕವಲ್ಲ ಎಂದು ಬಾಗಲಕೋಟೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲಾ ಆರಂಭದ ಬಗ್ಗೆ ಹಲವು ವಿಚಾರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. 

ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಮುನ್ನ ಪಾಲಕರ, ಎಸ್ ಡಿಎಂಸಿ ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಕಳುಹಿಸಲಾಗುವುದು. ಕೇಂದ್ರದ ಸಲಹೆ ಬಂದ ಬಳಿಕವಷ್ಟೇ ಶಾಲೆ ಆರಂಭದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಮೇ 31ರಂದು ಪತ್ರ ಬಂದಿದೆ. ಹಾಗಾಗಿ, ರಾಜ್ಯದಲ್ಲಿ ಶಾಲಾ ಆರಂಭಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಂಗ್ರಹವಾದ ಅಭಿಪ್ರಾಯದ ವರದಿಯನ್ನು ಜೂನ್ 15ರೊಳಗೆ  ಕೇಂದ್ರಕ್ಕೆ ಸಲ್ಲಿಸಲಾಗುವುದು. ಜೊತೆಗೆ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿ  ಶಾಲಾ ಆರಂಭಿಸುವ ಬಗ್ಗೆ ನಿರ್ಧರಿಸುತ್ತೇವೆ. ಜೊತೆಗೆ ಕೇಂದ್ರದ ಸಲಹೆ ಏನು ಬರುತ್ತದೆ ಎನ್ನುವುದನ್ನು ನೋಡುತ್ತೇವೆ ಎಂದರು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಅಭಿಪ್ರಾಯ ಕ್ರೋಢೀಕರಣ ಮಾಡಲಾಗುತ್ತಿದೆ. ಶಾಲಾವಧಿಯೂ ಕಡಿಮೆಯಾಗಲಿದೆ. ಹೀಗಾಗಿ, ರಾಜ್ಯದ ಶಾಲೆಗಳ ಆರಂಭದ ಹಾಗೂ ಶೈಕ್ಷಣಿಕ ಪಠ್ಯಕ್ರಮ ಇಳಿಕೆ ಕ್ರಮದ ಕುರಿತು ಚಿಂತನೆ ನಡೆದಿದೆ. ಪಠ್ಯಕ್ರಮ ಕಡಿತಕ್ಕೆ ಡಿಎಸ್​ಆರ್​ಟಿಗೆ ಸೂಚಿಸಲಾಗಿದೆ. ಎಸ್​ಎಸ್​ಎಲ್​ಸಿ  ಪರೀಕ್ಷೆಗೆ ಹೇಗೆ ಅಗತ್ಯ ಮುಂಜಾಗ್ರತಾ ತೆಗೆದು ಕೊಳ್ಳಲಾಗುತ್ತಿದೆಯೋ ಹಾಗೇ ಶಾಲೆ ಆರಂಭಕ್ಕೂ ಸೂಕ್ತ ಮುಂಜಾಗ್ರತಾ ತೆಗೆದುಕೊಳ್ಳಲಾಗುವುದು. ಶಾಲೆ ಆರಂಭಿಸಿದರೆ  ಹೇಗೆ ಮಾಡಬೇಕು, ಮುಂದಿನ ತರಗತಿಗಳು ಹೇಗೆ? ಮಕ್ಕಳ ಆಟ, ವ್ಯಾಯಾಮ ಹೇಗೆ? ಈ ಬಗ್ಗೆ ಪಾಲಕರ ಅಭಿಪ್ರಾಯ ಪಡೆಯಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

2015ರ ಪಿಯುಸಿ ನೇಮಕಾತಿ ಪೂರ್ಣ:

2015ರಲ್ಲಿ ಪದವಿಪೂರ್ವ ಕಾಲೇಜು‌ ಉಪನ್ಯಾಸಕರ ನೇಮಕಾತಿ ನಡೆದಿದ್ದರೂ 5 ವರ್ಷವಾದರೂ ಪೂರ್ಣಗೊಂಡಿಲ್ಲ. ಹೀಗಾಗಿ, ನಾನು ಬಂದ ಬಳಿಕ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಜೂನ್ 18ರ ಬಳಿಕ ಕೌನ್ಸೆಲಿಂಗ್ ಮಾಡಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. 2015 ರಿಂದಲೂ ಈ ಸಮಸ್ಯೆ ಇದೆ. ನಾನು ಬಂದ ಮೇಲೆ ರಿಸಲ್ಟ್ ಅನೌನ್ಸ್ ಮಾಡಿಸಿ ಒಂದು ಹಂತಕ್ಕೆ ತಂದಿದ್ದೇನೆ. ಈ ಮಧ್ಯೆ ಕೆಲವರು ಕೋರ್ಟ್​ಗೂ ಹೋಗಿದ್ರು. ಈಗ ಅವರಿಗೆ ನೇಮಕಾತಿ ಆದೇಶ ಕೊಡಬೇಕು. ಜೂನ್ 18ರ ಬಳಿಕ ಕೌನ್ಸಲಿಂಗ್ ಮಾಡಿ ಪಿಯು ಉಪನ್ಯಾಸಕರ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದು ಪಿಯು ಉಪನ್ಯಾಸಕರ ಅಭ್ಯರ್ಥಿಗಳಿಗೆ ಸಚಿವರು ಸಿಹಿಸುದ್ದಿ ನೀಡಿದ್ದಾರೆ.

ನಮ್ಮ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್​ನಲ್ಲಿದೆ!:

ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ನಿನ್ನೆಯವರೆಗೆ ರಾಜ್ಯದಲ್ಲಿ ಯಾರೊಬ್ಬ ಕೊರೋನಾ ಸೋಂಕಿತರೂ ವೆಂಟಿಲೇಟರ್​ನಲ್ಲಿಲ್ಲ. 14 ಜನರು ಮಾತ್ರ ಐಸಿಯುನಲ್ಲಿ ಇದ್ದಾರೆ. ಸೋಂಕಿತರ ಪ್ರಮಾಣ ಶೇ. 1.3 ಇದೆ. ನಿನ್ನೆಯವರೆಗೂ ರಾಜ್ಯದಲ್ಲಿ 3,19,628 ಜನರನ್ನು ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. 3,796 ಪಾಸಿಟಿವ್ ಕೇಸ್ ಇವೆ. ಈವರೆಗೂ 52 ಜನರು ಸತ್ತಿದ್ದಾರೆ. ಇದರಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1,403 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

ಕೊರೊನಾ ಒಂದು ದಿನ ಬಂದು, ಒಂದೇ ದಿನಕ್ಕೆ ಹೋಗಲ್ಲ. ಕೆಲವು ತಿಂಗಳು ಕೊರೊನಾ ಜೊತೆ ಬದುಕಬೇಕಾಗಿದೆ. ಹೊರಗಿನಿಂದ ಬಂದವರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅವರು ಇಂಪೋರ್ಟ್ ಮಾಡಿದ್ದಾರೆ. ಮೊದಲು ಇಂಪೋರ್ಟ್ ಮೆಟಿರಿಯಲ್ ಎಂದರೆ ಖುಷಿ ಎನಿಸುತ್ತಿತ್ತು. ಆದರೆ, ಈಗ ಇಂಪೋರ್ಟ್ ಮೆಟಿರಿಯಲ್​ಗೆ ಭಯವಾಗುತ್ತಿದೆ. ನಾವು ಮುನ್ನೆಚ್ಚರಿಕೆ ತೆಗೆದುಕೊಂಡು ಕೊರೊನಾದೊಂದಿಗೆ ಬದುಕಬೇಕಿದೆ ಎಂದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close