ಕರ್ನಾಟಕ ಸುದ್ದಿ

ಮಹಾಮಾರಿ ಕೊರೋನದಿಂದ ತತ್ತರಿಸಿದ ಜನರು ನಿಟ್ಟುಸಿರು ಬಿಡುವ ಮುನ್ನವೇ!, ಮಳೆರಾಯನ ಆರ್ಭಟ; ಆತಂಕದಲ್ಲಿ ಜನರು

— ಸಿರಾಜುದ್ದೀನ್ ಬಂಗಾರ್

ಕೊಡಗು(ಜೂ.03): ಎರಡು ವರ್ಷಗಳಿಂದಲೂ ನಿರಂತರವಾಗಿ ಭೂಕುಸಿತ ಮತ್ತು ಪ್ರವಾಹಕ್ಕೆ ನಲುಗಿ ಹೋಗಿರುವ ಕೊಡಗು ಜಿಲ್ಲೆಯ ಬೆಟ್ಟ ಪ್ರದೇಶ ಮತ್ತು ನದಿ ಪಾತ್ರದ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಈ ಬಾರಿಯೂ ಪ್ರವಾಹ ಎದುರಾಗುವುದೇ ಎನ್ನೋ ಆತಂಕದಲ್ಲಿ ಜನರಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತ ಮಳೆಗಾಲದ ಆತಂಕವನ್ನು ಎದುರಿಸಲು ಸಿದ್ಧವಾಗುತ್ತಿದೆ.

ಒಂದೆಡೆ ಸ್ವತಃ ಮನೆಗಳನ್ನು ಖಾಲಿ ಮಾಡಿ ತಮ್ಮ ಸಾಮಾನು ಸರಂಜಾಮುಗಳನ್ನು ಗಂಟುಮೂಟೆ ಕಟ್ಟುತ್ತಿರುವ ಜನ. ತುಂಬಿದ ವಸ್ತುಗಳನ್ನು ವಾಹನಗಳಿಗೆ ಹಾಕಿ ಸಾಗಿಸುತ್ತಿರುವ ಜನ. ಹೌದು, ಇದೆಲ್ಲವೂ ಈಗ ಮಡಿಕೇರಿಯಲ್ಲಿ ಕೆಲವು ಬಡಾವಣೆಗಳಲ್ಲಿ ಕಾಣಿಸುತ್ತಿರುವ ದೃಶ್ಯಗಳು.

ಎರಡು ಭಾರಿಯೂ ಕೊಡಗಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹ ಕೊಡಗಿನ ಜನತೆಯನ್ನು ಈಗಲೂ ಬೆಚ್ಚಿ ಬೀಳಿಸುತ್ತಿವೆ. ಹೀಗಾಗಿಯೇ ಬೆಟ್ಟ ಪ್ರದೇಶದಲ್ಲಿ ಜನವಸತಿಗಳಿರುವ ಮಡಿಕೇರಿ ನಗರದ ಚಾಮುಂಡೇಶ್ವರಿ ಬಡಾವಣೆ, ಇಂದಿರಾ ನಗರ ಮತ್ತು ಮಂಗಳಾದೇವಿ ನಗರಗಳ ಜನರು ಈ ಬಾರಿಯೂ ಆತಂಕಕ್ಕೆ ಒಳಗಾಗಿದ್ದಾರೆ.

ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ಬಡಾವಣೆಗಳಿಗೆ ಹೊಂದಿಕೊಂಡಂತೆ ಇರುವ ಕಾಟಿಕೇರಿ ಮೊಣ್ಣಂಗೇರಿಗಳಲ್ಲಿ 2018 ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವರು ಸಾವನ್ನಪ್ಪಿದ್ದರು. ಈ ಭಯ ಆತಂಕ ಜನರಲ್ಲಿ ಇದ್ದೇ ಇದೆ. ಈಗಾಗಲೇ ಕೇರಳಕ್ಕೆ ಮಾನ್ಸೂನ್ ಎಂಟ್ರಿಕೊಟ್ಟಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಕರ್ನಾಟಕ್ಕೆ ಮಳೆರಾಯ ಅಬ್ಬರಿಸಲಿದ್ದಾನೆ.

ಒಂದು ವೇಳೆ ಎಗ್ಗಿಲ್ಲದೆ ಮಳೆ ಸುರಿದಲ್ಲಿ ಆ ಸಂದರ್ಭದಲ್ಲಿ ಮನೆಗಳನ್ನು ಖಾಲಿ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಮಳೆ ಆರಂಭಕ್ಕೂ ಮುನ್ನವೇ ನಾವು ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಬಡಾವಣೆಗಳಲ್ಲಿ ಬಾಡಿಗೆ ಮನೆಗಳನ್ನು ಪಡೆದು ತೆರಳುತ್ತಿದ್ದೇವೆ ಎನ್ನುತ್ತಾರೆ ಜನರು.

ಒಂದೆಡೆ ಜನರು ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಲ್ಲಿ ಬಾಡಿಗೆ ಮನೆಗಳನ್ನು ಪಡೆದು ಹೋಗುತ್ತಿದ್ದಾರೆ. ಮತ್ತೊಂದೆಡೆ ಕಳೆದ ಬಾರಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.

ತಾಲ್ಲೂಕಿನ, ನೆಲ್ಯಹುದಿಕೇರಿ, ಕುಂಬಾರಗುಂಡಿ, ಬರಡಿ ಗ್ರಾಮಗಳ ಜನರಿಗೆ ಜಿಲ್ಲಾಡಳಿತ ನದಿ ಪಾತ್ರ ಬಿಟ್ಟು ಸುರಕ್ಷಿತ ಸ್ಥಳಗಳಲ್ಲಿ ನಿವೇಶನ ನೀಡಿತು. ಹೀಗಾಗಿ ಕೆಲವು ಗ್ರಾಮಗಳ ಜನರು ಈ ಬಾರಿ ಪ್ರವಾಹದಂತ ಅಪಾಯದಿಂದ ಪಾರಗಲಿದ್ದಾರೆ. ಆದರೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಗ್ರಾಮಗಳ ಜನರಿಗೆ ಇಂದಿಗೂ ಬದಲಿ ನಿವೇಶನ ದೊರೆತ್ತಿಲ್ಲ.

ಇಂದಿಗೂ ಕಳೆದ ಬಾರಿಯ ಪ್ರವಾಹದಲ್ಲಿ ಸಿಲುಕಿ ಬಿರುಕು ಬಿಟ್ಟಿರುವ ಗ್ರಾಮಗಳಲ್ಲೇ ವಾಸವಾಗಿದ್ದಾರೆ. ಇವರನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜೊತೆಗೆ ಈಗಾಗಲೇ ಜಿಲ್ಲೆಗೆ 25 ಜನರಿರುವ ಎನ್ ಡಿಆರ್ ಎಫ್ ತಂಡವೂ ಬಂದಿದ್ದು, ಒಂದು ವೇಳೆ ಪ್ರವಾಹ ಅಥವಾ ಯಾವುದೇ ರೀತಿಯ ಪ್ರಾಕೃತಿಕ ತೊಂದರೆ ಎದುರಾದರೆ ಅದನ್ನು ಎದುರಿಸಲು ಸಿದ್ಧತೆ ನಡೆಸಿದೆ.

ಮಳೆಗಾಲದ ಸಮಸ್ಯೆ ಎದುರಿಸಲು ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ನಿಧಿಯಿಂದ ಜಿಲ್ಲೆಯ ಮೂರು ತಾಲ್ಲೂಕಿನ ತಹಶೀಲ್ದಾರ್ ಗಳಿಗೂ ತಲಾ ಒಂದು ಕೋಟಿ ರೂಪಾಯಿ ಅನುದಾನ ನೀಡಿದೆ. ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ 50 ಸಾವಿರ, ಪಟ್ಟಣ ಪಂಚಾಯಿತಿಗೆ ಒಂದು ಲಕ್ಷ ಮತ್ತು ನಗರ ಸಭೆಗೆ 2 ಲಕ್ಷ ಅನುದಾನ ನೀಡಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಾನ್ಸೂನ್ ಎಂಟ್ರಿಯಾಗಲಿದ್ದು, ಕೊಡಗಿಗೆ ಯಾವ ರೀತಿ ಮಳೆ ಸುರಿಯುತ್ತೋ ಕಾದು ನೋಡಬೇಕಾಗಿದೆ. ಆದರೆ ಕಳೆದ ಎರಡು ಬಾರಿಯಂತೆ ಈ ಬಾರಿ ಯಾವುದೇ ತೊಂದರೆಗೆ ಸಿಲುಕುವುದು ಬೇಡವೆಂದು ಸ್ವತಃ ಜನರೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಆಗುತ್ತಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close