Uncategorizedಕರ್ನಾಟಕ ಸುದ್ದಿ

ಹಾಸನದಲ್ಲಿ 9 ಮಂದಿಗೆ ಎರಡನೇ ಬಾರಿಗೆ ಕರೋನಾ ಪಾಸಿಟಿವ್!

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 15 ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 172 ಕ್ಕೆ ಏರಿಕೆಯಾಗಿದೆ. ನಿನ್ನೆ ಪತ್ತೆಯಾದ ಎಲ್ಲಾ ಪ್ರಕರಣಗಳೂ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದೆ. ಇದುವರೆಗೂ 45 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗಿದೆ.

ಆತಂಕಕಾರಿ ವಿಚಾರ ಎಂದರೆ, 15 ಕೊರೋನಾ ಪ್ರಕರಣಗಳಲ್ಲಿ 6 ಹೊಸ ಪ್ರಕರಣಗಳಾಗಿವೆ. ಉಳಿದ 9 ಮಂದಿಗೆ ಎರಡನೇ ಬಾರಿಗೆ ಕೊರೋನಾ ವೈರಸ್​ ದೃಢಪಟ್ಟಿದ್ದು, ವೈದ್ಯರು ಆತಂಕಗೊಂಡಿದ್ದಾರೆ.

ಜಿಲ್ಲೆಗೆ ಟೆಂಪೋ ಟ್ರಾವೆಲ್ ಮೂಲಕ ಬಂದಿದ್ದ ಹತ್ತು ಜನರಲ್ಲಿ ಒಂದು ಕುಟುಂಬದ ಮೂರು ಮಂದಿ ಹಾಗೂ ಮುಂಬೈನಿಂದ ಕಾರಿನ ಮೂಲಕ ಬಂದಿದ್ದ ತಾಯಿ ಮತ್ತು ಮಗನಿಗೆ ಪಾಸಿಟಿವ್ ಬಂದಿದೆ ಹಾಗೂ ಯಾತ್ರಿ ನಿವಾಸ್‍ನಲ್ಲಿ ಕ್ವಾರಂಟೈನ್‍ನಲ್ಲಿದ್ದ ಒಂಬತ್ತು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಅವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ಹೊರರಾಜ್ಯದಿಂದ ಜಿಲ್ಲೆಗೆ 2,424 ಜನ ಬಂದಿದ್ದಾರೆ. ಅವರಲ್ಲಿ 1,524 ಜನ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಹಾಗೆ ಬಂದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಿ ನಂತರ ಅವರನ್ನು ಸರ್ಕಾರದ ಹೊಸ ಮಾರ್ಗಸೂಚಿಯ ಆದೇಶದಂತೆ ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗುತ್ತದೆ ಎಂದರಲ್ಲದೇ, 900 ಜನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದು ಅವರನ್ನು 7 ದಿನಗಳು ಪೂರ್ಣಗೊಂಡನಂತರ ಹೋಂ ಕ್ವಾರಂಟೈನ್‍ಗೆ ಕಳಿಸಲಾಗುತ್ತದೆ ಎಂದರು.

ಚನ್ನರಾಯಪಟ್ಟಣ ತಾಲ್ಲೂಕಿನ ಪೊಲೀಸ್ ಕಾನ್ಸ್‍ಟೇಬಲ್‍ಗೆ ಕೊರೋನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ್ದ ಅರಸೀಕೆರೆ ತಾಲ್ಲೂಕಿನ ಕೆಲವು ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಪರಿಗಣಿಸಲಾಗಿದೆ ಎಂದು ಆರ್. ಗಿರೀಶ್ ಅವರು ತಿಳಿಸಿದರು.

ಜೂನ್ 8 ರಿಂದ ಇನ್ನಷ್ಟು ಹೊಸ ಅರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಸರ್ಕಾರದ ಆದೇಶದಂತೆ ಜಿಮ್ ಹಾಗೂ ಹೋಟೆಲ್ ಚಟುವಟಿಕೆಗಳು ಎರಡನೇ ಹಂತದಲ್ಲಿ ಪ್ರಾರಂಭ ಮಾಡಲು ಅವಕಾಶ ನೀಡಲಾಗುತ್ತದೆ ಎಂದರಲ್ಲದೇ, ಕಫ್ರ್ಯೂ ಅವಧಿಯನ್ನು ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆವರೆಗೆ ಮರು ನಿಗಧಿಪಡಿಸಲಾಗಿದೆ ಎಂದರು.

ಅಂತರರಾಜ್ಯ ಸಂಚಾರಕ್ಕೆ ಯಾವುದೇ ಪಾಸ್ ಅಗತ್ಯ ಇಲ್ಲ ಸೇವಾಸಿಂಧು ಮೂಲಕ ನೇರ ನೋಂದಣಿ ಮಾಡಿಕೊಂಡು ಬರಬಹುದು. ಬರುವವರಿಗೆ ರಾಜ್ಯದ ಚೆಕ್ ಪೋಸ್ಟ್‌ ನಲ್ಲಿಯೇ ಆರೋಗ್ಯ ತಪಾಸಣೆ ಮಾಡಿ ಮಾಹಿತಿ ನೀಡಲಾಗುತ್ತದೆ. ಬಂದವರನ್ನು 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಕೋವಿಡ್-19 ಪಾಸಿಟಿವ್ ಬಂದವರು ಚಿಕಿತ್ಸೆ ಮುಗಿಸಿ ಮನೆಗೆ ಹೋದರೆ ಅಲ್ಲಿ ಸುತ್ತ ಮುತ್ತಲ ಜನರು ಅವರನ್ನು ದೂಷಿಸುವಂತಿಲ್ಲ. ಅವರಿಗೆ ಬೆಂಬಲ ನೀಡುವಂತೆ ಗ್ರಾಮ ಪಂಚಾಯ್ತಿಯ ಪಿ.ಡಿ.ಓ ಗಳಿಗೆ ಸೂಚಿಸಲಾಗುತ್ತದೆ. ಅಲ್ಲದೇ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ಹೋದವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಅಂತವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದ ಪ್ರಾಥಮಿಕ ಹಂತದ ಶಂಕಿತರನ್ನು ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್ ಮಾಡಿ ಆ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗುತ್ತದೆ ಎಂದು ಅವರು ತಿಳಿಸಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close