ಕರ್ನಾಟಕ ಸುದ್ದಿ

ಸಾಮಾಜಿಕ ಅಂತರ ಗಾಳಿಗೆ ತೂರಿದ ಸಚಿವ ಶ್ರೀರಾಮುಲು..!

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ದೇಶಾದ್ಯಂತ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಸಾವಿರಾರು ಜನ ಕೊರೋನಾ ಮಹಾಮಾರಿ ಸೋಂಕಿಗೆ ಸಿಲುಕಿ ಸತ್ತಿದ್ದಾರೆ, ನಲುಗುತ್ತಿದ್ದಾರೆ. ಆದರೆ, ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾತ್ರ ಈ ಸಂಕಷ್ಟದ ಸಮಯದಲ್ಲೂ ಸಾಮಾಜಿಕ ಅಂತರ ಮರೆತು ಸೇಬಿನ ಹಾರ ಹಾಕಿ, ಹೂವಿನ ಮಳೆ ಸುರಿಸಿ ಅದ್ದೂರಿ ಸ್ವಾಗತ ಮಾಡಿದರು.

ಇನ್ನು, ಸಾರ್ವಜನಿಕರಿಗೆ ಜಾಗೃತಿ ಮೂಡಸಬೇಕಾದ ಆರೋಗ್ಯ ಸಚಿವರೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದರು. ಕೊರೋನಾ ಸಂಕಷ್ಟದ ನಡುವೆಯೇ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಹೊರಟ ಶ್ರೀರಾಮುಲು, ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಿಸಿಕೊಂಡರು. ನೂರಾರು ಜನರ ನಡುವೆ ರಾಶಿಗಟ್ಟಲೇ ಹೂವು ಮಳೆಗರಿಸಿಕೊಂಡು ಅದ್ದೂರಿ ಸ್ವಾಗತ ಮಾಡಿಸಿಕೊಂಡರು. ಎಲ್ಲಿಯೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ ಎಂಬುದು ಖಂಡನಾರ್ಹ.

ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಶ್ರೀ ರಾಮುಲುಗೆ ಇಂದು ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದ ಬಳಿಯ ವೇಧಾವತಿ ನದಿಯ ಬ್ಯಾರೇಜ್ ಬಳಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಸಚಿವರ ಪ್ರವಾಸ ಕಾರ್ಯಕ್ರಮಂತೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಪರುಶುರಾಂಪುರ ಗ್ರಾಮಕ್ಕೆ ಶ್ರೀರಾಮುಲು ಆಗಮಿಸಿದ್ದರು. ಆದರೆ, ಸಚಿವರ ನಿಗದಿತ ಕಾರ್ಯಕ್ರಮ ಹೊರತುಪಡಿಸಿ ಇನ್ನೆಲ್ಲಾ ಅಂದರೆ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ರೈತರು ಸೇರಿದಂತೆ ನೂರಾರು ಜನ ಸಚಿವರನ್ನ ಎತ್ತಿನ ಗಾಡಿ ಮೆರವಣಿಗೆ ಮಾಡಿ ರಸ್ತೆಯುದ್ದಕ್ಕೆ ಪಟಾಕಿ ಸಿಡಿಸಿದರು.

ಸಚಿವರ ಮೆರವಣಿಗೆ ಗ್ರಾಮದ ಮದ್ಯಭಾಗಕ್ಕೆ ಬರುತ್ತಿದ್ದಂತೆ ಜೆಸಿಬಿಗಳನ್ನ ನಿಲ್ಲಿಸಿಕೊಂಡು ರಾಶಿ ರಾಶಿ ಹೂಮಳೆಗರೆದು, ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಿಸಿದ್ದಾರೆ. ಕೊರೋನಾ ಲಾಕ್​​ಡೌನ್ ನಡುವೆಯೇ ಯಾವುದೇ ಅನುಮತಿ ಪಡೆಯದೆ ಕಾರ್ಯಕ್ರಮ ನಡೆದದ್ದನ್ನು ತಡೆಯದೇ ಸಚಿವರು ಹಾಗೂ ಅಧಿಕಾರಿಗಳು ಇಂಥದ್ದೊಂದು ಮಹಾನ್ ಯಡವಟ್ಟು ಮಾಡಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಸರ್ಕಾರ ಈ ರೋಗ ಹರಡುವಿಕೆ ತಡೆಯಲು ಸಾಕಷ್ಟು ಹರಸಾಹ ಮಾಡುತ್ತಿದೆ. ನಿಯಮಗಳು, ಸಾಮಾಜಿಕ ಅಂತರ  ಕಡ್ಡಾಯ ಮಾಸ್ಕ್ ಧರಿಸಿ, ಇಲ್ಲವಾದ್ರೆ ದಂಡ ವಿಧಿಸುತ್ತೇವೆ ಎಂದು ಕಾನೂನು ಮಾಡಿದೆ.

ಆದರೆ ಸರ್ಕಾರದ ಪ್ರತಿನಿಧಿಯಾಗಿ  ಜನರಿಗೆ ಜಾಗೃತಿ ಮೂಡಿಸಬೇಕಾದ ಆರೋಗ್ಯ ಸಚಿವ ಶ್ರೀ ರಾಮುಲು  ಮಾತ್ರ ಇದೆಲ್ಲವನ್ನು ಮರೆತು ಬಿಟ್ಟಿದ್ದಾರೆ. ಗ್ರಾಮಕ್ಕೆ ಆಗಮಿಸುತ್ತಿದ್ದಂತೆ‌ ಸ್ವತಃ ಮಾಸ್ಕ್ ಮರೆತಿದ್ದ ಸಚಿವರು, ನೂರಾರು ಜನರ ಮಧ್ಯೆ ಜೆಸಿಬಿಗಳ ಮೂಲಕ ಬೃಹತ್ ಸೇಬಿನ ಹಾರ ಹಾಕಿಸಿಕೊಂಡ, ಶ್ರೀ ರಾಮುಲು ಜೈಕಾರ ಹಾಕುತಿದ್ದ ಜನರನ್ನ ಕಂಡು ಕಾರ್ಯಕರ್ತರಿಗೆ ಕೈಬಿಸಿ ಪೋಸ್ ಕೊಟ್ಟಿದ್ದು ಮಾತ್ರ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಕಾರಣವಾಯಿತು.

ಇನ್ನು ಮಾಧ್ಯಮದವರು ನೋಡುತ್ತಿದ್ದಂತೆಯೇ ಎಚ್ಚೆತ್ತ ಶ್ರೀರಾಮುಲು, ಕೊರೋನಾ ವೈರಸ್ ಕುರಿತು ಪಾಠ ಮಾಡಿದಲ್ಲದೆ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ ಅಂತ ಭೋಧನೆ ಮಾಡಿದರು. ನಾನು ಇಲ್ಲಿಯವರೆಗೂ ಮಾಸ್ಕ್ ತೆಗೆದಿಲ್ಲ,ಇಷ್ಟೋತ್ತು ಶಾಲು ಹಾಕಿದ್ದೆ ಈಗ ತೆಗೆದಿದ್ದೇನೆ. ಮತ್ತೆ ಮಾಸ್ಕ್ ಹಾಕಿದ್ದೇನೆ, ಜನರಿಗೆ ಆದಷ್ಟು ಸಾಮಾಜಿಕ ಅಂತರದ ತಿಳುವಳಿಕೆ ಕೊಡುವ ಕೆಲಸ ಮಾಡುವೆ. ಇದು ನಿಗದಿಯಾದ ಕಾರ್ಯಕ್ರಮ ಅಲ್ಲ, ನಾನು ಬರೀ ಬಾಗಿನ ಅರ್ಪಿಸಿ ಹೋಗುತ್ತೇನೆ ಎಂದು ವಿನಂತಿ ಮಾಡಿದ್ದೆ. ಆದರೆ ಕಾರ್ಯಕರ್ತರು ಮಾತನಾಡಬೇಕು ಎಂದು ಒತ್ತಾಯ ಮಾಡಿದ್ದರಿಂದ ಮಾತನಾಡಿದ್ದೇನೆ. ಕೊರೋನಾ ಜಾಗೃತಿಗಾಗಿ ನಾವೇ ಗೈಡ್ ಲೈನ್ ಮಾಡಿದ್ದೇವೆ, ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಾನು ವಿನಂತಿ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.

Continue

Related Articles

Leave a Reply

Your email address will not be published. Required fields are marked *

Back to top button
Close
Close