ಕರ್ನಾಟಕ ಸುದ್ದಿ

ರಾಜ್ಯದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದವರಲ್ಲಿ ಪಾಸಿಟಿವ್ ಪ್ರಮಾಣ ದೇಶದಲ್ಲಿಯೇ ಅತ್ಯಂತ ಕಡಿಮೆ: ಡಾ.ಸುಧಾಕರ್

— ವಿಜಯ್.ಎ.ಸರೋದೆ, ಪತ್ರಕರ್ತರು ಸಿರವಾರ

ರಾಜ್ಯದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದವರಲ್ಲಿ ಪಾಸಿಟಿವ್ ಪ್ರಮಾಣ ದೇಶದಲ್ಲಿಯೇ ಅತ್ಯಂತ ಕಡಿಮೆ: ಡಾ.ಸುಧಾಕರ್

ಹಾಸನ, ಜೂನ್ 2: ರಾಜ್ಯದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದವರಲ್ಲಿ ಪಾಸಿಟಿವ್ ವರದಿ ದೃಢಪಡುತ್ತಿರುವವರ ಪ್ರಮಾಣ ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಹೇಳಿದ್ದಾರೆ. ರಾಜ್ಯದಲ್ಲಿ ಇದುವರೆಗೆ 3,04,816 ಮಂದಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 3450 ಮಂದಿಗೆ ಮಾತ್ರ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಂದರೆ ಇದರ ಪ್ರಮಾಣ ಶೇಕಡ 1.1ರಷ್ಟಿದ್ದು, ಇದು ದೇಶದಲ್ಲಿಯೇ ಅತ್ಯಂತ ಕಡಿಮೆಯದ್ದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಾಸನದಲ್ಲಿ ಇಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿನ ಕೋವಿಡ್ 19 ಸ್ಥಿತಿಗತಿಗಳನ್ನು ಪರಾಮರ್ಶಿಸಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಈ ಸೋಂಕು ಕಾಣಿಸಿಕೊಂಡಾಗ ಕೇವಲ 2 ಕೋವಿಡ್ ಪರೀಕ್ಷಾ ಕೇಂದ್ರಗಳಿದ್ದವು, ಈಗ ರಾಜ್ಯದಲ್ಲಿ 64 ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಇಂದು ಸಹ ಬೀದರ್ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಯಿತು ಎಂದು ಹೇಳಿದರು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೋವಿಡ್ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಕೋವಿಡ್ ಸೋಂಕು ನಿವಾರಣೆಗೆ ರಾಜ್ಯ ಕೈಗೊಂಡಿರುವ ಕ್ರಮಗಳನ್ನು ಸ್ವತಃ ಪ್ರಧಾನಮಂತ್ರಿಗಳು ಶ್ಲಾಘಿಸಿದ್ದಾರೆ ಎಂದು ಹೇಳಿದ ಮಾನ್ಯ ಮಂತ್ರಿಗಳು ಲಾಕ್ ಡೌನ್ ಮುಂಜಾಗ್ರತಾ ಕ್ರಮಗಳ ಮೂಲಕ ಜನರ ಜೀವ ರಕ್ಷಿಸಿದ್ದಾಗಿದೆ, ಈಗ ಜೀವನವೂ ಮುಖ್ಯವಾದುದರಿಂದ ಪುನಃ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಅಂದ ಮಾತ್ರಕ್ಕೆ ಸರ್ಕಾರ ಕೈ ಚಾಚಿ ಕುಳಿತುಕೊಂಡಿದೆ ಎಂದು ಭಾವಿಸಬಾರದು, ನಾವು ಕೋವಿಡ್ ವೈರಸ್ ಎದುರಿಸಿ, ಅದರ ಜೊತೆ ಜೊತೆಗೆ ಬದುಕುವ ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು.

ರಾಜ್ಯದ ಸಾವಿರಾರು ಮಕ್ಕಳಿಗೆ ನೀಡಬೇಕಾಗಿದ್ದ ಲಸಿಕೆಗಳನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ, ಕೊರೋನರಹಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ, ಈ ಸ್ಥಿತಿಯಿಂದ ನಾವು ಹೊರಬರಬೇಕಾಗಿದೆ. ಈ ಕಾರಣದಿಂದ ಖಾಸಗಿ ಕ್ಲಿನಿಕ್, ಡಿಸ್ಪೆನ್ಸರಿ ಹಾಗೂ ನರ್ಸಿಂಗ್ ಹೋಂಗಳು ತಕ್ಷಣವೇ ಕಾರ್ಯಾರಂಭಿಸಬೇಕು, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುವುದು ಎಂದು ಸಚಿವರು ಎಚ್ಚರಿಸಿದರು. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಹಿಂದಿರುಗುತ್ತಿರುವವರಲ್ಲಿ ಕೋವಿಡ್ ವೈರಾಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಇಂತಹ ಪ್ರಯಾಣಿಕರನ್ನು 14 ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿಯೂ ಸಚಿವರು ತಿಳಿಸಿದರು.

ಹಾಸನದ ವೈದ್ಯಕೀಯ ಕಾಲೇಜಿನಲ್ಲಿ ಪಾಳಿಯ ಮೇರೆಗೆ ಪ್ರತಿ ದಿನ 500 ಮಂದಿಯ ಕೋವಿಡ್ 19 ಪರೀಕ್ಷೆಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಮಾಧುಸ್ವಾಮಿ, ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ, ಪ್ರೀತಂಗೌಡ, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ಗಿರೀಶ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಮೆಡಿಕಲ್ ಕಾಲೇಜಿಗೆ ಭೇಟಿ ….

ಸಭೆಯ ನಂತರ ಹಾಸನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಸಚಿವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಪರಾಮರ್ಶೆ ನಡೆಸಿದರು. ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆ ಭರ್ತಿಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಕರಿಗೆ ಸೂಚನೆ ನೀಡಿದರು. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರ ಹಾಜರಾತಿ ಸರಿಯಾಗಿ ಇರುವಂತೆ ಮತ್ತು ತಪ್ಪು ಲೆಕ್ಕ ನಮೂದಿಸದಂತೆ ನೋಡಿಕೊಳ್ಳಲು ತಿಳಿಸಿದರು. ಕೋವಿಡ್ ಚಿಕಿತ್ಸೆ ಮತ್ತು ಸೋಂಕಿತರ ಸಂಪರ್ಕಗಳ ನಿಗಾ ವ್ಯವಸ್ಥೆಯನ್ನು ಮಾರ್ಗಸೂಚಿಗೆ ಅನುಗುಣವಾಗಿ ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳ ವಿದ್ಯಾರ್ಥಿಗಳು ಹಾಗೂ ನಾನಾ ವಿಭಾಗಗಳ ಮುಖ್ಯಸ್ಥರ ಜೊತೆಗೆ ಸಚಿವ ಡಾ .ಸುಧಾಕರ್ ಸಮಾಲೋಚನೆ ನಡೆಸಿದರು

Continue

Related Articles

Leave a Reply

Your email address will not be published. Required fields are marked *

Back to top button
Close
Close