ರಾಯಚೂರು ಜಿಲ್ಲೆ ಸುದ್ದಿ

ಕೊರೋನಾ ಎಫೆಕ್ಟ್ ; ಬಸ್​ ಹತ್ತಲು ಪ್ರಯಾಣಿಕರ ಹಿಂದೇಟು; ನಷ್ಟದಲ್ಲಿ ಸಾರಿಗೆ ಸಂಸ್ಥೆಗಳು

–ಸಿರಾಜುದ್ದೀನ್ ಬಂಗಾರ್,ಸಂಪಾದಕರು ಕರ್ನಾಟಕ-ಜ್ವಾಲೆ

ಜನಸ್ನೇಹಿ ಸಾರಿಗೆ ಎಂದೇ ಕರೆಸಿಕೊಂಡಿರುವ ಕೆಎಸ್ ಆರ್ ಟಿಸಿ ಬಸ್​ಗಳನ್ನು ಹತ್ತಲು ಅದೇಕೋ  ಪ್ರಯಾಣಿಕರು  ಮನಸ್ಸು ಮಾಡುತ್ತಲೇ  ಇಲ್ಲ. ಏನೇ ಸರ್ಕಸ್ ಮಾಡಿದ್ರೂ ಪ್ರಯಾಣಿಕರು ಬಸ್ ಗಳತ್ತ ಸುಳಿಯಲು ಧೈರ್ಯ ಮಾಡುತ್ತಿಲ್ಲ. ಹೀಗಾಗಿ ಆಡಳಿತ ವ್ಯವಸ್ಥೆ  ಕಂಗಾಲಾಗಿ ಹೋಗಿದೆ. ಕೊನೆಗೂ ಆಡಳಿತ ವ್ಯವಸ್ಥೆಗೆ ಒಂದು ಸತ್ಯ ತಿಳಿದುಬಂದಿದೆ.

ಪ್ರಯಾಣಿಕರ ಈ ಹಿಂದೇಟಿಗೆ ಕಾರಣ ನಿರಾಸಕ್ತಿಯಲ್ಲ, ಬದಲಿಗೆ  ಆತಂಕ ಎನ್ನುವುದು ಮನವರಿಕೆಯಾಗಿದೆ. ಕೊರೋನಾ ಲಾಕ್​ಡೌನ್  ನಡುವೆಯೂ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಸರ್ಕಾರದ ಸೂಚನೆ ಮೇರೆಗೆ ಕೆಎಸ್ ಆರ್ ಟಿಸಿ ಸಾಕಷ್ಟು ಬಸ್ ಗಳನ್ನು ರಸ್ತೆಗಿಳಿಸಿತ್ತು. ಪ್ರಯಾಣಿಕರಿಗೆ ಅತ್ಯವಶ್ಯಕವಾಗಿರುವ ಸಂಚಾರಿ ವ್ಯವಸ್ಥೆಯನ್ನು ಪೂರೈಸುವ ಹೊಣೆಯನ್ನು ಹೊತ್ತುಕೊಂಡಿತ್ತು. ಆದರೆ ಪ್ರಯಾಣಿಕರಿಂದ ದೊರೆತಿರುವ ನೀರಸ ಪ್ರತಿಕ್ರಿಯೆ ಒಂದೆಡೆ ನಷ್ಟಕ್ಕೆ ಕಾರಣವಾಗಿದ್ದರೆ,ಇನ್ನೊಂದೆಡೆ ಇಂತಹ ಪರಿಸ್ಥಿತಿಯಲ್ಲಿಯೂ ಬಸ್ ಗಳನ್ನು ಓಡಿಸಬೇಕಾ ಎನ್ನುವ ಪ್ರಶ್ನೆ ಮೂಡಿಸಿದೆ.

ಆರ್ ಟಿಸಿ ಯಾವುದೇ ಲಾಭದ ನಿರೀಕ್ಷೆ ಇಟ್ಟುಕೊಂಡು ಬಸ್ ಗಳನ್ನು ಓಡಿಸುವಂತೆ ಸಂಸ್ಥೆಯಲ್ಲ ನಿಜ. ಸಾರ್ವಜನಿಕರಿಗೆ ಅವಶ್ಯಕವಾಗಿರುವ ಸಂಚಾರಿ ವ್ಯವಸ್ಥೆಯನ್ನು ಪೂರೈಸುವುದು ಅದರ ಆದ್ಯ ಕರ್ತವ್ಯ  ಕೂಡ. ಆದರೆ ಎಷ್ಟು ದಿನ ನಷ್ಟದಲ್ಲೇ ಇಡೀ ವ್ಯವಸ್ಥೆಯನ್ನು ನಿರ್ವಹಿಸುವುದು ಎನ್ನೋದು ಕೂಡ ಚಿಂತಿಸಬೇಕಾದ ವಿಷಯವಾಗಿದೆ.

ಈಗಾಗಲೇ ನಷ್ಟಕ್ಕೆ ಸಿಲುಕಿ‌ ಜರ್ಜರಿತವಾಗಿರುವ ಸಾರಿಗೆ ನಿಗಮಗಳಿಗೆ ಲಾಕ್ ಡೌನ್ ನ ನಷ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಎಸ್ಆರ್​ಟಿಸಿಯ ಪರಿಸ್ಥಿತಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದಷ್ಟು ಶೋಚನೀಯವಾಗಿದೆ. ನ್ಯೂಸ್ 18  ಕನ್ನಡ ಇದಕ್ಕೆ ಸಂಬಂಧಿಸಿದಂತೆ ನಿನ್ನೆ ವಿಸ್ತೃತವಾದ ವರದಿಯನ್ನು ಕೂಡ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕೆಎಸ್​​ಆರ್​ಟಿಸಿ ಈವರೆಗೆ ಸಂಚರಿಸಿರುವಂಥ ಪ್ರಯಾಣಿಕರ ಅಂಕಿ ಸಂಖ್ಯೆ  ಬಿಡುಗಡೆ ಮಾಡಿದೆ. ಬಹುಶಃ ಕೆಎಸ್ ಆರ್ ಟಿಸಿಯಿಂದ ಕೊರೋನಾ ಸಮಯದಲ್ಲಿ ಪ್ರಯಾಣಿಕರು ಹೇಗೆ ವಿಮುಖರಾಗಿದ್ದಾರೆನ್ನೋದಕ್ಕೆ ಇದೊಂದೇ ವರದಿ ಸಾಕಾಗಬಹುದೇನೋ.

ಕೆಎಸ್​ಆರ್​​ಟಿಸಿ ಬಸ್ ಗಳ ಸಂಚಾರದ ಬಗ್ಗೆ ಪ್ರಯಾಣಿಕರಲ್ಲಿ ನಿರುತ್ಸಾಹ ಕ್ಕಿಂತ ಆತಂಕವೇ ಹೆಚ್ಚಾಗಿರುವುದು ಸ್ಪಷ್ಟ. ಕೊರೋನಾ ಭೀತಿಗೆ ಹೆದರಿ ಬಸ್ ಗಳಲ್ಲಿ ಸಂಚರಿಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆನ್ನೋದು ಕೂಡ ಸತ್ಯ. ಈವರೆಗೂ ಅಂದರೆ ಮೇ 19 ರಿಂದ ಜೂನ್1 ರವರೆಗೆ ರಾಜ್ಯಾದ್ಯಂತ ಕೆಎಸ್ ಆರ್ ಟಿಸಿ  ಬಸ್ಗಳಲ್ಲಿ ಪ್ರಯಾಣಿಸಿದವರ‌ ಒಟ್ಟು ಸಂಖ್ಯೆ ಎಷ್ಟು ಗೊತ್ತಾ? ಕೇವಲ 12,25,884 ಮಂದಿ. ಅದು ಕೂಡ 39,383 ಬಸ್ ಗಳಲ್ಲಿ.

ಇನ್ನು ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವವರ ಸಂಖ್ಯೆ ತೀರಾ ಕಡಿಮೆ. ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಆದರೆ ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವವರ ಸಂಖ್ಯೆ ಕುಸಿತ ಕಂಡಿದೆ.  ಮೇ 19ರಿಂದ ಜೂನ್ 1 ರವರೆಗೆ ಬೆಂಗಳೂರಿನಿಂದ ಹೊರಭಾಗಕ್ಕೆ ತೆರಳಿದವರ ಸಂಖ್ಯೆ ಕೇವಲ 1,60,287  ಮಾತ್ರ ಅಂದಹಾಗೆ ಬೆಂಗಳೂರಿನಿಂದ ಈ ದಿನಗಳ ಅವಧಿಯಲ್ಲಿ ಕಾರ್ಯಾಚರಣೆ ಮಾಡಿದ ಬಸ್ ಗಳ ಸಂಖ್ಯೆ ಕೇವಲ 10,302. ಹಾಗೆ ನೋಡಿದರೆ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಪ್ರಯಾಣಿಸಿದವರ ಹೆಚ್ಚು. ಕ್ಯೂನಲ್ಲಿ ನಿಂತು ಟಿಕೆಟ್ ಗಳನ್ನು ಪಡೆದುಕೊಳ್ಳಲು ಹಿಂದೇಟು ಹಾಕಿದ ಪ್ರಯಾಣಿಕರು ಬುಕ್ಕಿಂಗ್ ನಲ್ಲಿ ಸಂಚರಿಸಿರುವುದೇ  ಹೆಚ್ಚು. ಮೇ 19 ರಿಂದ ನಿನ್ನೆವರೆಗೂ 75,079 ಮಂದಿ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಹಾಗಂತ ಇದು ಸಮಾಧಾನಕರ ಸಂಗತಿ ಏನಲ್ಲ ಏಕೆಂದರೆ “ಅವತಾರ್” ನಂಥ ಅಡ್ವಾನ್ಸ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಕೆಎಸ್ಸಾರ್ಟಿಸಿ ಪಡೆದುಕೊಳ್ಳುತ್ತಿದ್ದಂತೆ ಲಾಭ ಅದೆಷ್ಟೋ ಕೋಟಿ.

ಪ್ರಯಾಣಿಕರ ನಿರುತ್ಸಾಹ ಮತ್ತು ಆತಂಕಕ್ಕೆ ಕೆಎಸ್ ಆರ್ ಟಿಸಿ ಆಡಳಿತ ಮಂಡಳಿಯೇ ಶಾಕ್ ಆಗಿದೆ. ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರು ಬಾರದೇ ಇರುವುದರಿಂದ ಚಿಂತೆಗೆ ಈಡಾಗಿದೆ. ಹೀಗೆ ಮುಂದುವರೆದರೆ ಏನು ಮಾಡುವುದು ಎನ್ನುವಂತಹ ದೊಡ್ಡಮಟ್ಟದ ಆತಂಕಕಾರಿ ಪ್ರಶ್ನೆಗಳನ್ನು ಮೂಡಿಸಿಕೊಂಡಿದೆ. ಆಗುತ್ತಿರುವ ನಷ್ಟವನ್ನು ಸರಿದೂಗಿಸದೇ  ಹೋದರೆ ಮುಂದೆ ನಿಗಮವನ್ನು ನಡೆಸುವುದೇ ಕಷ್ಟವಾಗುತ್ತದೆ ಎನ್ನುವ ಚಿಂತೆಗೂ ಬಿದ್ದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರೋವರೆಗೂ ನೀವೇ ಏನಾದ್ರೂ ಪರಿಹಾರ ಕೊಡಿ ಸರ್ಕಾರದ ಮೊರೆ ಹೋಗಿದೆ. ಆದ್ರೆ ಸರ್ಕಾರವೇ ಸದ್ಯದ ಆರ್ಥಿಕ ಹಿಂಜರಿತಕ್ಕೆ ಸಿಲುಗಿ ನಲುಗ್ತಿದೆ. ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ಹೇಗೆ ದಾರಿ ತೋರಿಸ್ತಾನೋ ಗೊತ್ತಾಗ್ತಿಲ್ಲ.

Continue

Related Articles

Leave a Reply

Your email address will not be published. Required fields are marked *

Back to top button
Close
Close