ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ : ಕರಾವಳಿ ಭಾಗದ ತೋಟಗಳಲ್ಲಿ ಕಂಡು ಬಂದ ಮಿಡತೆಗಳು; ಪರೀಕ್ಷೆಗಾಗಿ ಬೆಂಗಳೂರಿಗೆ ಮಾದರಿ ರವಾನೆ

Posted By: Sirajuddin Bangar

Source: NS18

ಪುತ್ತೂರು: ಕರಾವಳಿ ಭಾಗದ ಕೃಷಿ ತೋಟಗಳಲ್ಲಿ ದಿಢೀರನೆ ಪ್ರತ್ಯಕ್ಷಗೊಂಡು ಕೃಷಿಕರ ಆತಂತಕ್ಕೆ ಕಾರಣವಾಗಿರುವ ಮಿಡತೆಗಳ ಪರಿಶೀಲನೆಯನ್ನು ಕೃಷಿ ಇಲಾಖೆಯ ತಜ್ಞರು ನಡೆಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಲ ಹಾಗೂ ಬೆಳ್ತಂಗಡಿಯ ಕೃಷಿಕರೊಬ್ಬರ ಕೃಷಿತೋಟದಲ್ಲಿ ಈ ಮಿಡತೆಗಳು ಕಂಡು ಬಂದಿದೆ. ತೋಟದಲ್ಲಿರುವ ತರಗೆಲೆಗಳನ್ನು ಭಾರೀ ಪ್ರಮಾಣದಲ್ಲಿ ತಿನ್ನುತ್ತಿರುವುದನ್ನು ಕಂಡು ಕೃಷಿಕರಲ್ಲಿ ಆತಂಕ ಉಂಟು ಮಾಡಿದೆ. ಈಗಾಗಲೇ ಪಾಕಿಸ್ತಾನದ ಕಡೆಯಿಂದ ಬಂದಿರುವಂತಹ ಮಿಡತೆಗಳ ಗುಂಪು ರಾಜಸ್ಥಾನ ಹಾಗೂ ಮಹಾರಾಷ್ಟ್ರಗಳಲ್ಲಿ ಭಾರೀ ಪ್ರಮಾಣದ ಕೃಷಿ ಹಾನಿ ಮಾಡಿರುವ ಕುರಿತು ಮಾಹಿತಿ ಪಡೆದಿರುವ ಕೃಷಿಕರು ಮಿಡತೆಗಳ ಗುಂಪು ನೋಡಿ ದಂಗು ಬಡಿದಿದ್ದರು. ಈ ಸಂಬಂಧ ಕೃಷಿ ಅಧಿಕಾರಿಗಳು ಇದೀಗ ಮಿಡತೆ ಕಂಡು ಬಂದಿರುವ ತೋಟಗಳಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.

ಮಿಡತೆಗಳು ಸಾಮಾನ್ಯವಾಗಿ ಸಂಜೆಯ ಹೊತ್ತಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ತೋಟಗಳಿಗೆ ದಾಳಿಯಿಡುತ್ತಿದ್ದು, ಬಿಸಿಲಿನ ಸಮಯದಲ್ಲಿ ಎಲೆಗಳ ಅಡಿಭಾಗದಲ್ಲಿರುತ್ತವೆ. ಮಿಡತೆಗಳನ್ನು ಮುಟ್ಟಿದ್ದಲ್ಲಿ ಕೆಳಗೆ ಬಿದ್ದು ಸಾವನ್ನಪ್ಪುತ್ತದೆ. ಅಲ್ಲದೆ ಹಕ್ಕಿಗಳೂ ಇವುಗಳನ್ನು ತಿನ್ನುತ್ತಿದ್ದು ಇದೇ ಮೊದಲ ಬಾರಿಗೆ ಇಂತಹ ಮಿಡತೆಗಳನ್ನು ನೋಡಿ ಕೃಷಿಕರು ಆತಂಕಪಟ್ಟಿದ್ದಾರೆ. ತಮ್ಮ ತೋಟಗಳಲ್ಲಿ ಇಂಥ ಮಿಡತೆಗಳನ್ನು ಇದೇ ಮೊದಲ ಬಾರಿ ನೋಡುತ್ತಿದ್ದು, ಈ ಮಿಡತೆಗಳು ಚಿಗುರೆಲೆಗಳನ್ನೇ ಹೆಚ್ಚಾಗಿ ತಿನ್ನುತ್ತಿರುವುದು ನೋಡಿದಲ್ಲಿ ಮುಂದೆ ಇವುಗಳು ಬೆಳೆ ಹಾನಿ ಮಾಡಲಿದೆ ಎನ್ನುತ್ತಾರೆ ಮಿಡತೆ ಕಂಡು ಬಂದ ತೋಟದ ಮಾಲೀಕ ವಿಶ್ವನಾಥ್ ಹೇರ.

ಕೃಷಿಕರ ಆತಂಕದ ಹಿನ್ನೆಲೆಯಲ್ಲಿ ಕೃಷಿ ತಜ್ಞರು ಮಿಡತೆಗಳು ಕಂಡು ಬಂದ ತೋಟಗಳನ್ನು ಪರಿಶೀಲನೆ ನಡೆಸಿದ್ದು, ಇಂಥ ಮಿಡತೆಗಳು ಕರಾವಳಿ ಭಾಗದಲ್ಲಿ ಮೊದಲ ಬಾರಿಗೆ ಕಂಡು ಬಂದಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದು ಪಾಕಿಸ್ತಾನ ಭಾಗದಲ್ಲಿ ಕಂಡು ಬಂದಿರುವಂತಹ ಮರುಭೂಮಿಯ ಲೋಕಸ್ಟ್ ಅಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ. ಮಿಡತೆಗಳಲ್ಲಿ ಹಲವು ಪ್ರಕಾರಗಳಿದ್ದು, ಕೃಷಿ ತೋಟಗಳಲ್ಲಿ ಕಂಡು ಬಂದಿರುವ ಮಿಡತೆಗಳು ವಿಭಿನ್ನವಾಗಿವೆ. ಎಲ್ಲಾ ಎಲೆಗಳನ್ನು ತಿಂದು ಮುಗಿಸುವ ಈ ಮಿಡತೆಗಳನ್ನು ಈಗಾಗಲೇ ಸಂಗ್ರಹಿಸಲಾಗಿದ್ದು, ಅದರ ಜೊತೆಗೆ ಈ ಮಿಡತೆಗಳು ತಿನ್ನುವ ಎಲೆಗಳನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಬೆಂಗಳೂರಿನ ಕೃಷಿ ಸಂಶೋಧನಾಲಯ ಹಾಗೂ ಸಿ.ಪಿ.ಸಿ.ಆರ್.ಐ (ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾಲಯ) ಲ್ಯಾಬ್​ಗಳಿಗೆ ಈ ಮಾದರಿಗಳನ್ನು ಕಳುಹಿಸಲಾಗಿದ್ದು, ಒಂದು ವಾರದಲ್ಲಿ ಇವುಗಳ ವರದಿ ಬರುವ ಸಾಧ್ಯತೆಯಿದೆ ಎನ್ನುತ್ತಾರೆ ಪುತ್ತೂರು ಕೃಷಿ ಇಲಾಖೆ ತಜ್ಞರಾದ ಡಾ. ಶಿವಶಂಕರ್.

ಮಿಡತೆಗಳು ಯಾವ ರೀತಿಯಲ್ಲಿ ಕೃಷಿಗೆ ಹಾನಿ ಮಾಡಲಿದೆ ಎನ್ನುವ ಬಗ್ಗೆಯೂ ಕೃಷಿ ಅಧಿಕಾರಿಗಳಿಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ. ಈ ಕಾರಣಕ್ಕಾಗಿ ಕೃಷಿಕರು ಇಂಥ ಘಟನೆಗಳ ಬಗ್ಗೆ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು ಎನ್ನುವ ಸೂಚನೆಯನ್ನೂ ನೀಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close