ಕರ್ನಾಟಕ ಸುದ್ದಿ

ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಜತ ಮಹೋತ್ಸವ ಉದ್ಘಾಟಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

–ಸಿರಾಜುದ್ದೀನ್ ಬಂಗಾರ್,ಸಂಪಾದಕರು ಕರ್ನಾಟಕ-ಜ್ವಾಲೆ

ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಜತ ಮಹೋತ್ಸವ ಉದ್ಘಾಟಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

ಆರ್.ಜಿ.ಯು.ಹೆಚ್.ಎಸ್. ಗೆ ಇದೊಂದು ಐತಿಹಾಸಿಕ ದಿನ – ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು – ಜೂನ್ 1, 2020: ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇಂದು ರಜತ ಮಹೋತ್ಸವವನ್ನು ಆಚರಿಸುತ್ತಿದ್ದು ಕಾರ್ಯಕ್ರಮವನ್ನು ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಈ ಸಂಸ್ಥೆಯ ಧನ್ವಂತರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ಶ್ರೀ ವಜುಭಾಯಿ ವಾಲಾ, ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಕೊರೋನ ವಿರುದ್ಧ ಕರ್ನಾಟಕದ ಕ್ರಮಗಳನ್ನು ಮೆಚ್ಚಿದ ನರೇಂದ್ರ ಮೋದಿ

ಕೊರೋನ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ದಿಟ್ಟ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿಯವರು ಆರೋಗ್ಯ ರಂಗದಲ್ಲಿ ಹೆಚ್ಚು ಆವಿಷ್ಕಾರಗಳನ್ನು ನಡೆಸುವಂತೆ ಕರೆ ನೀಡಿದರು ಇದೇ ಸಂದರ್ಭದಲ್ಲಿ ಹ್ಯಾಕಥಾನ್ ಚಾಲೆಂಜ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿಯವರು ಸಂಸ್ಥೆಯ ಎಲ್ಲಾ ವೈದ್ಯಕೀಯ ಮತ್ತು ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು. ದೇಶದಲ್ಲಿ ಕೊರೋನ ಸಂಕಷ್ಟ ಇಲ್ಲವಾಗಿದ್ದರೆ ಖುದ್ದಾಗಿ ತಾವು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರೆಂದು ಮಾನ್ಯ ಪ್ರಧಾನಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆರ್.ಜಿ.ಯು.ಹೆಚ್.ಎಸ್ ಸಂಸ್ಥೆಗೆ ಇದೊಂದು ಐತಿಹಾಸಿಕ ದಿನವಾಗಿದ್ದು, ಪ್ರಧಾನಮಂತ್ರಿಗಳು ಸಮಾರಂಭವನ್ನು ಉದ್ಘಾಟಿಸಿರುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಸ್ಥೆಯು ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡುವಂತೆ ಪ್ರೇರಣೆ ನೀಡಿದೆ ಎಂದಿದ್ದಾರೆ. ಕೊರೋನ ವಿರುದ್ಧದ ಸಮರದಲ್ಲಿ ನೂತನ ಆವಿಷ್ಕಾರಗಳಿಗೆ ಮುಂದಾಗಿರುವ ಆರ್.ಜಿ.ಯು.ಹೆಚ್.ಎಸ್, ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಐಐಐಟಿ, ಐಐಎಂ, ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ಹ್ಯಾಕಥಾನ್ ಹಮ್ಮಿಕೊಂಡಿದೆ. ರಾಜ್ಯದಲ್ಲಿ 80% ಕೋವಿಡ್ ಸೋಂಕಿತರಿಗೆ ಸೋಂಕಿನ ಲಕ್ಷಣಗಳೇ ಕಂಡುಬಂದಿಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇಂತಹ ಅಂಶಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಉಪಯೋಗವಾಗುವಂತಹ ಔಷಧಿಗಳ ಆವಿಷ್ಕಾರ ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ. ಟೆಲಿ ಮೆಡಿಸಿನ್ ಅನ್ನು ವ್ಯಾಪಕವಾಗಿ ಬಳಸುವ ನಿಟ್ಟಿನಲ್ಲಿ ಟೆಕ್ ಕಂಪನಿಗಳು ಉತ್ತಮ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಿದೆ ಎಂದು ಸಚಿವರು ಹೇಳಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಆರ್.ಜಿ.ಯು.ಹೆಚ್.ಎಸ್ ನ ಕೊಡುಗೆಗಳನ್ನು ಶ್ಲಾಘಿಸಿದ ಸಚಿವರು, ಈ ಸಂಸ್ಥೆಯು ಆನ್‍ಲೈನ್ ಕಾರ್ಯಾಗಾರದ ಮೂಲಕ ರಾಜ್ಯದ 1 ಲಕ್ಷ 75 ಸಾವಿರಕ್ಕೂ ಅಧಿಕ ವೈದ್ಯ ವೃತ್ತಿಪರರಿಗೆ ಕೊರೋನ ಚಿಕಿತ್ಸೆಯ ತರಬೇತಿ ನೀಡಿದೆ. ನೂತನ ಆವಿಷ್ಕಾರಗಳನ್ನು ಹಮ್ಮಿಕೊಂಡು ಕೋವಿಡ್ ವಿರುದ್ಧದ ಸಮರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೊರೋನ ಕುರಿತಾದ ಸಾಮಾನ್ಯ ಜನರಲ್ಲಿ ಇರುವ ಭಯವನ್ನು ಹೋಗಾಲಾಡಿಸಬೇಕಿದೆ. ಶಾಶ್ವತವಾಗಿ ಲಾಕ್ ಡೌನ್ ಅನ್ನು ಹೇರಲು ಸಾಧ್ಯವಿಲ್ಲ. ಸಾರ್ವಜನಿಕರು ಮತ್ತು ಸರ್ಕಾರಗಳು ಜೊತೆಯಾಗಿ ಈ ಹೋರಾಟವನ್ನು ಮುಂದುವರೆಸಬೇಕಿದೆ ಎಂದು ಡಾ.ಸುಧಾಕರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close