ಕರ್ನಾಟಕ ಸುದ್ದಿ

ಬ್ರೇಕಿಂಗ್ ನ್ಯೂಸ್ ; ಕರ್ನಾಟಕದಲ್ಲಿ ಇಂದು ದಾಖಲೆಯ 299 ಕೊರೋನಾ ಕೇಸ್!; ಸೋಂಕಿತರ ಸಂಖ್ಯೆ 3,221ಕ್ಕೆ ಏರಿಕೆ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿನಿತ್ಯ 100ರ ಒಳಗೆ ಇರುತ್ತಿದ್ದ ಕೇಸ್​ಗಳು ಈಗ 200ರ ಗಡಿ ದಾಟುತ್ತಿವೆ. ಇಂದು ರಾಜ್ಯದಲ್ಲಿ ದಾಖಲೆಯ ಕೊರೋನಾ ಕೇಸ್​ಗಳು ಪತ್ತೆಯಾಗಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 299 ಕೊರೋನಾ ಸೋಂಕಿತರ ಪ್ರಕರಣಗಳು ದಾಖಲಾಗಿವೆ! ಕರ್ನಾಟಕದಲ್ಲಿ ಒಂದೇ ದಿನದ ಇಲ್ಲಿಯವರೆಗಿನ ಅತಿಹೆಚ್ಚು ಕೊರೋನಾ ಕೇಸ್​ ಇದಾಗಿದೆ.

ನಿನ್ನೆ ಸಂಜೆಯಿಂದ ಇಂದು ಸಂಜೆಯವರೆಗೆ ಕರ್ನಾಟಕದಲ್ಲಿ 299 ಕೊರೋನಾ ಕೇಸ್​ಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ. ಅಲ್ಲದೆ, ಇಂದು ಒಂದೇ ದಿನ ಇಬ್ಬರು ಸೋಂಕಿತರ ಸಾವಿನ ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇಂದು 4ನೇ ಹಂತದ ಲಾಕ್​ಡೌನ್ ಮುಗಿದು, ನಾಳೆಯಿಂದ 5ನೇ ಹಂತದ ಲಾಕ್​ಡೌನ್ ಶುರುವಾಗಲಿದೆ. ನಾಳೆಯಿಂದ ಬಹುತೇಕ ಆಫೀಸ್​ಗಳು, ದೇವಸ್ಥಾನಗಳು ತೆರೆಯಲಿವೆ. ಈ ನಡುವೆ ಇಂದಿನ ಕೊರೋನಾ ಕೇಸ್​ಗಳ ಪಟ್ಟಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

ಇಂದು ರಾಯಚೂರು ಮತ್ತು ಬೀದರ್​ನಲ್ಲಿ ಇಬ್ಬರು ಕೊರೋನಾ ರೋಗಿಗಳು ಸಾವನ್ನಪ್ಪಿದ ವರದಿಯಾಗಿದೆ. ರಾಯಚೂರಿನ ವ್ಯಕ್ತಿ ಮೇ 21ರಂದು ಮಹಾರಾಷ್ಟ್ರದಿಂದ ವಾಪಾಸಾಗಿದ್ದರು. ಕ್ವಾರಂಟೈನ್​ನಲ್ಲಿದ್ದ ಅವರಿಗೆ ನ್ಯುಮೋನಿಯ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಮೇ 28ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಮೇ 29ರಂದು ಸಾವನ್ನಪ್ಪಿದ್ದರು. ಅವರ ವೈದ್ಯಕೀಯ ವರದಿ ಇಂದು ಬಂದಿದ್ದು, ಕೊರೋನಾ ಇರುವುದು ಖಚಿತವಾಗಿದೆ. ಬೀದರ್​ನ ವ್ಯಕ್ತಿಗೆ ಉಸಿರಾಟದ ತೊಂದರೆ ಮತ್ತು ಜ್ವರ ಕಾಣಿಸಿಕೊಂಡಿತ್ತು. ಮೇ 18ರಂದು ಬೀದರ್​ನ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮೇ 29ರಂದು ಸಾವನ್ನಪ್ಪಿದ್ದರು. ಅವರಿಗೆ ಕೂಡ ಕೊರೋನಾ ಸೋಂಕು ತಗುಲಿದ್ದು ಖಚಿತವಾಗಿದೆ.

ಇಂದು 221 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೂಡ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದವರದ್ದೇ ಸಿಂಹಪಾಲಿದೆ. ಹೊಸ ಕೊರೋನಾ ಕೇಸುಗಳ ಪೈಕಿ ರಾಯಚೂರಿನಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ.

ರಾಯಚೂರಿನಲ್ಲಿ 83, ಯಾದಗಿರಿ- 44, ಬೀದರ್- 33, ಕಲಬುರ್ಗಿ- 28, ಬೆಂಗಳೂರು- 21, ಮಂಡ್ಯ- 13, ಉಡುಪಿ- 10, ಬೆಳಗಾವಿ- 13, ದಕ್ಷಿಣ ಕನ್ನಡ-14, ದಾವಣಗೆರೆ- 6, ವಿಜಯಪುರ- 26, ಉತ್ತರ ಕನ್ನಡ-5, ಬಳ್ಳಾರಿ, ಶಿವಮೊಗ್ಗ, ಕೋಲಾರದಲ್ಲಿ ತಲಾ 1 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಇವರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close